ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಿಗೇ ಸಮಿತಿಯ ಸದಸ್ಯ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಸೂರ್ಯಕಾಂತ್ ಎಂಬ ಸದಸ್ಯನ ವಿರುದ್ಧ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವೊಂದನ್ನು ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕಲಬುರ್ಗಿಯ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್.ಐ.ವಿ. ಪೀಡಿತ ಮಹಿಳೆಗೆ ಮಗುವೊಂದು ಜನಿಸಿತ್ತು. ಆ ಮಹಿಳೆ ಮಗುವನ್ನು ತಾನು ಸಾಕಲಾಗದೆ, ಸರ್ಕಾರಕ್ಕೆ ಕೊಡಲು ನಿರ್ಧರಿಸಿದ್ದಳು. ಈ ಸಂಬಂಧ ಮಕ್ಕಳ ಕಲ್ಯಾಣ ಸಮಿತಿ ಸಭೆ ಸೇರಿ, ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ನಿರ್ಧಾರ ಕೈಗೊಂಡಿತ್ತು. ತಾಯಿಗೆ ಹೆಚ್.ಐ.ವಿ. ಇದ್ದ ಹಿನ್ನೆಲೆಯಲ್ಲಿ ಮಗುವಿಗೆ ಟೆಸ್ಟ್ ಮಾಡಿಸಲು, ಇತರೆ ಚಿಕಿತ್ಸೆ ಕೊಡಿಸಲು ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯುವಾಗ ಘಟನೆ ನಡೆದಿದೆ ಎನ್ನಲಾಗಿದೆ.
ಬೈಕ್ ನಲ್ಲಿ ಮಗು ಕರೆದುಕೊಂಡು ಹೋಗುವಾಗ ಮೈಮುಟ್ಟಿ ಅಶ್ಲೀಲವಾಗಿ ವ್ಯಕ್ತಿ ವರ್ತಿಸಿದ್ದಾನೆ. ಈ ವೇಳೆ ಬೈಕ್ ನಿಲ್ಲಿಸಿ ತಾನು ಕಿರುಚಿಕೊಂಡಾಗ, ಮತ್ತೊಮ್ಮೆ ಹೀಗೆ ಮಾಡುವುದಿಲ್ಲವೆಂದು ಹೇಳಿದ್ದ. ಈ ಹಿಂದೆಯೂ ಹಲವಾರು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಿ.ಡಬ್ಲ್ಯು.ಸಿ. ಅಧ್ಯಕ್ಷೆ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿ ಸೂರ್ಯಕಾಂತ್ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ