
ತುಮಕೂರು: ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣರನ್ನು ವಜಾಗೊಳಿಸಿರುವುದನ್ನು ಖಂಡಿಸಿ ಬೆಂಬಲಿಗರು, ಅಭಿಮಾನಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣ ಬಂದ್ ಗೆ ಕರೆ ನೀಡಿರುವ ರಾಜಣ್ಣ ಬೆಂಬಲಿಗರು, ಪ್ರತಿಭಟನೆ ನಡೆಸಿದ್ದಾರೆ. ರಾಜಣ್ಣಾ ವಜಾ ಹಿಂಪಡೆಯಬೇಕು. ಮತ್ತೆ ಅವರನ್ನು ಸಚಿವರನ್ನಾಗಿ ಮುಂದುವರೆಸುವಂತೆ ಆಗ್ರಹಿಸಿದ್ದಾರೆ.
ಮಧುಗಿರಿ ಬಸ್ ನಿಲ್ದಾಣದ ಸರ್ಕಲ್ ನಲ್ಲಿ ಜಮಾವಣೆಗೊಂಡಿರುವ ರಾಜಣ್ಣ ಬೆಂಬಲಿಗರು, ಟೈರ್ ಗೆ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಇದೇ ವೇಳೆ ಪಾದಯಾತ್ರೆ ಮೂಲಕ ಎಸಿ ಕಚೇರಿವರೆಗೆ ಅಭಿಮಾನಿಗಳು ಸಾಗಿ ಮೆರವಣಿಗೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಗೇಟ್ ರಸ್ತೆಯಲ್ಲಿ ಪ್ರತಿಭಟನಾಕಾರರು ಧರಣಿ ನಡೆಸಿದ್ದಾರೆ. ಮತ್ತೊಂದೆಡೆ ಎಂಜಿ.ಕ್ರೀಡಾಂಗಣ ಎಂ.ಎನ್.ಕೆ ಸಮುದಾಯ ಭವನದಲ್ಲಿ ಜಮಾವಣೆಗೊಂಡ ರಾಜಣ್ಣ ಬೆಂಬಲಿಗರು ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ನಡುವೆ ರಾಜಣ್ಣ ಅಭಿಮಾನಿ ಶಿವಲಿಂಗ ಎಂಬುವವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ತಡೆದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.