ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ನನಗೆ ಯಾವುದೇ ಒತ್ತಡವೂ ಇರಲಿಲ್ಲ, ನಾನು ಸ್ವ ಇಚ್ಛೆಯಿಂದಲೇ ರಾಜಕೀಯ ನಿವೃತ್ತಿ ನಿರ್ಧಾರ ಮಾಡಿ ಇಂದು ಘೋಷಣೆ ಮಾಡಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ರಾಜಕೀಯ ನಿವೃತ್ತಿ ಘೋಷಣೆ ಬಳಿಕ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ನಾನು ಈ ಹಿಂದೆಯೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ನಾಯಕರಿಗೆ ಹೇಳಿದ್ದೆ. ನಾನು ಈಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ನಿವೃತ್ತಿ ಪಡೆಯುತ್ತೇನೆ. ಪಕ್ಷ ಸಂಘಟನೆಯಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದ್ದೆ. ಆದರೆ ಅವರು ಒಪ್ಪಿರಲಿಲ್ಲ. ನನಗೆ ಅದು ಸಮಾಧಾನ ತಂದಿರಲಿಲ್ಲ. ಹಾಗಾಗಿ ಇಂದು ಬೆಳಿಗ್ಗೆ ತೀರ್ಮಾನ ಮಾಡಿ ನಾನು ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ನಾನು ಸ್ವ ಇಚ್ಛೆಯಿಂದ ರಾಜಕೀಯ ನಿವೃತ್ತಿ ಘೋಷಣೆ ಮಾಡುವುದಾಗಿ ತಿಳಿಸಿದ್ದೇನೆ ಎಂದರು.
ನನಗೆ ಯಾವ ಒತ್ತಡವೂ ಇಲ್ಲ. ಇದು ನನ್ನ ಸ್ವಂತ ನಿರ್ಧಾರ. ನನ್ನ ಪತ್ರವನ್ನು ಕೇಂದ್ರ ನಾಯಕರು ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ. 40 ವರ್ಷಗಳ ಕಾಲ ರಾಜಕೀಯ ಮಾಡಿದ್ದೇನೆ. ಬೂತ್ ಮಟ್ಟದಿಂದ ಡಿಸಿಎಂ ಹುದ್ದೆವರೆಗೂ ಬಿಜೆಪಿ ನನಗೆ ಅವಕಾಶವನ್ನು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ಮುಂದುವರೆಯುತ್ತೇನೆ. ಈ ಬಾರಿ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಎಂಬುದೇ ನಮ್ಮ ಗುರು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ