ಫ್ಲಿಪ್ ಕಾರ್ಟ್, ಅಮೇಜಾನ್ ಮಾದರಿಯಲ್ಲಿ ಜಾಗತಿಕ ಇ – ವಾಣಿಜ್ಯ ಸಂಸ್ಥೆ ಸ್ಥಾಪಿಸಿ: ಜೈನ ಸಮುದಾಯಕ್ಕೆ ಸಿಎಂ ಬೊಮ್ಮಾಯಿ ಸಲಹೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಾಗತಿಕ ವ್ಯಾಪಾರ ವಲಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಜೈನ ಸಮುದಾಯ ಫ್ಲಿಪ್ ಕಾರ್ಟ್, ಅಮೇಜಾನ್ ಮಾದರಿಯಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸರ್ ವೇದಿಕೆಯಡಿ ಜಾಗತಿಕ ಈ ವಾಣಿಜ್ಯ – ವ್ಯಾಪಾರ ಸಂಸ್ಥೆ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ಚಾಮರ ವಜ್ರ ಆವರಣದಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ನಿಂದ ಎರಡು ದಿನಗಳ ಜೈನರ ಜಾಗತಿಕ ಶೃಂಗ ಸಭೆ – ಜಿತೋ ಗ್ರ್ಯಾಂಡ್ ಸಮ್ಮಿಟ್ ಉದ್ಘಾಟಿಸಿ ಮಾತನಾಡಿದರು.
ಜೈನ ಸಮುದಾಯ ವ್ಯಾಪಾರ ವಹಿವಾಟಿನಲ್ಲಿ ವಿಶೇಷ ಪರಿಣಿತಿ ಸಾಧಿಸಿದೆ. ಜಗತ್ತಿನಾದ್ಯಂತ ಅತ್ಯುತ್ತಮ ಸಂಪರ್ಕ ಜಾಲ ಹೊಂದಿದ್ದು, ಇ – ವಾಣಿಜ್ಯ ಮಾರುಕಟ್ಟೆ ಸಂಸ್ಥೆ ಸ್ಥಾಪಿಸಿದರೆ ಅದ್ಭುತ ಯಶಸ್ಸು ಸಾಧಿಸಬಹುದು. ಇದರಿಂದ ಬರುವ ಲಾಭವನ್ನು ಜೀತೋ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.
ಬೇರೆ ಸಮುದಾಯದವರು ವ್ಯಾಪಾರ ಮಾಡಲು ಹಣ ಎಷ್ಟಿದೆ ಎಂದು ನೋಡುತ್ತಾರೆ. ಜೇಬಿನಲ್ಲಿ ಹಣ ಇದ್ದರೆ ಮಾತ್ರ ವ್ಯಾಪಾರ ಮಾಡುತ್ತೇವೆ. ಇಲ್ಲವಾದಲ್ಲಿ ಯಾವುದಾದರೂ ಕೆಲಸ ನೋಡಿಕೊಳ್ಳುತ್ತೇವೆ. ಆದರೆ ಜೈನ ಸಮುದಾಯದವರು ಖಾಲಿ ಕೈಯಲ್ಲಿ ಉದ್ಯಮ, ವ್ಯಾಪಾರ ಆರಂಭಿಸುತ್ತಾರೆ. ಚಾಣಾಕ್ಷತನ, ಬದ್ಧತೆಯಿಂದ ಯಶಸ್ಸು ಸಾಧಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೈನ ಸಮುದಾಯದವರು ಪರವೂರಲ್ಲಿ ನೆಲೆಸಿ ಎಲ್ಲರೊಂದಿಗೆ ಸೌಹಾರ್ದಯುತ ಬಾಂಧವ್ಯ ಬೆಳೆಸಿಕೊಂಡು ತಮ್ಮ ವ್ಯವಹಾರ ನಡೆಸುತ್ತಾರೆ. ಅಲ್ಲಿನ ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆತು ಹೋಗುತ್ತಾರೆ ಎಂದು ಶ್ಲಾಘಿಸಿದರು.
ಆದ್ಯಾತ್ಮದಲ್ಲಿ ಪಾಪ, ಪುಣ್ಯ, ವ್ಯಾಪಾರದಲ್ಲಿ ಲಾಭ ನಷ್ಟ ನೋಡುತ್ತೇವೆ. ಆದರೆ ವಾಸ್ತವವಾಗಿ ವ್ಯಾಪಾರದಲ್ಲಿ ಪಾಪ, ಪುಣ್ಯ ನೋಡಬೇಕು. ಆದ್ಯಾತ್ಮದಲ್ಲಿ ಲಾಭ, ನಷ್ಟ ಲೆಕ್ಕ ಹಾಕಬೇಕು. ಬದುಕಿನಲ್ಲಿ ನೈಸರ್ಗಿಕ ಧರ್ಮ ಪರಿಪಾಲನೆಯಾಗಬೇಕು. ನೈಸರ್ಗಿಕ ಧರ್ಮದ ಪರಿಕಲ್ಪನೆ ಅನುಷ್ಠಾನಗೊಳ್ಳುವ ಯಾವುದಾದರೂ ಧರ್ಮ ಇದ್ದರೆ ಅದು ಜೈನ ಧರ್ಮ ಮಾತ್ರ. ಅಹಿಂಸೆಯೇ ಈ ಧರ್ಮದ ಮೂಲ ತಿರುಳು. ಮಾನವೀಯ ಧರ್ಮಕ್ಕೆ ಜೈನ ಸಮುದಾಯ ಮಾದರಿ ಎಂದು ಹೇಳಿದರು.
ಕರ್ನಾಟಕ ಮತ್ತು ಜೈನ ಧರ್ಮದ ನಡುವೆ ಚಾರಿತ್ರಿಕ ಬಾಂಧವ್ಯವಿದೆ. ಮೂರನೇ ಶತಮಾನದ ಕವಿ ರನ್ನ ಮತ್ತಿತರರು ಜೈನ ಧರ್ಮಕ್ಕೆ ಸೇರಿದವರು. ಬಿಹಾರದಿಂದ ಕರ್ನಾಟಕಕ್ಕೆ ಬಂದ ಬಾಹುಬಲಿ ಶ್ರವಣಬೆಳಗೊಳದಲ್ಲಿ ನೆಲೆ ನಿಂತು ಮೋಕ್ಷ ಕಂಡ. ಹೀಗಾಗಿ ಕರ್ನಾಟಕ ಮೋಕ್ಷ ಭೂಮಿಯೂ ಆಗಿದೆ ಎಂದರು.
ಜೀತೋ ಸಂಘಟನೆಯಿಂದ ಕರ್ನಾಟಕದಲ್ಲಿ ವೈಜ್ಞಾನಿಕ ತಳಹದಿಯ ಶಿಕ್ಷಣ ಸಂಸ್ಥೆ ಆರಂಭಿಸಲು ತೀರ್ಮಾನಿಸಿರುವುದು ಉತ್ತಮ ಬೆಳವಣಿಗೆ, ಪದ್ಮಶ್ರೀ ಆಚಾರ್ಯ ಚಂದನಶ್ರೀ ಅವರ ಜತೆ ಚರ್ಚಿಸಿ ಪ್ರಸ್ತಾವನೆ ಸೂಕ್ತ ಸಲ್ಲಿಸಿದರೆ ಸರ್ಕಾರ ಅನುಮತಿ ನೀಡಲಿದೆ. ಜೈನ ಸಮುದಾಯದ ಯಾವುದೇ ರೀತಿಯ ರಚನಾತ್ಮಕ ಕೆಲಸಗಳಿಗೆ ಸರ್ಕಾರ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಅವರು ವ್ಯಾಪಾರ ಮತ್ತು ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಈ ಶೃಂಗ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಆಚಾರ್ಯ ಚಂದನಶ್ರೀ ಪಾಲ್ಗೊಂಡರು.
ಜೀತೋ ಸಂಸ್ಥೆಯ ಅಪೆಕ್ಸ್ ಅಧ್ಯಕ್ಷ ಸುರೇಶ್ ಮುಥ, ಅಫೆಕ್ಸ್ ಉಪಾಧ್ಯಕ್ಷ ಪಾರಸ್ ಜೈನ್, ಜಿತೋ ಬೆಂಗಳೂರು ಘಟಕದ ಅಧ್ಯಕ್ಷ ಅಶೋಕ್ ನಗೋರಿ, ಜೀತೋ ಮುಖ‍್ಯ ಕಾರ್ಯದರ್ಶಿ ಮಹೇಶ್ ನಹಾರ್, ಸಮಾಜ್ ಸೇವಕ ಮಹೇಂದ್ರ ಸಿಂಘಿ, ಮಾಧ್ಯಮ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಬೋಹ್ರಾ ಮತ್ತಿತರರು ಉಪಸ್ಥಿತರಿದ್ದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೂಲ ನಿಮಗೆ ತಿಳಿದಿಲ್ಲವೇ?; ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ