*ಭಾರತವನ್ನು ಆಳಿದ ದೇಶಗಳಿಗೆ ತನ್ನ ಪ್ರಗತಿಯ ಮೂಲಕ ಭಾರತ ತಿರುಗುಬಾಣ ನೀಡುತ್ತಿದೆ; ಡಾ. ಮಹಾಂತ ಸ್ವಾಮೀಜಿ*
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಕಳೆದ 50 ವರ್ಷಗಳಲ್ಲಿ ಭಾರತ ಬದಲಾಗಿದೆ. ಭಾರತ ಹಾವಾಡಿಗರ, ಬಡವರ ದೇಶ ಎಂದು ಹೀಯಾಳಿಸುತ್ತಿರುವ ಇಂಗ್ಲೆಂಡ್ ದೇಶದ ಪ್ರಧಾನಿ ಭಾರತದ ಮೂಲದವರಾಗಿದ್ದು, ಭಾರತವನ್ನು ಆಳಿದ ದೇಶಗಳು ಮುಂಬರುವ ದಿನಗಳಲ್ಲಿ ಭಾರತದಿಂದಲೇ ಆಳಿಸಿಕೊಳ್ಳುತ್ತವೆ” ಎಂದು ಶೇಗುಣಶಿಯ ವಿರಕ್ತಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಯಕ್ಸಂಬಾ ಪಟ್ಟಣದ ನಣದಿ ಕ್ಯಾಂಪಸ್ ನಲ್ಲಿ ಜೊಲ್ಲೆ ಗ್ರುಪ್ ಡಿ 27 ರಂದು ಬುಧವಾರ ಸಂಜೆ ಆಯೋಜಿಸಿದ ಪ್ರೇರಣಾ ಉತ್ಸವದ ಧಾರ್ಮಿಕ ಚಿಂತನಾ ಗೋಷ್ಠಿಯನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, “ರಾಜಕೀಯವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ ವಿಶ್ವದಲ್ಲಿ ಭಾರತ ಬಲಿಷ್ಠವಾಗುತ್ತಿದೆ. ಭಾರತವನ್ನು ಆಳಿದ ದೇಶಗಳಿಗೆ ತನ್ನ ಪ್ರಗತಿಯ ಮೂಲಕ ಭಾರತ ತಿರುಗುಬಾಣ ಹೂಡುವ ಕಾಲ ದೂರ ಉಳಿದಿಲ್ಲ” ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅಥಣಿ ತಾಲ್ಲೂಕಿನ ಜನವಾಡದ ಮಲ್ಲಿಕಾರ್ಜುನ ದೇವರು ಮಾತನಾಡಿ, “ಜೊಲ್ಲೆ ಕುಟುಂಬಕ್ಕೆ ಪ್ರೇರಣೆಯಾಗಿರುವ ಜ್ಯೋತಿಪ್ರಸಾದ ಜೊಲ್ಲೆ ಅವರ ಜನ್ಮದಿನವನ್ನು “ಪ್ರೇರಣಾ ಉತ್ಸವ” ಎಂದು ಆಚರಿಸುವ ಮೂಲಕ ಬುದ್ಧಿಮಾಂಧ್ಯ ಮಕ್ಕಳನ್ನೂ ಕೂಡ ಜೊಲ್ಲೆ ದಂಪತಿಗಳು ಎಷ್ಟೊಂದು ಪ್ರೀತಿಸುತ್ತಾರೆ ಎಂಬುದಕ್ಕೆ ನಿದರ್ಶನವಾಗಿದೆ”ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಮಾತನಾಡಿ, “ಜೊಲ್ಲೆ ಗ್ರುಪ್ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆಯನ್ನು ಮಾಡುವುದಕ್ಕೆ ತನ್ನ ಪುತ್ರ ಜ್ಯೋತಿಪ್ರಸಾದ ಪ್ರೇರಣೆಯಾಗಿದ್ದು, ಈ ಕಾರಣದಿಂದಾಗಿಯೇ ಇದೀಗ ತಾನು ವಿಶೇಷ ಓಲಂಪಿಕ್ಸ್ ಇಂಡಿಯಾ ಸಂಸ್ಥೆಯ ಕರ್ನಾಟಕ ರಾಜ್ಯದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವುದು ತೃಪ್ತಿ ತಂದಿದೆ. ವಿಕಲಚೇತನ ಮಕ್ಕಳ ಕುರಿತು ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ರಾಜ್ಯದಲ್ಲಿ ನಿಭಾಯಿಸುವ ಹೊಣೆಗಾರಿಕೆ ತಮ್ಮ ಮೇಲೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿಯ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, “ಜೊಲ್ಲೆ ಗ್ರುಪ್ ಹತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಸಹಸ್ರಾರು ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದು, ಅಲ್ಲದೇ ಬೀರೇಶ್ವರ ಸಂಸ್ಥೆಯ ಮೂಲಕ ಆರ್ಥಿಕ ಅನುಕೂಲತೆಯನ್ನು ಈ ಭಾಗದ ಜನತೆಗೆ ಮಾಡಿಕೊಡುತ್ತಿದೆ. ಹೀಗಾಗಿ ಅತೀ ಕಡಿಮೆ ಅವಧಿಯಲ್ಲಿ ಬೀರೇಶ್ವರ ಸಂಸ್ಥೆಯು ತನ್ನ ಶಾಖೆಗಳನ್ನು ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ವಿಸ್ತರಣೆ ಮಾಡಿದ್ದು ಪ್ರಗತಿಯ ಸಂಕೇತವಾಗಿದೆ” ಎಂದರು.
ಇದೇ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆ, ಮಗ್ಗಿ ಕಂಠಪಾಠ ಸ್ಪರ್ಧೆ, ನೃತ್ಯ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು.
ವೇದಿಕೆಯ ಮೇಲೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಶೇಷ ಓಲಂಪಿಕ್ ಭಾರತದ ಪ್ರಾದೇಶಿಕ ನಿರ್ದೇಶಕ ಅಮರೇಂದರ್, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಬೀರೇಶ್ವರ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ ಸೇರಿದಂತೆ ಜೊಲ್ಲೆ ಗ್ರುಪ್ ನ ವಿವಿಧ ಅಂಗ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಯುವ ನಾಯಕ ಬಸವಪ್ರಸಾದ ಜೊಲ್ಲೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ