ಪ್ರಗತಿವಾಹಿನಿ ಸುದ್ದಿ; ಮೈಸೂರು: ನನಗೆ ಸಿಎಂ ಯಡಿಯೂರಪ್ಪನವರ ಜೊತೆ ಯಾವುದೇ ವೈಯಕ್ತಿಕ ಮನಸ್ತಾಪವಾಗಲಿ, ಧ್ವೇಷವಾಗಲಿ ಇಲ್ಲ. ಅವರು ಕೆಜೆಪಿ ಕಟ್ಟುವಾಗಲೂ ನಾನು ಬೇಡವೆಂದಿದ್ದೆ. ಆದರೂ ಕೇಳದೇ ಕೆಜೆಪಿ ಕಟ್ಟಿದ್ದರು. ಆಗಲೂ ನಾವು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೆವು. ಆದರೆ ನನ್ನ ಗಮಮನಕ್ಕೆ ತರದೇ ನನ್ನ ಇಲಾಖೆ ಹಣ ವರ್ಗಾವಣೆ ಮಾಡಿರುವುದು ತಪ್ಪು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿ ಮತ್ತೆ ಬಿಜೆಪಿಗೆ ಬಂದ ವಿಚಾರವನ್ನು ಪ್ರಸ್ತಾಪಿಸಿದರು. ನಾನು ಬಿಜೆಪಿಗೆ ನಿಷ್ಠಾವಂತ ಕಾರ್ಯಕರ್ತ. ಬಿಎಸ್ ವೈ ಬೇರೆ ಪಕ್ಷಕ್ಕೆ ಹೋಗಿ ಕೆಜೆಪಿ ಕಟ್ಟಿ ವಾಪಸ್ ಬಿಜೆಪಿಗೆ ಬಂದವರು. ನಾನು ಮೊದಲಿನಿಂದಲೂ ಬಿಜೆಪಿಯಲ್ಲೇ ಇದ್ದೇನೆ. ನನ್ನ ಪಕ್ಷ ನಿಷ್ಠೆ ಯಾವತ್ತೂ ಬದಲಾಗಿಲ್ಲ. ಕೆಲವರ ಮಾತು ಕೇಳಿ ಅಂದು ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು. ಯಡಿಯೂರಪ್ಪ ಬೇಗನೆ ಎಲ್ಲವನ್ನೂ ನಂಬಿಬಿಡುತ್ತಾರೆ. ಈಗಲೂ ಕೆಲವರ ಮಾತು ಕೇಳಿ ಅನುದಾನ ಬಿಡುಗಡೆ ಮಾಡಿರಬಹುದು ಆದರೆ ಸಚಿವರ ಗಮನಕ್ಕೆ ತರದೇ ಅವರ ಇಲಾಖೆ ಅನುದಾನ ವರ್ಗಾವಣೆ ಸರಿಯಲ್ಲ ಎಂದರು.
ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾಗ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದರು. ಈ ಜನ್ಮದಲ್ಲಿ ಮತ್ತೆ ಬಿಜೆಪಿಗೆ ಬರಲ್ಲ ಅಂದಿದ್ರು. ನನ್ನ ಭಾಷೆಯಲ್ಲಿ ನಾನು ಅಂದು ಉತ್ತರವನ್ನೂ ನೀಡಿದ್ದೆ. ನಮ್ಮಿಬ್ಬರ ನಡುವೆ ಸಂಘರ್ಷ ಇಲ್ಲ ಎಂದು ನಾನು ಹೇಳಲ್ಲ. ಆದರೆ ಪಕ್ಷ, ರಾಜ್ಯದ ವಿಚಾರದಲ್ಲಿ ನಾವು ಹೊಂದಿಕೊಂಡು ಹೋಗುತ್ತಿದ್ದೇವೆ. ಅವರ ಹೋರಾಟ, ಪಕ್ಷ ಸಂಘಟನೆ, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ರೀತಿ ಅವರೊಬ್ಬ ದೊಡ್ಡ ವ್ಯಕ್ತಿ ಅದಲ್ಲಿ ಎರಡು ಮಾತಿಲ್ಲ, ಆದರೆ ಅನುದಾನದ ವಿಚಾರಕ್ಕೆ ಬಂದಾಗ ನನ್ನ ಇಲಾಖೆ ಅನುದಾನ ಹಂಚಿಕೆ ನನ್ನ ಅಧಿಕಾರ. ನಾನು ಇಲಾಖೆ ಪೋಸ್ಟ್ ಮ್ಯಾನ್ ಅಲ್ಲ. ಎಲ್ಲದಕ್ಕೂ ಒಂದು ನಿಯಮವನ್ನು ತರಬೇಕು ಎಂದು ಹೇಳಿದರು.
ರಾಜೀನಾಮೆ ಕೇಳಿದ್ದಾರೆ. ಖಾತೆ ಬದಲಾವಣೆ ಬಗ್ಗೆಯೂ ಚರ್ಚೆ ನಡೆದಿದೆ. ನಾಲ್ವರು ಸಚಿವರು, ನಾಲ್ವರು ಶಾಸಕರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ಯಾವುದಕ್ಕೂ ನಾನು ಬಗ್ಗುವ ವ್ಯಕ್ತಿಯಲ್ಲ. ನನ್ನ ನಿರ್ಧಾರ ನ್ಯಾಯಬದ್ಧವಾಗಿದೆ ಎಂದು ತಿಳಿಸಿದರು.
ಸಿಎಂ ವಿರುದ್ಧ ದೂರು: ಸಚಿವ ಈಶ್ವರಪ್ಪ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ