ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ಉದ್ಯೋಗ ಮೇಳದಲ್ಲಿ ಸುಮಾರು 2 ರಿಂದ 3 ಸಾವಿರ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ರಾಜ್ಯದ ಜನರ ಭವಿಷ್ಯ ಬದುಕು ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಉದ್ಯಮಭಾಗದಲ್ಲಿನ ಗೊಗಟೆ ತಾಂತ್ರಿಕ ಮಹಾವಿದ್ಯಲಾಯದಲ್ಲಿ ಗುರುವಾರ (ಡಿ.23) ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಕೇವಲ ಪುರುಷರು ಮಾತ್ರ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿದ್ದು, ಕಾಲ ಬದಲಾದಂತೆ ಇಂದು ಮಹಿಳೆಯರು ಕೂಡ ಪುರುಷರ ಸರಿಸಮಾನವಾಗಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವದರ ಮೂಲಕ ಆರ್ಥಿಕವಾಗಿ ಸ್ವಾವಲಂಭಿಗಳಾಗುವ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಹೇಳಿದರು.
ಕೌಶಲ್ಯವು ಯಾರ ಸ್ವತ್ತವು ಅಲ್ಲ ಯುವಕ ಯುವತಿಯರಲ್ಲಿ ಅಡಗಿರುವ ಕೌಶಲ್ಯವನ್ನು ಗುರುತಿಸಿ ಅವರ ಕೌಶಲ್ಯಕ್ಕನುಗುಣವಾಗಿ ಉದ್ಯೋಗ ಒದಗಿಸುವದು ಈ ಉದ್ಯೋಗ ಮೇಳದ ಮುಖ್ಯ ಉದ್ದೇಶವಾಗಿದೆ.
ಬೆಳಗಾವಿಯಲ್ಲಿ ಜರಗುತ್ತಿರುವ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದಂತಹ ಪ್ರತಿಷ್ಠಿತ ಕಂಪನಿಗಳು ಈ ಭಾಗದ ಯುವಕ ಯುವತಿಯರಲ್ಲಿನ ಕೌಶಲ್ಯಕ್ಕನುಗುಣವಾದ ಉದ್ಯೋಗ ಒದಗಿಸುತ್ತಿರುವುದು ಪ್ರಶಂಸನೀಯವಾದಂತಹ ಕಾರ್ಯವಾಗಿದೆ.
ಕೋವಿಡ್ ಕಾರಣದಿಂದ ಈ ವರೆಗೆ ಯಾವುದೇ ಉದ್ಯೋಗ ಮೇಳ ನಡೆಸಲು ಸಾಧ್ಯವಾಗಿಲ್ಲ ಗ್ರಾಮೀಣ ಅಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ಗ್ರಾಮದ ಹಲವು ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ.
2017 ರಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಾರಂಭಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೌಶಲ್ಯ ತರಬೇತಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದರು.
ಗಡಿ ಜಿಲ್ಲೆಯ ಸ್ಥಳೀಯ ಎಲ್ಲ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸದಾವಕಾಶ ಇದಾಗಿದ್ದು, ಉತ್ತಮ ಸಂಸ್ಥೆಗಳ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ಇಲಾಖೆಯ ವತಿಯಿಂದ ಯುವಕರ ಭ್ಯವಿಷ ರೂಪಿಸಲು ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಹೆಚ್ಚು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ,ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಅಶ್ವತ್ಥನಾರಾಯಣ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಸರಕಾರವು ದಿಟ್ಟ ಹೆಜ್ಜೆಯನ್ನಿಟ್ಟು ಪ್ರತಿಯೊಬ್ಬರಿಗೂ ಉದ್ಯೋಗ ಅವಕಾಶ ನೀಡಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳುಬೇಕು. ರಾಜ್ಯದಲ್ಲಿನ ಏಳು ತಾಂತ್ರಿಕ ವಿಶ್ವವಿದ್ಯಾಲಯಗಳನ್ನು ಐ.ಐ.ಟಿ ರೀತಿ ಮೇಲ್ದರ್ಜೆಗೆರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಅಭಯ ಪಾಟೀಲ ಮಾತನಾಡಿ ಬೆಳಗಾವಿ ರಾಜ್ಯದ ಗಡಿ ಜಿಲ್ಲೆಯಾಗಿದೆ. ಬೆಳಗಾವಿಯು ಕೌಶಲ್ಯಯುತ ನಾಡಾಗಿದ್ದು ಇಲ್ಲಿನ ಯುವಕ ಯುವತಿಯರಿಗೆ ಹೆಚ್ಚಿನ ಉದ್ಯೋಗವಕಾಶಗಳ ಸೃಷ್ಠಿಗಾಗಿ ಹೆಚ್ಚಿನ ಕೈಗಾರಿಕೆಗಳು ಬರುವಂತಾಗಬೇಕು. ಅಲ್ಲದೇ ಕೈಗಾರಿಕೆಗಳ ಸ್ಥಾಪನೆಗಾಗಿ ಬೇಕಾದಂತಹ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವದು ಎಂದು ತಿಳಿಸಿದರು.
ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಇ.ವಿ.ರಮಣರೆಡ್ಡಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಕೆ ಆಯುಕ್ತರಾದ ಶ್ರೀಮತಿ ಕೆ.ಜ್ಯೋತಿ, ಐಟಿಬಿಟಿ ಇಲಾಖೆ ನಿರ್ದೇಶಕರಾದ ಶ್ರೀಮತಿ ಮೀನಾ ನಾಗರಾಜ್, ಕರ್ನಾಟಕ ಕೌಸಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಪಕ ನಿರ್ದೇಶಕ ಅರ್ಶವಿನ ಡಿ.ಗೌಡ, ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಚೇರಮನ್ ರಾಜೇಂದ್ರ ಬೆಳಗಾಂವಕರ, ಗಣ್ಯರು, ವಿವಿಧ ಉದ್ಯೊಗಾಂಕ್ಷಿಗಳು ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೇಳದಲ್ಲಿ 57 ಕಂಪನಿಗಳು ನೇರವಾಗಿ ಪಾಲ್ಗೊಂಡಿದ್ದು, ಇವುಗಳಿಗೆಲ್ಲ ಪ್ರತ್ಯೇಕ ಕೌಂಟರ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು ಯಾವುದೇ ಗೊಂದಲವಿಲ್ಲದೆ ತಮ್ಮನ್ನು ಸಂದರ್ಶನಕ್ಕೆ ಆಹ್ವಾನಿಸಿರುವ ಕಂಪನಿಗಳ ಕೌಂಟರುಗಳನ್ನು ತಲುಪುತ್ತಿದ್ದರು. ಮೇಳದಲ್ಲಿ ಎಚ್.ಪಿ., ಓಲಾ, ಎಚ್.ಸಿ.ಎಲ್., ವಿಪ್ರೊ, ಬೈಜೂಸ್, ನಾರಾಯಣ ಗ್ರೂಪ್, ಟಾಟಾ ಬಿಜಿನೆಸ್ ಹಬ್ ಲಿ., ಟೊಯೊಟಾ ಮುಂತಾದ ಹೆಸರಾಂತ ಕಂಪನಿಗಳು ಭಾಗವಹಿಸಿದ್ದವು. ಇದಲ್ಲದೆ, 14 ಕಂಪನಿಗಳು ವರ್ಚುಯಲ್ ಆಗಿ ಪಾಲ್ಗೊಂಡಿದ್ದವು.
ಮತಾಂತರ ನಿಷೇಧ ವಿಧೇಯಕ ಅಂಗೀಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ