
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವರು ಎಲ್ಲಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನೆಗೆ ತಿರುಗೇಟು ನೀಡಿರುವ ಸಚಿವ ಕೆ.ಎಸ್ ಈಶ್ವರಪ್ಪ, ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡಲ್ಲ ಅಂತ ಹೇಳಿ ಈಗ ಡಿಕೆಶಿ ರಾಜಕೀಯ ಮಾಡುತ್ತಿದ್ದಾರೆ. ಬೇಕಿದ್ದರೆ ಸ್ವತಃ ಅವರೇ ಬಂದು ನಾನು ಎಲ್ಲಿ ಮಲಗಿದ್ದೇನೆ ಎಂದು ನೋಡಲಿ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ವಿರೋಧ ಪಕ್ಷದ ನಾಯಕರಾಗಿ ಡಿಕೆಶಿ ನನಗೇ ಕರೆ ಮಾಡಿ ಕೇಳಬಹುದಿತ್ತು. ಆದರೆ, ಅದನ್ನು ಬಿಟ್ಟು ಅವರು ರಾಜಕೀಯ ಮಾಡುತ್ತಿದ್ದಾರೆ. ಡಿಕೆಶಿ ಪ್ರಸ್ತಾಪ ಮಾಡಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಜನರ ಸಮಸ್ಯೆಗಳಿಗೆ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದರು.
ನಾನೇನು ಸುಮ್ಮನೆ ಕುಳಿತಿಲ್ಲ. ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ನಮ್ಮ ಕೆಲಸ ಮತ್ತು ಕರ್ತವ್ಯವನ್ನು ನಾವು ಮಾಡ್ತಿದ್ದೇವೆ. ನಾನು ಎಲ್ಲಾದ್ರೂ ಮಲಗಿ ಬಂದಿದ್ರೆ ಇಲ್ಯಾಕೆ ಬಂದು ಸುದ್ದಿಗೋಷ್ಟಿ ಮಾಡ್ತಿದ್ದೆ? ಬೇಕಿದ್ದರೆ ನಾನು ಎಲ್ಲಿ ಮಲಗಿದ್ದೇನೆ ಎಂದು ಸ್ವತಃ ಡಿಕೆಶಿ ಅವರೇ ಬಂದು ನೋಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ