ಈಶ್ವರ.ಜಿ.ಸಂಪಗಾವಿ
ಖಾನಾಪುರ ತಾಲೂಕಿನ ಗಡಿನಾಡು , ಮಲೆನಾಡಿನ ಕಾಡಂಚಿನಲ್ಲಿರುವ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮವು ಶ್ರೀ ಬಿಷ್ಟಾದೇವಿಯ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಇದು ಬೆಳಗಾವಿ-ತಾಳಗುಪ್ಪಾ ರಾಜ್ಯ ಹೆದ್ದಾರಿಯಲ್ಲಿ ಖಾನಾಪುರ ಹಾಗೂ ಅಳ್ಣಾವರಗಳ ನಡುವೆ ಇದೆ.
ಮಾರ್ಗ: ಕಕ್ಕೇರಿಯು ಧಾರವಾಡದಿಂದ ಪಶ್ಚಿಮಕ್ಕೆ ೪೦ ಕಿ.ಮೀ. ಬೆಳಗಾವಿಯಿಂದ ದಕ್ಷಿಣಕ್ಕೆ ೫೮ ಕಿ.ಮೀ. ಕಿತ್ತೂರಿಂದ ಪಶ್ಚಿಮಕ್ಕೆ ೩೦ ಕಿ.ಮೀ. ಅಂತರದಲ್ಲಿ ಇದೆ. ಪ್ರಸಿದ್ಧ ಬಿಷ್ಟಾದೇವಿ, ಕಕ್ಕಯ್ಯ, ಮೂಕಮ್ಮ, ವೀರಭದ್ರ, ಅಡಿವೆಪ್ಪ ಮುಂತದ ಮಂದಿರಗಳನ್ನು ಸಂದರ್ಶಿಸಿ ಜೀವನ ಪಾವನ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಇದಾಗಿದೆ.
ಡೋಹರ ಕಕ್ಕಯ್ಯ ಹಾಗೂ ಬಿಷ್ಟಮ್ಮ ಹಲವಾರು ಶರಣರೊಂದಿಗೆ ಖಾನಾಪುರ ತಾಲೂಕಿನ ಕಕ್ಕೇರಿ ಸನಿಹದಲ್ಲಿ ಬಹಳ ವರ್ಷಗಳ ವರೆಗೆ ತಂಗಿದ್ದರು ಎಂಬ ಪ್ರತೀತಿ ಇದೆ. ಎತ್ತರದ ಮಡ್ಡಿಯ ಮೇಲೆ ವಾಸವಾಗಿದ್ದರೆಂದೂ ಅದನ್ನು “ಕಕ್ಕಯ್ಯನ ಮಡ್ಡಿ” ಎಂದು ಕರೆಯುತ್ತಾರೆ. ಈಗಲೂ ಇಲ್ಲಿ ಕಕ್ಕಯ್ಯನ ಸಮಾಧಿ, ವೀರಕಲ್ಲುಗಳು, ಅವರ ವಾಸದ ಮನೆ, ಸಮೀಪದಲ್ಲಿಯೇ ದೊಡ್ಡ ಕೆರೆ ಇವೆ. ಇಂದಿಗೂ ಕಕ್ಕಯ್ಯನ ಹೆಸರಿನ ಕೆರೆ ದೊಡ್ಡ ಪ್ರಮಾಣದ ಜಮೀನುಗಳಿಗೆ ನೀರುಣಿಸುತ್ತದೆ.
ಕಾದ್ರೊಳ್ಳಿ ಯುದ್ಧದಲ್ಲಿ ಗಾಯಗೊಂಡು ಅಸ್ವಸ್ಥರಾದ ಕಕ್ಕಯ್ಯನವರ ದೇಹಾಂತ ಕಕ್ಕೇರಿಯಲ್ಲಿಯೇ ಆಗುತ್ತದೆ. ಈ “ಕಕ್ಕಯ್ಯನ ಕೇರಿ”ಯೇ ಮುಂದೆ ಈಗಿನ “ಕಕ್ಕೇರಿ” ಎಂದು ಕರೆಯಲಾಗುತ್ತಿದೆ. ಊರ ಹೊರಗಿನ ಮಡ್ಡಿಯಲ್ಲಿ ಕಕ್ಕಯ್ಯನ ಸಮಾಧಿ, ವಾಸಿಸುತ್ತಿದ್ದ ಮನೆ ಇವೆ. ಹಳೆ ಗುಡಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ. ಸುಂದರವಾದ ಪುಣ್ಯಸ್ಥಳವಾಗಿದೆ. ಕಕ್ಕೇರಿ ಗ್ರಾಮದ ಮಧ್ಯದಲ್ಲಿ ೧೨ನೇ ಶತಮಾನದ ಗುಡಿಗುಮ್ಮಟಗಳಿದ್ದು, ಅದರಲ್ಲಿ ಬಿಷ್ಟಮ್ಮನ ಗುಮ್ಮಟವೂ ಇದೆ. ಇಲ್ಲಿ ಬಿಷ್ಟಮ್ಮನ ದೇಹಾಂತವಾಗಿದೆ ಎಂದು ಪ್ರತೀತಿ. ಅಲ್ಲಿಯೂ ವೀರಗಲ್ಲುಗಳು ಕಾಣಸಿಗುತ್ತವೆ.
ಇಲ್ಲಿಯೇ ದೇಹತ್ಯಾಗ ಮಾಡಿದರು
ಕಕ್ಕೇರಿಯಲ್ಲಿ ಬಹಳ ಕಾಲದ ವರೆಗೆ ಧರ್ಮಜಾಗೃತಿ, ವಚನ ಪ್ರಚಾರ ಮುಂತಾದ ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಕಕ್ಕಯ್ಯ ಮತ್ತು ಬಿಷ್ಟಮ್ಮನವರು ಇಲ್ಲಿಯೇ ದೇಹತ್ಯಾಗ ಮಾಡಿದರು, ಅವರ ಹೆಸರಿನ ಮಂದಿರಗಳು ಈಗ ಭಕ್ತರ ಸಹಯೋಗದಿಂದ ಜೀರ್ಣೋದ್ಧಾರ ಸಾವಿರಾರು ಭಕ್ತರನ್ನು ತಮ್ಮತ್ತ ಸೆಳೆದು ಜಾಗೃತ ಸ್ಥಾನಗಳಾಗಿವೆ.
ಬಿಷ್ಟಮ್ಮ ಹಾಗೂ ಕಕ್ಕಯ್ಯ ಬಸವಣ್ಣನವರಿಂದ ಲಿಂಗದೀಕ್ಷೆ ಪಡೆದು ಉತ್ತಮ ಕುಲದವರಾದರೆಂದು ತಿಳಿದು ಬರುತ್ತದೆ. ಶಿವರಾತ್ರಿ ದಿನ ಕಕ್ಕಯ್ಯನ ಜಾತ್ರೆ ವಿಜೃಂಬಣೆಯಿಂದ ಜರಗುತ್ತದೆ. ಸುತ್ತಲಿನ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜಾತ್ರೆಗೆ ಜನ ಸೇರುತ್ತಾರೆ. ಮಹಾರಾಷ್ಟದ ಕೊಲ್ಲಾಪುರದಿಂದ ಡೋಹರ ಜನಾಂದವರು ಸ್ಥಳೀಯರೊಂದಿಗೆ ಕೂಡಿ ಜಾತ್ರೆ ಹಮ್ಮಿಕೊಳ್ಳುತ್ತಾರೆ. ದೊಡ್ಡ ಪ್ರಮಾಣದಲ್ಲಿ ಐತಿಹಾಸಿಕ ಮಹತ್ವವುಳ್ಳ ಮಹಾಪ್ರಸಾದ ನಡೆಯುವುದು. ಪ್ರವಾಸಿಗರಿಗೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆ, ವಸತಿ ಸಮುಚ್ಚಯಗಳು, ಸುರಕ್ಷಿತ ರಸ್ತೆಗಳಾಗಬೇಕಿದೆ.
ಈಗಿರುವ ಬಿಷ್ಟಾದೇವಿ ಮಂದಿರ ಮೊದಲು ಲಕ್ಷ್ಮೀ ಮಂದಿರವಾಗಿತ್ತು, ಕಾಲಾಂತರದಲ್ಲಿ ಮೂರ್ತಿ ಕಳುವಾಗಲು ಗುಮ್ಮಟದಲ್ಲಿದ್ದ ಬಿಷ್ಟಮ್ಮನ ಮೂರ್ತಿಯನ್ನು ಇಲ್ಲಿ ತಂದು ಪ್ರತಿಷ್ಠಾಪಿಸಿದರೆಂದು ಹಿರಿಯರು ಹೇಳುತ್ತಾರೆ. ಸುಮಾರು ೩-೪ ನೂರು ವರ್ಷಗಳಷ್ಟು ಹಳೆಯದಾದ ಗುಡಿಯನ್ನು ಕಕ್ಕೇರಿ ಮತ್ತು ಸುತ್ತಲಿನ ಗ್ರಾಮಸ್ಥರು ಕೂಡಿ ೨೦೦೭ ರಲ್ಲಿ ಹೊಸ ಮಂದಿರ ನಿರ್ಮಾಣ ಮಾಡಲಾಗಿದ್ದು, ಪ್ರತಿ ಅಮಾವಾಸ್ಯೆಗೆ ಭಕ್ತಜನರಿಂದ ಕಿಕ್ಕಿರಿದು ತುಂಬಿರುತ್ತದೆ.
ವಿಜೃಂಬಣೆಯ ಜಾತ್ರೆ
ಪ್ರತಿ ದಸರಾ ಹಬ್ಬಕ್ಕೆ ೫ ದಿನಗಳ ವರೆಗೆ ಭಾರಿ ಪ್ರಮಾಣದಲ್ಲಿ ವಿಜೃಂಬಣೆಯ ಜಾತ್ರೆ ಜರಗುತ್ತದೆ. ಇವೆರಡೂ ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರವನ್ನಾಗಿಸಬೇಕೆಂಬುದು ಭಕ್ತರ ಬಹು ದಿನಗಳ ಆಸೆಯಾಗಿದ್ದು ಸರಕಾರ ಶೀಘ್ರ ಪೂರೈಸಬೇಕೆಂದು ಇಚ್ಛಿಸುತ್ತಾರೆ. ವಿಶಾಲ ಪ್ರಾಂಗಣ ಹೊಂದಿರುವ ದೇವಸ್ಥಾನಗಳಲ್ಲಿ ಧರ್ಮಜಾಗೃತಿ ಸಭೆಗಳು, ಕಾನೂನು ಸಲಹಾ ಸಭೆಗಳು, ವಿವಿಧ ಮನರಂಜನಾ ಸಭೆಗಳು ನಡೆಯುತ್ತವೆ. ಶರಣರ ಪವಿತ್ರ ಮಂದಿರಗಳಿಗೆ ಭೇಟಿಕೊಟ್ಟು ಶರಣರ ಪುಣ್ಯ ಕ್ಷೇತ್ರಗಳ ದರ್ಶನ ಪಡೆದು ಪುನೀತರಾಗಬಹುದು.
ಬಿಷ್ಠಾದೇವಿಯ ಜಾತ್ರೆಯ ಪ್ರಯುಕ್ತ ಸೋಮವಾರ ಅ.೦೭ರಂದು ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಮತು ಮಂಗಳವಾರ ಅ.೮ ರಂದು ನಸುಕಿನಜಾವ ೪ರಿಂದ ೬ರ ವರೆಗೆ ದೇವಿಗೆ ಕಾಯಿ ಒಡೆಯುವ ಕಾರ್ಯಕ್ರಮ ಪ್ರಾರಂಭಗೊಳ್ಳುವ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಅ.೦೭ರಿಂದ ೦೯ರವರೆಗೆ ನಿತ್ಯ ಸಂಜೆ ದೇವಾಲಯದ ಆವರಣದಲ್ಲಿ ಡೊಳ್ಳಿನ ಪದಗಳು ಮತ್ತು ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಲಿದ್ದು ಅ.೦೮ ಮತ್ತು ೯ ರಂದು ಮಧ್ಯಾಹ್ನ ೩ ಗಂಟೆಗೆ ಬಯಲು ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಗಳು ನಡೆಯಲಿವೆ.
ಪ್ರತಿ ವರ್ಷದಂತೆ ಈ ವರ್ಷವೂ ಕಕ್ಕೇರಿಯ ಬೀಷ್ಟಾದೇವಿಯ ಜಾತ್ರೆ ೩ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು, ಕಳೆದ ಸುಮಾರು ವರ್ಷಗಳಿಂದ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ಪ್ರಾಣಿ-ಪಕ್ಷಿಗಳನ್ನು ಬಲಿಕೊಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಭಕ್ತಾಧಿಗಳು ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆಗೆ ಬಂದು ಬಿಷ್ಠಾದೇವಿಯ ಕೃಪೆಗೆ ಪಾತ್ರರಾಗಬೇಕು ಹಾಗೂ ಭಕ್ತಾಧಿಗಳು ಶಾಂತತೆಯನ್ನು ಕಾಪಾಡಿ ಸಹಕರಿಸಬೇಕೆಂದು ಜಾತ್ರಾ ಕಮೀಟಿಯವರು ತಿಳಿಸಿದರು.
ಸಾವಿರಾರು ಭಕ್ತರಿದ್ದಾರೆ
ಶತಮಾನಗಳಿಂದಲೂ ತನ್ನನ್ನೂ ನಂಬಿ ಬಂದ ಭಕ್ತರನ್ನು ಸಲಹುವ ಈ ಬಿಷ್ಟಾದೇವಿಗೆ ಈಗಲೂ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಾವಿರಾರು ಭಕ್ತರಿದ್ದಾರೆ. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸೇರಿದಂತೆ ಕಿತ್ತೂರು ಚೆನ್ನಮ್ಮನ ಆಸ್ಥಾನದ ಸೈನಿಕರು ಯುದ್ಧದಲ್ಲಿ ಜಯಗಳಿಸಲು ಈ ದೇವಿಯನ್ನು ಪ್ರಾರ್ಥಿಸುತ್ತಿದ್ದರು. ಹೀಗಾಗಿ ಈಗಲೂ ಸಹ ನಂಬಿ ಬರುವ ಭಕ್ತಾಧಿಗಳ ಇಷ್ಟಾರ್ಥಗಳನ್ನು ಇಡೆರಿಸುತ್ತಿರುವ ಶ್ರೀ ಬಿಷ್ಠಾದೇವಿಯ ಜಾತ್ರೆಗೆ ಬಂದು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಪಾವನರಾಗಬಹುದು.
೧೨ನೇ ಶತಮಾನದಲ್ಲಿ ಸಮಾಜ ಪರಿವರ್ತನೆ, ಸ್ತ್ರೀ ಸ್ವಾತಂತ್ರ್ಯ, ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟವರು ಶ್ರೀ ಬಸವಣ್ಣನವರು. ಅವರು ಇವನ್ನು ಸಾಧಿಸಲು ಹೋರಾಟದ ಮಾರ್ಗ ಹಿಡಿದರು. ಬಿತ್ತಿದ ಬೀಜ ಹುಸಿಯಾಗಲಿಲ್ಲ. ಸಮಾನ ಮನಸ್ಕರ ಸಂಘಟನೆಯಿಂದ “ಅನುಭವ ಮಂಟಪ” ಎಂಬ ಸಂಸ್ಥೆ ಸಂಘಟನೆ ಸ್ಥಾಪನೆ ಆಯಿತು. ಇದರ ಅಧ್ಯಕ್ಷತೆಯನ್ನು ಅನುಭಾವಿ ಅಲ್ಲಮಪ್ರಭುಗಳು ಸಮರ್ಥವಾಗಿ ನಿಭಾಯಿಸುತ್ತ ದೇಶವಿದೇಶಗಳಿಂದ ಜಾತಿಭೇದವಿಲ್ಲದೆ ಅನೇಕ ಶರಣ ಸಾಗರವನ್ನು ಒಗ್ಗೂಡಿಸಿದರು.
ಇದರ ಹಿಂದೆ ಬಸವಣ್ಣನವರ ಕರ್ತೃತ್ವಶಕ್ತಿ, ಸಂಘಟನೆ ಅಗಾಧವಾದದ್ದು. ಇದರಲ್ಲಿ ಅಕ್ಕಮಹಾದೇವಿ, ಸಿದ್ಧರಾಮಯ್ಯ, ಡೋಹರಕಕ್ಕಯ್ಯ, ಮಡಿವಾಳ ಮಾಚಿದೇವ, ಹರಳಯ್ಯ, ಮಧುವರಸ, ನೀಲಮ್ಮ, ನಾಗಮ್ಮ, ಅಂಬಿಗರ ಚೌಡಯ್ಯ, ಮೇದಾರ ಕೇತಯ್ಯ, ಒಕ್ಕಲಿಗ ಮುದ್ದಣ್ಣ, ಅಫಘಾನಿಸ್ಥಾನದಿಂದ ಬಂದ ಮರುಳ ಶಂಕರಲಿಂಗ, ದಾನಮ್ಮ, ಲಂಬಾಣಿ ನಾನಯ್ಯ, ಕುರುಬ ಗೊಲ್ಲಾಳೇಶ್ವರ ಮುಂತಾದ ಅನೇಕ ಶರಣಶರಣೆಯರು ಜಾತಿಭೇದ ಮರೆತು, ಸಮಾಜ ಸುಧಾರಣೆಗೆ, ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಪಣತೊಟ್ಟರು. ಭಕ್ತಿ ಮಾರ್ಗ ಹಿಡಿದು “ದೇವನೊಬ್ಬ ನಾಮ ಹಲವು, ದಾರಿ ಬೇರೆ ಬೇರೆ ಅವನ ನಂಬಿ ಬಾಳ ನೂಕಿದರೆ ಬೇವು ಬೆಲ್ಲ ತಾನೆ.” ಎಂಬುದನ್ನು ಪ್ರತಿಪಾದಿಸಿದರು.
ಕ್ರಾಂತಿಯನ್ನೇ ಎಬ್ಬಿಸಿದರು
ಸಾಹಿತ್ಯದಲ್ಲಿಯೂ ಶರಣರು ಕ್ರಾಂತಿಯನ್ನೇ ಎಬ್ಬಿಸಿದರು. ೧೨ನೇ ಶತಮಾನದ ವರೆಗೆ ಸಂಸ್ಕೃತ ಭೂಯಿಷ್ಠವಾದ ಸಾಹಿತ್ಯ ರಚನೆಯಾಗಿತ್ತು. ಪಂಪ, ರನ್ನ, ಜನ್ನರಂಥ ಪ್ರಸಿದ್ಧ ಕವಿಗಳು ರಾಜಾಶ್ರಯ ಪಡೆದು ಮಹಾಭಾರತ, ಗಧಾಯುದ್ಧ, ಯಶೋಧರ ಚರಿತೆ ಮುಂತಾದ ಅನೇಕ ಉದ್ಘ್ರಂಥಗಳನ್ನು ಬರೆದರು. ಆದರೆ ಈ ಸಾಹಿತ್ಯವು ಸಮಾಜದ ಎಲ್ಲ ವರ್ಗಗಳ ಜನರಿಗೆ ಮುಟ್ಟಲೇ ಇಲ್ಲ. ಕೇವಲ ಸಂಸ್ಕೃತ ಭಾಷೆ ಬಲ್ಲವರಿಗೆ ಮಾತ್ರ ಈ ಸಾಹಿತ್ಯ ಹಿಡಿಸಿತು ಅವರಿಗಷ್ಟೇ ಮೀಸಲಾಯಿತು.
ಆದರೆ ಏನೂ ಕಲಿಯದ ಕೆಳವರ‍್ಗದ ಜನರಿಗೆ ಇದು ಮುಟ್ಟಲಿಲ್ಲ. ಅವರು ಈ ಸಾಹಿತ್ಯದಿಂದ ವಂಚಿತರಾದರು. ಅವರು ಮೂಢನಂಬಿಕೆ, ಅಂಧಕಾರಗಳಲ್ಲಿ ಮುಳುಗಿಹೋದರು. ಸಮಾಜಕ್ಕೆ ಪಾರ್ಶ್ವವಾಯು ಹೊಡೆದಂತಾಯಿತು. ಈ ಆಘಾತವನ್ನು ಹೋಗಲಾಡಿಸಲು ಏನೂ ಕಲಿಯದ ಕೆಳವರ‍್ಗದವರಿಗಾಗಿಯೇ “ವಚನ” ಎಂಬ ವಿಶಿಷ್ಟ ಸಾಹಿತ್ಯ ಶರಣರಿಂದ ರಚನೆಗೊಂಡಿತು. ಇದೊಂದು ಸಾಹಿತ್ಯಿಕ ಕ್ರಾಂತಿಯೇ ಸರಿ.
ವಚನ ಎಂದರೆ ಓದುವುದು, ಪ್ರಮಾಣ ಮಾಡುವುದು ಎಂಬ ರ್ಅಥವಿದೆ. ವಚನಗಳನ್ನು ಓದಬಹುದು ಹಾಗೂ ಹಾಡಬಹುದು. ಈ ಸಾಹಿತ್ಯ ಜನಸಾಮಾನ್ಯರು ಉಪಯೋಗಿಸುವ ಆಡು ಭಾಷೆ ಬಳಸಿ ಅನೇಕ ಉಪಮೆ ರೂಪಕಗಳನ್ನು ಉಪಯೋಗಿಸಿ ಬರೆದರು. ಇವು ಪ್ರಸ್ತುತ ಸಮಾಜದ ಭಾಷೆ ಹಾಗೂ ಘಟನೆ ಆಧರಿಸಿ ಎಲ್ಲರಿಗೂ ತಿಳಿಯುವಂಥ ಸರಳವಾದ ರೀತಿಯಲ್ಲಿ ವಚನಗಳು ರಚನೆಗೊಂಡು ಸಮಾಜದ ಬಹುಸಂಖ್ಯೆಯ ಜನರಿಗೆ ತೀರಾ ಹತ್ತಿರವಾದವು. ಕಲಿಯದ ಜನರಿಗೂ ರ‍್ಥವಾಗುವ ರೀತಿಯಲ್ಲಿ ಸಾಹಿತ್ಯ ರಚನೆಯಾದ್ದರಿಂದ ಇದು ಒಂದು ಸಾಹಿತ್ಯಿಕ ಕ್ರಾಂತಿ.
ಸಾವಿರಾರು ವಚನ
ಶರಣಶರಣೆಯರು ತಮ್ಮ ಆರಾಧ್ಯ ದೈವವನ್ನು ಅಂಕಿತನಾಮವನ್ನಾಗಿ ಇಟ್ಟುಕೊಂಡು ಸಾವಿರಾರು ವಚನಗಳನ್ನು ರಚಿಸಿ, ಅನುಭವ ಮಂಟಪದಲ್ಲಿ ಪರಿಷ್ಕರಿಸಿ ಸಮಾಜಕ್ಕೆ ಬಿಡುಗಡೆಗೊಳಿಸಿದರು. ಇದರಿಂದ ಎಲ್ಲರೂ ಧರ‍್ಮ, ದೇವರು, ಭಜನೆ, ಕೀರ್ತನೆಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಈ ಸಾಹಿತ್ಯ ಸಮಾಜದ ಎಲ್ಲ ಸ್ಥರಗಳಿಗೆ ಮುಟ್ಟಿತು.
ಅನುಭವ ಮಂಟಪದಲ್ಲಿ ಶರಣರಾದ ಹರಳಯ್ಯ ಚರ್ಮಗಾರನಾದರೆ, ಮಧುವರಸ ಬ್ರಾಹ್ಮಣ. ಇವರ ನಡುವೆ ಸಂಬಂಧ ಬೆಳೆಸಲು ಬಸವಣ್ಣ ಮುಂತಾದವರು ಕಾರಣರಾದರು. ಶರಣರೆಲ್ಲರೂ ಸಮಾನರು, ಜಾತಿಭೇದವಿಲ್ಲ, ಮೇಲುಕೀಳೆಂಬ ಭೇದವಿಲ್ಲ ಎಂಬ ತತ್ವಕ್ಕೆ ಅಂಟಿಕೊಂಡವರು. ಆದರೆ ಇದಕ್ಕೆ ಮೂಢನಂಬಿಕೆ, ಅಂಧಶ್ರದ್ಧೆ, ಜಾತಿಪದ್ಧತಿಯಂಥ ಅಂಧಕಾರದಲ್ಲಿದ್ದ ಸಂಪ್ರದಾಯಸ್ಥ ಸಮೂಹ ಪ್ರಬಲ ವಿರೋಧ ಒಡ್ಡಿತು.
ಅನುಭವ ಮಂಟಪ ರಚನೆ, ವಚನ ರಚನೆ ಮುಂತಾದ ಚಟುವಟಿಕೆಗಳನ್ನು ಸಂಪೂರ‍್ಣ ವಿರೋಧಿಸುತ್ತ ಬಂದ ಕಲ್ಯಾಣದ ಬಿಜ್ಜಳ ದೊರೆ ಶರಣರನ್ನು ತಿರಸ್ಕರಿಸಲು ಪ್ರಾರಂಭಿಸಿದನು. ಹರಳಯ್ಯನ ಮಗನಿಗೆ ಮಧುವರಸನ ಮಗಳನ್ನು ಕೊಟ್ಟು ಮದುವೆ ಮಾಡಿಸಿದ್ದು ಜಾತಿಪದ್ಧತಿಯ ವಿರುದ್ಧ ಸ್ಫೋಟಗೊಂಡ ಮತ್ತೊಂದು ಕ್ರಾಂತಿ.
ಹುನ್ನಾರ ಫಲಿಸಲಿಲ್ಲ
ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿ ಆಗಿದ್ದ ಬಸವಣ್ಣನವರನ್ನು ಪದಚ್ಯುತಗೊಳಿಸಿ ಗಡಿಪಾರು ಮಾಡಿದರು. ಮಧುವರಸ ಹರಳಯ್ಯರನ್ನು ಆನೆ ಕಾಲಿಗೆ ಎಳೆಹೂಂಟಿ ಕಟ್ಟಿ ಕಲ್ಯಾಣದ ಬೀದಿಬೀದಿಗಳಲ್ಲಿ ಅಟ್ಟಾಡಿಸಿ ಸಾಯಿಸಿದ್ದು ಶರಣರನ್ನು ರೊಚ್ಚಿಗೆಬ್ಬಿಸಿತು. ಶರಣರ ವಿರುದ್ಧ ಬಿಜ್ಜಳ ದೊರೆ ತನ್ನ ಸೈನಿಕರನ್ನು ಛೂಬಿಟ್ಟನು. ಅಲ್ಪ ಪ್ರಮಾಣದಲ್ಲಿದ್ದ ವೀರ ಶರಣರು ಕತ್ತಿ ಹಿಡಿದು ಹೋರಾಡಿದರು. ಆದರೆ ದುಷ್ಟ ಶಕ್ತಿಯ ಮುಂದೆ ಸೋಲಬೇಕಾಯಿತು.
ವಚನ ಸಾಹಿತ್ಯವನ್ನು ನಾಶಮಾಡಬೇಕೆಂಬ ಬಿಜ್ಜಳನ ಹುನ್ನಾರ ಫಲಿಸಲಿಲ್ಲ. ಶರಣ ಸಮೂಹ ತಮ್ಮನ್ನು ರಕ್ಷಿಸಿಕೊಳ್ಳುವುದರೊಂದಿಗೆ ವಚನ ಸಾಹಿತ್ಯವನ್ನು ತಲೆಯ ಮೇಲೆ ಹೊತ್ತುಕೊಂಡು ಗೌಪ್ಯವಾಗಿ ರಕ್ಷಿಸಿಕೊಂಡು ಬಂದದ್ದಕ್ಕೆ ಇಂದು ನಮಗೆ ಅವು ಲಭ್ಯ ಇವೆ. ಇಂದಿಗೂ ವಚನ ಸಾಹಿತ್ಯ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವದ ೨೫-೩೦ ಭಾಷೆಗಳಲ್ಲಿ ವಚನಗಳು ಅನುವಾದಗೊಂಡು ವಿಶ್ವಮಾನ್ಯವಾಗಿವೆ. ವಚನಗಳು ಜನರಲ್ಲಿ ಭಕ್ತಿಭಾವ ಬಿತ್ತುವುದರಿಂದ ಬಸವಣ್ಣನವರು ಭಕ್ತಿಭಂಡಾರಿ, ಜಗಜ್ಯೋತಿ ಬಸವಣ್ಣ ಎನಿಸಿಕೊಂಡರು. ಇದರಿಂದಾಗಿ ಕಲ್ಯಾಣದಲ್ಲಿ ದೊಡ್ಡ ಕ್ರಾಂತಿ ಆಯಿತು.
ಕಾದಿದವರ ಹಳ್ಳಿ
ಕಲ್ಯಾಣ ಕ್ರಾಂತಿಯ ನಂತರ ಬಿಜ್ಜಳನ ಸೈನಿಕರು ಮತ್ತು ಶರಣ ಸಮೂಹದ ಮಧ್ಯೆ ಬೆಳಗಾವಿ ಜಿಲ್ಲೆಯ ಮಲಪ್ರಭ ನದಿಯ ಸಮೀಪದಲ್ಲಿ ಘನಘೋರ ಯುದ್ಧ ನಡೆಯುತ್ತದೆ. ಆದ್ದರಿಂದ “ಕಾದಿದವರ ಹಳ್ಳಿ” ಎಂದು ಈಗಿನ ಗ್ರಾಮ ಕಾದ್ರೊಳ್ಳಿ ಎಂದು ಪ್ರಸಿದ್ಧ ಆಯಿತು. ಅಲ್ಲಿ ಬಿಜ್ಜಳನ ಸೈನ್ಯ ಯುದ್ಧದಲ್ಲಿ ಸೋತು ಕಾಲ್ಕಿತ್ತಿತು. ಕಾದ್ರೊಳ್ಳಿಯಿಂದ ಮೂರು ತಂಡಗಳಾಗಿ ಶರಣರು ವಚನ ಸಾಹಿತ್ಯವನ್ನು ಶ್ರದ್ಧಾಭಕ್ತಿಯಿಂದ ತಮ್ಮೊಡನೆ ಕಾಪಾಡಿಕೊಂಡು ಮುನ್ನಡೆದರು.
ಒಂದು ತಂಡ ಬಸವಣ್ಣನವರ ಮುಖಂಡತ್ವದಲ್ಲಿ ಕೂಡಲ ಸಂಗಮದ ಕಡೆಗೆ ಹೊರಟು ಕೆಲಕಾಲ ಜನರಿಗೆ ಧರ್ಮಬೋಧನೆ ಮಾಡುತ್ತ ಸಂಗಮನಾಥನಲ್ಲಿ ಲೀನವಾಗುತ್ತಾರೆ. ಇನ್ನೊಂದು ತಂಡ ಚನ್ನಬಸವಣ್ಣ ಮತ್ತು ಅಕ್ಕ ನಾಗಮ್ಮರ ಜೊತೆಗೂಡಿ ಧಾರವಾಡದ ಈಗಿನ ಬಸ್ಸಪ್ಪನ ಗುಡ್ಡದ ಕಡೆಗೆ ಹೋಗಿ ಧರ್ಮಕಾರ್ಯ ಮಾಡಿ ಉಳವಿಯತ್ತ ಸಾಗಿದರು ಎಂದು ಹೇಳಲಾಗುತ್ತದೆ.
ಇನ್ನೊಂದು ತಂಡ ಡೋಹರ ಕಕ್ಕಯ್ಯ, ಘಟ್ಟಿವಾಳಯ್ಯ, ಬಿಷ್ಟಮ್ಮ ಮುಂತಾದ ಶರಣ-ಶರಣೆಯರು ಕೂಡಿ ಬೀಡಿ, ಘಸ್ಟೊಳ್ಳಿ, ರಾಮಾಪುರ ಮಾರ್ಗವಾಗಿ ಈ ಗ್ರಾಮಕ್ಕೆ ಬಂದು ಸೇರುತ್ತಾರೆ. ಯುದ್ಧದಲ್ಲಿ ಗಾಯಗೊಂಡ ಶರಣರು ಬರುವ ದಾರಿಯಲ್ಲಿ ಘಟ್ಟಿವಾಳಯ್ಯನವರು ವಿಧಿ ವಶರಾಗುತ್ತಾರೆ. ಅದು “ಘಟ್ಟಿವಾಳಯ್ಯನ ಹಳ್ಳಿ” ಈಗಿನ ಘಸ್ಟೊಳ್ಳಿ ಗ್ರಾಮ ಆಗಿರಬಹುದು ಎಂದು ಕೆಲವರ ಅಭಿಪ್ರಾಯ. ಇಂದಿಗೂ ಅಲ್ಲಿ ಅನೇಕ ವೀರಗಲ್ಲುಗಳು, ಗುಡಿಗಳು ನೋಡಲು ಸಿಗುತ್ತವೆ. ಮುಂದೆಯೂ ಅಲ್ಲಲ್ಲಿ ವೀರಗಲ್ಲುಗಳು, ಗುಡಿಗಳು ಸಿಗುತ್ತವೆ. ಈ ಭಾಗದ ಶೋಧ ಕಾರ್ಯ, ಸ್ಥಳ ಪರಿಶೀಲನೆ, ಶರಣರು ನಡೆದು ಬಂದ ಮಾರ್ಗದ ಸತ್ಯಶೋಧ ತಜ್ಞರಿಂದ ಆಗಬೇಕಾಗಿದೆ.
(ಲೇಖಕರು ಗೌರವಾಧ್ಯಕ್ಷರು ಕಸಾಪ ಖಾನಾಪುರ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ