
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಮನಗರ ಜಿಲ್ಲೆ ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಕಾಮಗಾರಿಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಚಾಲನೆ ನೀಡಿರುವುದನ್ನು ವಿರೋಧಿಸಿ ಇಂದು ಹಿಂದೂ ಜಾಗರಣ ವೇದಿಕೆ ”ಕಾನಕಪುರ ಚಲೋ’ ರ್ಯಾಲಿಗೆ ಸಜ್ಜಾಗಿದೆ. ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಈ ರ್ಯಾಲಿಗೆ ಬಿಜೆಪಿ, ಆರ್ ಎಸ್ ಎಸ್ ಹಾಗೂ ಹಲವು ಹಿಂದೂ ಪರ ಸಂಘಟನೆ ಗಳು ಬೆಂಬಲ ನೀಡಿದ್ದು, ಭಾರಿ ಪ್ರತಿಭಟನೆಗೆ ಸಿದ್ಧತೆಗಳು ನಡೆದಿವೆ.
ಕನಕಪುರ ಅಯ್ಯಪ್ಪ ಸ್ವಾಮಿ ದೇವಾಲಯದ ಸರ್ಕಲ್ ನಿಂದ ಮೆರವಣಿಗೆ ಆರಂಭವಾಗಲಿದ್ದು, ರಾಮನಗರ, ಮಂಡ್ಯ, ಕೋಲಾರ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಮನಗರ ಎಸ್ ಪಿ ಸ್ಥಳ ಪರಿಶೀಲನೆ ನಡೆಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇಂದು ನಡೆಯುವ ಕನಕಪುರ ಚಲೋ ರ್ಯಾಲಿಯಲ್ಲಿ ಆರ್ ಎಸ್ ಎಸ್ ಮುಖಂಡಾ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಭಾಗಿಯಾಗಲಿದ್ದಾರೆ.
ಕಪಾಲಿ ಬೆಟ್ಟ ಅಭಿವೃದ್ಧಿ ಸಮಿತಿಗೆ ಮಂಜೂರಾಗಿದ್ದ 10 ಎಕರೆ ಜಾಗದಲ್ಲಿ ಒಂದು ಧರ್ಮದ ದೇವರ ಪ್ರತಿಮೆ ನಿರ್ಮಾಣ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಸ್ಮಸ್ ವೇಳೆ ಪ್ರತಿಮೆ ಶಂಕುಸ್ಥಾಪನೆ ನೆರವೇರಿಸಿದ್ದ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ಇದೀಗ ಈ ವಿವಾದ ರಾಜಕೀಯ ಕದನಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ