ರಾಜ್ಯಸಭಾ ಸದಸ್ಯರಾಗಿ ಪ್ರಮಾಣಪತ್ರ ಸ್ವೀಕರಿಸಿದ ನಂತರ ಪ್ರಗತಿವಾಹಿನಿಗೆ ಕಡಾಡಿ ಸಂದರ್ಶನ
ಜನಸಾಮಾನ್ಯರ ನಿರೀಕ್ಷೆಗಳನ್ನು ತಿಳಿದಿದ್ದೇನೆ, ಸ್ಪಂದಿಸುತ್ತೇನೆ – ಕಡಾಡಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮೂಡಲಗಿ ತಾಲೂಕಿನ ಕಲ್ಲೊಳಿ ಎನ್ನುವ ಹಳ್ಳಿಯ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ, ಕಳೆದ 30 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಅಧ್ಯಕ್ಷನಾಗಿ, ಪಕ್ಷದ ವಿವಿಧ ಹುದ್ದೆಗಳ ಜವಾಬ್ದಾರಿ ನಿರ್ವಹಿಸಿರುವ ಈರಪ್ಪ (ಈರಣ್ಣ) ಕಡಾಡಿ ಈಗ ರಾಜ್ಯಸಭಾ ಸದಸ್ಯ.
ಇಷ್ಟು ವರ್ಷ ಪಕ್ಷದ ಸೇವೆ ಮಾಡಿದರೂ ಅದಕ್ಕೆ ತಕ್ಕುದಾದ ಹುದ್ದೆ ಸಿಗಲಿಲ್ಲ ಎನ್ನುವ ಕಡಾಡಿಯವರ ಕೊರಗಿಗೆ ಅನಿರೀಕ್ಷಿತವಾಗಿ ಬಂದಿದೆ ರಾಜ್ಯಸಭಾ ಸದಸ್ಯತ್ವ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಪಕ್ಷದ ಕೆಲಸ ಮಾಡುತ್ತ ಜನಸಾಮಾನ್ಯರೊಂದಿಗೆ ಬೆಳೆದು ಬಂದಿರುವ ಈರಪ್ಪ ಕಡಾಡಿ, ಜನರ ನಿಜವಾದ ಸಮಸ್ಯೆ ಏನೆಂದು ಅರಿತಿರುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಒಬ್ಬರು.
ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದಾಗಲೂ ಅಧಿಕಾರದ ಗತ್ತು ತೋರಿಸದೆ, ಜನರೊಂದಿಗೇ ಇದ್ದವರು ಅವರು. ಈಗ ರಾಜ್ಯಸಭೆಯಂತಹ ದೊಡ್ಡ ಹುದ್ದೆ ಸಿಕ್ಕಿದಾಗಲೂ ಅವರ ನಡೆ, ನುಡಿ, ಗುಣ ಬದಲಾಗದಿರಲಿ ಎನ್ನುವ ಆಶಯದೊಂದಿಗೆ, ಶುಕ್ರವಾರ ರಾಜ್ಯಸಭೆ ಸದಸ್ಯನಾಗಿ ಪ್ರಮಾಣಪತ್ರ ಸ್ವೀಕರಿಸಿದ ನಂತರ ಪ್ರಗತಿವಾಹಿನಿ ಅವರ ಸಂದರ್ಶನ ನಡೆಸಿತು.
ರಾಜ್ಯಸಭಾ ಸದಸ್ಯ ಎನ್ನುವ ಕಾರಣಕ್ಕೆ ಮಿತಿ ಹೇರಿಕೊಂಡು ಜನರಿಂದ ದೂರ ಉಳಿಯುವುದಿಲ್ಲ
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ ಸಾಮಾನ್ಯ ಜನರ ನಿರೀಕ್ಷೆಗಳೇನು, ಕೆಳಮಟ್ಟದಲ್ಲಿರುವ ಸಮಸ್ಯೆಗಳೇನು ಎನ್ನುವ ಅರಿವಿದೆ. ಆದರೆ ಅವುಗಳನ್ನು ಪರಿಹರಿಸುವ ಸಾಮರ್ಥ್ಯ, ಅಧಿಕಾರ ನನಗಿರಲಿಲ್ಲ. ಈಗ ಅವುಗಳಿಗೆ ಸ್ಪಂದಿಸುವ ಸದವಕಾಶ, ಅಧಿಕಾರ ನನಗೆ ಒದಗಿ ಬಂದಿದೆ. ಅದನ್ನು ಸೂಕ್ತರೀತಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದುಕೊಂಡೇ ಅಧಿಕಾರ ಬಳಸಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಕಡಾಡಿ ಹೇಳಿದರು.
ನೋಟಿಫಿಕೇಶನ್ ಹೊರಬಿದ್ದ ತಕ್ಷಣ ನವದೆಹಲಿಗೆ ತೆರಳಿ ರಾಜ್ಯಸಭಾ ಸದಸ್ಯನ ಅಧಿಕಾರ ಮತ್ತು ಇತಿಮಿತಿಗಳೇನು ಎನ್ನುವುದನ್ನು ತಿಳಿದುಕೊಳ್ಳುತ್ತೇನೆ. ನನ್ನ ಪೂರ್ಣ ಅವಧಿಯನ್ನು ಅಧ್ಯಯನ ಮತ್ತು ಯೋಜನೆ ತರುವ ನಿಟ್ಟಿನಲ್ಲಿ ಬಳಸಿಕೊಳ್ಳುತ್ತೇನೆ. ಕೇಂದ್ರದ ಯೋಜನೆಗಳು ಮತ್ತು ಅದಕ್ಕೆ ರಾಜ್ಯದ ಪೂರಕ ಬಜೆಟ್ ಕುರಿತು ತಿಳಿದುಕೊಂಡು, ಕೇಂದ್ರ -ರಾಜ್ಯದ ಕೊಂಡಿಯಾಗಿ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ಸಾಮಾನ್ಯ ಕಾರ್ಯಕರ್ತರನ್ನೂ ಹೆಸರು ಹಿಡಿದು ಕರೆಯುವ ರೂಢಿ, ಪರಿಚಯ ನನಗಿದೆ.
ನನ್ನ ನಡೆ, ನುಡಿ, ಸಾಮಾನ್ಯರ ಜೊತೆಗಿನ ಒಡನಾಟ ಯಾವುದೂ ಬದಲಾಗುವುದಿಲ್ಲ. ಕೆಲಸ ಮಾಡುವ ರೀತಿಯೂ ಹಾಗೆಯೇ ಮುಂದುವರಿಯುತ್ತದೆ. ಅಧಿಕಾರ ಸಿಕ್ಕಿರುವುದರಿಂದ ಅದು ಇನ್ನಷ್ಟು ವೇಗದಲ್ಲಿ ಮುನ್ನಡೆಯುತ್ತದೆ. ಎಲ್ಲಿಯೂ ನನ್ನ ಸಮಯ ವ್ಯರ್ಥವಾಗದಂತೆ ಕೆಲಸ ಮಾಡುತ್ತೇನೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ಕಂಡ ಹಲವು ಕನಸುಗಳು ಆಗಿನ ಇತಿಮಿತಿಯಲ್ಲಿ ಈಡೇರಿಸಲು ಸಾಧ್ಯವಾಗಿರಲಿಲ್ಲ. ಈಗ ಅಂತಹ ಅವಕಾಶ ಒದಗಿಬಂದಿದೆ. ಪಕ್ಷದ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಮುನ್ನಡೆಯುತ್ತೇನೆ ಎಂದು ಕಡಾಡಿ ತಿಳಿಸಿದರು.
ನನಗೆ ಅಧಿಕಾರ ಇರಲಿ, ಇಲ್ಲದಿರಲಿ, ಜನರು ನನ್ನೊಂದಿಗೆ ಸಲುಗೆಯಿಂದಲೇ ಮಾತನಾಡುತ್ತಾರೆ, ನಡೆದುಕೊಳ್ಳುತ್ತಾರೆ. ಯಾರನ್ನೂ ನಾನು ದೂರ ಇಡುವುದಿಲ್ಲ. ಸಾಮಾನ್ಯ ಕಾರ್ಯಕರ್ತರನ್ನೂ ಹೆಸರು ಹಿಡಿದು ಕರೆಯುವ ರೂಢಿ, ಪರಿಚಯ ನನಗಿದೆ. ದಿನದ 24 ಗಂಟೆಯೂ ನನ್ನನ್ನು ಸಂಪರ್ಕಿಸಲು ಇಲ್ಲಿಯವರೆಗೂ ಅವಕಾಶ ನೀಡಿದ್ದೇನೆ, ಅದು ಹಾಗೆಯೇ ಮುಂದುವರಿಯಲಿದೆ. ರಾಜ್ಯಸಭಾ ಸದಸ್ಯ ಎನ್ನುವ ಕಾರಣಕ್ಕೆ ಮಿತಿ ಹೇರಿಕೊಂಡು ಜನರಿಂದ ದೂರ ಉಳಿಯುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಸಂಬಂಧಿಸಿದ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ –
ಪ್ರಮಾಣಪತ್ರ ಸ್ವೀಕರಿಸಿದ ಈರಪ್ಪ ಕಡಾಡಿ
ಶನಿವಾರ ಬೆಳಗಾವಿಗೆ ಆಗಮಿಸಲಿರುವ ನೂತನ ರಾಜ್ಯಸಭಾ ಸದಸ್ಯ
ಆಯ್ಕೆಗೆ 12 ಗಂಟೆ ಮೊದಲು ಕಡಾಡಿ ಪ್ರಗತಿವಾಹಿನಿ ಜೊತೆ ಮಾತನಾಡಿದ್ದೇನು?
ಕಡಾಡಿ, ಗಸ್ತಿ, ದೇವೇಗೌಡ ನಾಮಪತ್ರ ಸಲ್ಲಿಕೆ
ಈರಣ್ಣ ಕಡಾಡಿ, ಅಶೋಕ್ ಗಸ್ತಿಗೆ ರಾಜ್ಯಸಭಾ ಟಿಕೆಟ್
ಪ್ರಬಲ ಅಭ್ಯರ್ಥಿಗಳ ಮಧ್ಯೆಯೂ ಸಾಮಾನ್ಯ ಕಾರ್ಯಕರ್ತನಿಗೆ ಮಣೆ -ಬಾಲಚಂದ್ರ ಹರ್ಷ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ