Latest

ಎರಡೇ ದಿನದಲ್ಲಿ ನೌಕರಿ ನೀಡಿ ಮಾನವೀಯತೆ ಮೆರೆದ ಡಿಸಿ ಯಶವಂತ ವಿ. ಗುರುಕರ್

ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ತನ್ನ ಗಂಡ ಮೃತರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಕೇವಲ ಎರಡೇ ದಿನದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಉದ್ಯೋಗ ನೀಡಿ, ಸಂತ್ರಸ್ತ ಕುಟುಂಬಕ್ಕೆ ನೆರವಾಗಿದ್ದಾರೆ.

ಕಲಬುರಗಿ ತಾಲೂಕಿನ ಕುಸನೂರಿನ ಶಿವಲಿಂಗಮ್ಮ ಗಂಡ ದಿ. ಮಾಳಿಂಗರಾಯ ಇವರೇ ನೌಕರಿ ಪಡೆದವರು. ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಜನವರಿ 25 ರಂದು ತಮ್ಮ ಕಚೇರಿ ಮುಂದೆ ಇಬ್ಬರು ಮಕ್ಕಳೊಂದಿಗೆ ಕಾದು ಕುಳಿತಿರುವುದನ್ನು ಕಂಡು ಸ್ವತ: ಜಿಲ್ಲಾಧಿಕಾರಿಗಳೇ ಮಹಿಳೆಯ ಬಳಿ ತೆರಳಿದರು. ಏನು ನಿಮ್ಮ ಸಮಸ್ಯೆ ಎಂದು ಕೇಳಿದಾಗ, ತನ್ನ ಗಂಡ ಆಳಂದ ತಾಲ್ಲೂಕಿನ ಖಜೂರಿ ನಾಡಾ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ಕರ್ತವ್ಯದಲ್ಲಿದ್ದಾಗ ದಿನಾಂಕ: 16-03-2021ರಂದು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದು, ಅನುಕಂಪ ಆಧಾರದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದರು.

ಕೂಡಲೇ ಜಿಲ್ಲಾಧಿಕಾರಿಗಳು, ಈ ಮಹಿಳೆಗೆ 2 ದಿನದಲ್ಲಿ ನೌಕರಿ ಆದೇಶ ನೀಡಲು ಕ್ರಮವಹಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದೀಗ ಇಂದು ಮಹಿಳೆ ಕೋರಿದ ಸ್ಥಳವಾದ ಕಲಬುರಗಿ ತಹಸೀಲ್ದಾರ ಕಚೇರಿಯ ಖಾಲಿಯಿದ್ದ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೇಮಕಾತಿಯ ಆದೇಶ ನೀಡಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಮಾನವೀಯತೆ ಮೆರೆದಿದ್ದಾರೆ.

Home add -Advt

Related Articles

Back to top button