ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತೀಯ ಜನತಾ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದ ಜೆ.ಪಿ ನಡ್ಡಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಹಾಲಿ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ. ನಡ್ಡಾ ಅವರಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಧಿಕಾರ ಹಸ್ತಾಂತರ ಮಾಡಿದರು.
ದೆಹಲಿ ಬಿಜೆಪಿ ಮುಖ್ಯ ಕಛೇರಿಯಲ್ಲಿ ಇಂದು ಪಕ್ಷದ ರಾಷ್ಟ್ರಾಧ್ಯಕ್ಷ ಆಯ್ಕೆ ಸಂಬಂಧ ಚುನಾವಣೆ ನಡೆಯಿತು. ಬಿಜೆಪಿ ಹಿರಿಯ ನಾಯಕ ರಾಧಾ ಮೋಹನ್ ಸಿಂಗ್ ಅವರು ಅಧ್ಯಕ್ಷ ಆಯ್ಕೆ ಚುನಾವಣೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಪಕ್ಷದ 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಘಟಕಗಳಲ್ಲಿ 21ರಲ್ಲಿ ಪಕ್ಷದ ಆಂತರಿಕ ಮತದಾನದ ಪ್ರಕ್ರಿಯೆ ಪೂರ್ಣಗೊಂಡ ನಂತರ ಜೆ ಪಿ ನಡ್ಡಾ ಅವರ ಹೆಸರನ್ನು ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಿಮಾಚಲಪ್ರದೇಶ ಮೂಲದ ಬ್ರಾಹ್ಮಣ ಸಮುದಾಯದ ಜೆ.ಪಿ. ನಡ್ಡಾ(58) ಅವರು ಹಿಂದಿನ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆರ್ ಎಸ್ ಎಸ್ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ನಡ್ಡಾ ಸಂಘಟನಾ ಚತರರೂ ಆಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜವಾಬ್ದಾರಿಯನ್ನು ನಡ್ಡಾ ಸಮರ್ಥವಾಗಿ ನಿಭಾಯಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ