Latest

ಆಶಾ ಕಾರ್ಯಕರ್ತೆಯ ಕೈಯನ್ನೇ ಮುರಿದ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ಚಿಕನ್ ಊಟ ಕೊಡಲಿಲ್ಲವೆಂದು ಕೋಪಗೊಂಡ ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿಯೊಬ್ಬ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿ ಆಕೆಯ ಕೈಯನ್ನೇ ಮುರಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ನಡೆದಿದೆ.

ರೇಣುಕಾ ಕುಡಕಿ ಗಾಯಗೊಂಡ ಆಶಾ ಕಾರ್ಯಕರ್ತೆ. ಸೋಮನಾಥ್ ಕಾಂಬಳೆ ಹಲ್ಲೆ ಮಾಡಿದ ವ್ಯಕ್ತಿ. ಚಿಕನ್ ಊಟ ಕೊಡದಿದ್ದಕ್ಕೆ ಸಿಟ್ಟಿಗೆದ್ದ ಸೋಮನಾಥ್, ಆಶಾ ಕಾರ್ಯಕರ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ರೇಣುಕಾ ಅವರ ಕೈ ಮುರಿದಿದ್ದು, ಆಳಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಬೈನಿಂದ ಬಂದಿದ್ದ ಸೋಮನಾಥ್ ಹಾಗೂ ಕುಟುಂಬದವರನ್ನು ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿದ್ದರು. ಕ್ವಾರಂಟೈನ್ ಕೇಂದ್ರದಲ್ಲಿದ್ದ ಸೋಮನಾಥ್ ಊಟಕ್ಕೆ ಚಿಕನ್ ಬೇಕು, ಮಕ್ಕಳಿಗೆ ಚಿಪ್ಸ್ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಆಶಾಕಾರ್ಯಕರ್ತೆ ರೇಣುಕಾ, ಆಹಾರ ಸರಬರಾಜು ನನ್ನಿಂದ ಆಗಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಸೋಮನಾಥ್, ರೇಣುಕಾ ಮೇಲೆ ಹಲ್ಲೆ ಮಾಡಿದ್ದಾನೆ.

ಈ ಸಂಬಂಧ ಸೋಮನಾಥ್ ಸೇರಿ ಐವರ ಮೇಲೆ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button