Latest

*ರೈತರ ಸಮಸ್ಯೆಗಳಿಗಿಂತ ಎರಡು ಮನೆ ಜಗಳ ಮಾಧ್ಯಮಗಳಿಗೆ ಮುಖ್ಯವಾಗಿರುವುದು ದುರಂತ: ಕೆವಿಪಿ*

ಕಾರ್ಪೋರೇಟ್ ಶ್ರೀಮಂತರ ಮನೆಯ ವೈಭವಕ್ಕಿಂತ ದುಡಿದು ಬದುಕುವವರ ಬವಣೆಗೆ ಕ್ಯಾಮರಾ ಹಿಡಿಯಿರಿ ಎಂದು ಸಲಹೆ

ಪ್ರಗತಿವಾಹಿನಿ ಸುದ್ದಿ: ಮಾಧ್ಯಮಗಳಿಗೆ ರೈತರ ಸಮಸ್ಯೆಗಳಿಗಿಂತ ಎರಡು ಮನೆ ಜಗಳ ಮಾಧ್ಯಮಗಳಿಗೆ ಮುಖ್ಯವಾಗಿರುವುದು ದುರಂತ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.

ತಾಲ್ಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನ ಮತ್ತು ಜಿಲ್ಲಾ ಘಕದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಪೋರೇಟ್ ಶ್ರೀಮಂತರ ಮನೆಯ ವೈಭವಕ್ಕಿಂತ ದುಡಿದು ಬದುಕುವವರ ಬವಣೆಗೆ ಕ್ಯಾಮರಾ ಹಿಡಿಯಿರಿ ಎಂದು ಮಾಧ್ಯಮಗಳಿಗೆ ಕರೆ ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯದ ಹೊಸ್ತಿಲಲ್ಲಿ ದೇಶದ ಅಭಿವೃದ್ಧಿ ಪತ್ರಿಕೋದ್ಯಮದ ಆದ್ಯತೆ ಆಗಿತ್ತು. ಗಾಂಧಿ, ಅಂಬೇಡ್ಕರ್ ಅವರು ಪತ್ರಿಕೆಗಳನ್ನು ನಡೆಸಿ ನಮ್ಮಂಥಾ ದೇಶಕ್ಕೆ ಯಾವ ರೀತಿಯ ಪತ್ರಿಕೋದ್ಯಮ ಬೇಕು ಎನ್ನುವುದಕ್ಕೆ ಮಾದರಿ ರೂಪಿಸಿಕೊಟ್ಟಿದ್ದಾರೆ. ಟಿಆರ್ ಪಿ ರಭಸದಲ್ಲಿ ಈ ಮಾದರಿಗಳು ಕೊಚ್ಚಿಹೋಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ತಂತ್ರಜ್ಞಾನದ ವೇಗ ಕೃತಕ ಬುದ್ದಿಮತ್ತೆಯ ಕಾಲದಲ್ಲಿ ಪತ್ರಿಕಾವೃತ್ತಿ ಹೊಸ ಸವಾಲು ಮತ್ತು ಅವಕಾಶಗಳಿಗೆ ತೆರೆದುಕೊಳ್ಳುತ್ತಿದೆ. ಪತ್ರಕರ್ತರು ಅಷ್ಟೇ ವೇಗದಲ್ಲಿ ತಮ್ಮನ್ನು ತಾವು ಉನ್ನತೀಕರಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕೆವಿಪಿ, ವಿದ್ಯಾರ್ಥಿಗಳಾದವರು ತಂದೆ ತಾಯಿ ಮಾತು ಕೇಳಬೇಕು. ಮನೆಯೇ ಮೊದಲ ಪಾಠಶಾಲೆ ಎನ್ನುವುದು ಎಷ್ಟು ಅರ್ಥಪೂರ್ಣ ಎನ್ನುವುದನ್ನು ನೋಬೆಲ್ ಪುರಸ್ಕೃತ ವಿಜ್ಞಾನಿ ಐನ್ ಸ್ಟೀನ್ ಅವರ ಬದುಕಿನ ಘಟನೆಗಳನ್ನು ಉದಾಹರಿಸಿ ಮಾತನಾಡಿದರು.

ಶಾಸಕರಾದ ಶಿವಣ್ಣ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿದಂತೆ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button