Latest

*ರೈತರಿಗೆ ಕತ್ತೆಗಳನ್ನು ನೀಡಿದ್ದ ಜಿನ್ನಿ ಮಿಲ್ಕ್ ಕಂಪನಿಗೆ ಬೀಗ: ಬಂಡವಾಳ ಹೂಡಿದ್ದ ಜನರು ಕಂಗಾಲು*

ಪ್ರಗತಿವಾಹಿನಿ ಸುದ್ದಿ: ಕತ್ತೆ ಖರೀದಿಸಿ ಹೈನುಗಾರಿಕೆ ಮಾಡಲೆಂದು ರೈತರಿಗೆ ಕತ್ತೆಗಳನ್ನು ನೀಡಿ ಲಕ್ಷ ಲಕ್ಷ ವಂಚಿಸಿದ್ದ ಜಿನ್ನಿ ಮಿಲ್ಕ್ ಕಂಪನಿಗೆ ವಿಜಯನಗರ ಜಿಲ್ಲಾಡಳಿತ ಬೀಗ ಜಡಿದಿದೆ.

ಕತ್ತೆಗೊಂದು ಕಾಲ ಬರುತ್ತೆ ಎಂಬ ಮಾತು ಕೇಳಿದ್ದೆವು. ಅದರಂತೆ ವಿಜಯನಗರ ಜಿಲ್ಲೆಯಾದ್ಯಂತ ಜಿನ್ನಿ ಮಿಲ್ಕ್ ಕಂಪನಿ ಇತ್ತೀಚೆಗೆ ಭಾರಿ ಹೆಸರಾಗಿತ್ತು. ಕತ್ತೆ ಹಾಲಿಗೆ ಜಿಲ್ಲೆಯಲ್ಲಿ ಭಾರಿ ಬೇಡಿಕೆ ಹೆಚ್ಚಾಗಿತ್ತು. ಕಂಪನಿಯಿಂದಲೇ ಕತ್ತೆಗಳನ್ನು ರೈತರಿಗೆ ನೀಡಲಾಗುತ್ತಿತ್ತು. ಕತ್ತೆ ಹೈನುಗಾರಿಕೆ ಉದ್ಯಮ ನಂಬಿದ ರೈತರು ಲಕ್ಷ ಲಕ್ಷ ರೂಪಾಯಿ ಕೊಟ್ಟು ಕತ್ತೆ ಖರೀದಿಸಿದ್ದರು. ಆದರೆ ಕೆಲ ದಿನಗಳಲ್ಲೇ ಕಂಪನಿ ಮಾಲೀಕ ನಾಪತ್ತೆಯಾಗಿದ್ದು, ರೈತರಿಂದ ಹಣ ಪಡೆದ ಕಂಪನಿ ಸಿಬ್ಬಂದಿಯೂ ಎಸ್ಕೇಪ್ ಆಗಿದ್ದಾರೆ.

ಕತ್ತೆ ಹಾಲು ಖರೀದಿಸುವವರು ಇಲ್ಲದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಂಗಾಲಾದ ರೈತರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಅಸಲಿಗೆ ಜಿನ್ನಿ ಮಿಲ್ಕ್ ಕಂಪನಿ ಟ್ರೇಡ್ ಲೈಸನ್ಸ್ ಹೊಂದಿಲ್ಲ ಎಂದು ಜಿಲ್ಲಾಡಳಿತ ಕಂಪನಿಗೆ ಬೀಗ ಜಡಿದಿದೆ. ಹಣ ಕಳೆದುಕೊಂಡ ರೈತರು ತೊಂದರೆಗೆ ಸಿಲುಕಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಳೆದ 6 ತಿಂಗಳ ಹಿಂದೆ ಜಿನ್ನಿ ಮಿಲ್ಕ್ ಕಂಪನಿ ಓಪನ್ ಆಗಿತ್ತು. ಕತ್ತೆಗಳ ಸಾಕಾಣಿಕೆ ಮಾಡಿ ಹೈನುಗಾರಿಕೆಯಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯಿರಿ ಎಂದು ಸ್ಲೋಗನ್ ಹಾಕಿ ರೈತರನ್ನು ಕಂಪನಿಯತ್ತ ಸೆಳೆದು ಹೈನುಗಾರಿಕೆಗೆ ರೈತರಿಗೆ ಕತ್ತೆಗಳನ್ನು ನೀಡಿತ್ತು. ಇದನ್ನು ನಂಬಿದ ರೈತರು ಮೂರು ಲಕ್ಷದವರೆಗೂ ಹಣ ಕೊಟ್ಟು ಮೂರು ಕತ್ತೆ, ಮೂರು ಕತ್ತೆ ಮರಿಗಳನ್ನು ಖರೀದಿ ಮಾಡಿದ್ದರು. ಬಳಿಕ ಜಿನ್ನಿ ಕಂಪನಿಯೇ ಒಂದು ಲೀಟರ್ ಕತ್ತೆ ಹಾಲಿಗೆ 2300 ರೂಪಾಯಿ ಹಣ ನೀಡಿ ರೈತರಿಂದ ಹಾಲು ಖರೀದಿ ಮಾಡುತ್ತಿತ್ತು. ಆದರೆ ಈಗ ಕಂಪನಿ ಟ್ರೇಡ್ ಲೈಸನ್ಸ್ ಹೊಂದಿಲ್ಲ ಎಂದು ಜಿಲ್ಲಾಡಳಿತ ಜಿನ್ನಿ ಮಿಲ್ಕ್ ಕಂಪನಿಗೆ ಬೀಗ ಹಾಕಿದೆ. ಕಚೇರಿಗೆ ಬೀಗ ಹಾಕುತ್ತಿದ್ದಂತೆ ಕಂಪನಿ ಮಾಲಿಕ ಫೋನ್ ಸಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಕಂಪನಿ ಸಿಬ್ಬಂದಿಯೂ ಸಿಗುತ್ತಿಲ್ಲ. ಇದರಿಂದ ಕಂಗಾಲಾಗಿರುವ ರೈತರು ಹೊಸಪೇಟೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಿನ್ನಿ ಕಂಪನಿಯಿಂದ ಕತ್ತೆ ಖರೀದಿಸಿದ್ದ ರಾಜ್ಯದ ವಿವಿಧ ಭಾಗದ ರೈತರು ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡಿದ್ದು, ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button