Latest

ಕೆ.ಆರ್.ಎಸ್ ಬಿರುಕು ನಿಜ: 67 ಕೋಟಿ ರೂ ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದ ಸುಮಲತಾ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೆ.ಆರ್.ಎಸ್. ಡ್ಯಾಂ ಬಿರುಕು ವಿವಾದ ಮುಂದುವರೆದಿದ್ದು, ಇದೀಗ ಡ್ಯಾಂ ಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿರುವ ಸಂಸದೆ ಸುಮಲತಾ, ಬಿರುಕು ಬಿಟ್ಟಿದ್ದಕ್ಕೆ ದುರಸ್ತಿ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.

ಕೆ.ಆರ್.ಎಸ್ ಡ್ಯಾಂ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ, ಕೆ.ಆರ್.ಎಸ್ ವಿಚಾರದಲ್ಲಿ ನಾನು ಧ್ವನಿ ಎತ್ತಿದ್ದಕ್ಕೆ ಇಂದು ವಾಸ್ತವಾಂಶ ಗೊತ್ತಾಗಿದೆ. ಡ್ಯಾಂ ಸುತ್ತಮುತ್ತಲಿನಲ್ಲಿ ಅಕ್ರಮ ಗಣಿಗಾರಿಕೆ, ಸ್ಟೋನ್ ಬ್ಲಾಸ್ಟಿಂಗ್ ನಿಂದಾಗಿ ಜಲಾಶಯಕ್ಕೆ ಅಪಾಯವಿದೆ. ಸಣ್ಣಪುಟ್ಟ ಬಿರುಕು ಕಾಣಿಸಿಕೊಂಡಿದ್ದರಿಂದಲೇ ದುರಸ್ತಿ ನಡೆಸಲಾಗಿದೆ. 67 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಗಣಿಗಾರಿಕೆಯಿಂದ ಜಲಾಶಯದಲ್ಲಿ ಬಿರುಕು ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕೆ ನನ್ನ ಹೇಳಿಕೆಗಳನ್ನು ಬೇರೆ ಬೇರೆ ರೀತಿ ಅರ್ಥೈಸಲಾಗುತ್ತಿದೆ. ಕೆ.ಆರ್.ಎಸ್. ನಂತಹ ಪಾರಂಪರಿಕ ಆಸ್ತಿ, ಜೀವನಾಡಿಗೆ ಅಪಾಯ ಎದುರಾಗುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸಧ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಾತ್ಸಾರ ಮಾಡಿ, ಸುರಕ್ಷಿತವಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನಿಡುವುದು ಎಷ್ಟು ಸರಿ? ಮುಂದಿನ ದಿನಗಳಲ್ಲಿ ಡ್ಯಾಂಗೆ ಸಮಸ್ಯೆಯಾಗಿ ಅಪಾಯ ಸಂಭವಿಸಿದರೆ ಯಾರು ಹೊಣೆ? ನನಗಿರುವ ಮಾಹಿತಿ, ದಾಖಲೆಗಳನ್ನು ಆಧರಿಸಿ ಆತಂಕ ವ್ಯಕ್ತಪಡಿಸಿದ್ದಕ್ಕೆ ನನ್ನ ಧ್ವನಿಯನ್ನೇ ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ. ಮಹಾರಾಜರ ತ್ಯಾಗ, ದೂರಾಲೋಚನೆಯ ಫಲವಾಗಿ ಕೆ.ಆರ್.ಎಸ್. ನಿರ್ಮಾಣವಾಗಿದೆ. ಜಲಾಶಯದ ರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕೆ.ಆರ್.ಎಸ್. ವಿಚಾರದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಬೆಕು. 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು. ಈ ಬಗ್ಗೆ ಗಣಿ ಸಚಿವರ ಗಮನಕ್ಕೂ ತರುತ್ತೇನೆ. ಈಗಲೇ ಎಚ್ಚತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ ಎಂದು ಹೇಳಿದರು.

ನಾನು ಹಾಗೇ ಹೇಳಿಯೇ ಇಲ್ಲ ಎಂದ ಸಂಸದೆ ಸುಮಲತಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button