Kannada NewsKarnataka NewsLatestPolitics

*ಸಂಧಾನಕ್ಕೆ ಬಂದ ಕೇಂದ್ರ ನಾಯಕರನ್ನು ಮನೆಯಲ್ಲಿ ಕೂರಿಸಿ ಹೊರ ನಡೆದ ಕೆ.ಎಸ್.ಈಶ್ವರಪ್ಪ*

ಬಂಡಾಯದಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟನೆ


ಪ್ರಗತಿವಾಹಿನಿ ಸುದ್ದಿ: ಪುತ್ರ ಕಾಂತೇಶ್ ಗೆ ಲೋಕಸಭಾ ಚುನಾವಣೆ ಟಿಕೆಟ್ ಮಿಸ್ಸಾಗಿದ್ದಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ತಾವೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಬಿಜೆಪಿ ವಿರುದ್ಧ ಬಂಡಾಯವೆದ್ದಿರುವ ಈಶ್ವರಪ್ಪ ಮನವೊಲಿಕೆಗೆ ಯತ್ನಿಸಿ ರಾಜ್ಯ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ಯಾರು ಏನೇ ಹೇಳಿದರು ಪಕ್ಷ ಉಳಿವಿಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಖಚಿತ. ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಈಶ್ವರಪ್ಪ ಸ್ಪಷ್ಟ ಪಡಿಸಿದ್ದಾರೆ.

ಈಶ್ವರಪ್ಪ ಮನವೊಲಿಕೆಗೆ ರಾಜ್ಯ ನಾಯಕರು ವಿಫಲರಾದ ಬೆನ್ನಲ್ಲೇ ಕೇಂದ್ರ ನಾಯಕರು ಸಂಧಾನಕ್ಕೆ ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಬಿಜೆಪಿ ಕೇಂದ್ರ ನಾಯಕರ ತಂಡ ಆಗಮಿಸಿದೆ. ಆದರೆ ಈಶ್ವರಪ್ಪ ಕೇಂದ್ರ ನಾಯಕರೊಂದಿಗೆ ಚರ್ಚಿಸದೇ ಮನೆಯಿಂದ ಹೊರ ನಡೆದಿದ್ದಾರೆ.

ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈಶ್ವರಪ್ಪ ಎಲ್ಲಾ ನಾಯಕರನ್ನು ತಮ್ಮ ಮನೆಯಲ್ಲಿ ಕೂರಿಸಿ ತಾವು ಮನೆಯಿಂದ ಹೊರ ನಡೆದಿದ್ದಾರೆ. ಅರ್ಧಗಂಟೆ ಮೇಲಾದರೂ ಈಶ್ವರಪ್ಪ ಸುಳಿವಿಲ್ಲ.

ಮನೆಯಿಂದ ಹೊರ ಹೋದ ಈಶ್ವರಪ್ಪ ದೇವಸ್ಥಾನದಲ್ಲಿ ನಡೆದ ಹೋಮ, ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಕಾದು ಕಾದು ಸುಸ್ತಾದ ಕೇಂದ್ರ ನಾಯಕರ ತಂಡ ಈಶ್ವರಪ್ಪ ಮನೆಯಿಂದ ವಾಪಾಸ್ ಆಗಿದೆ.

Related Articles

Back to top button