Latest

ಘಟಪ್ರಭಾ, ಮಲಪ್ರಭಾಕ್ಕೆ ಹರಿಯಲಿ ಕಾಳಿ ನೀರು !

ಸಂಗಮೇಶ ಆರ್. ನಿರಾಣಿ,

ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ

ಜಗದ ಮೂಲವೇ ಜೀವಜಲ

ನೀರು ಜೀವ ಜಗತ್ತಿನ ಮೂಲ ಆಧಾರ. ಭೂಮಿಯ ಮೇಲೆ ೩/೧ ಭಾಗ ನೀರಿದ್ದರೂ, ಒಟ್ಟು ಜಲ ರಾಶಿಯಲ್ಲಿ ೯೭% ಸಮುದ್ರದ ಉಪ್ಪು ನೀರು. ಕೇವಲ ೩% ಮಾತ್ರ ಸಿಹಿ ನೀರಿನ ಲಭ್ಯತೆ ಇದೆ. ಈ ೩% ನೀರಿನಲ್ಲಿ ೨.೭% ನೀರು ಹಿಮ ಮತ್ತು ಮಂಜುಗಡ್ಡೆಯಿಂದ ಆವೃತವಾಗಿದೆ. ಉಳಿದದ್ದು ೦.೩% ಮಾತ್ರ. ಇದರಲ್ಲಿ ೦.೨% ಕೃಷಿ ಚಟುವಟಿಕೆಗಳಿಗಾಗಿ ಬಳಸುತ್ತೇವೆ. ಉಳಿದ ೦.೧% ನೀರನ್ನು ಕುಡಿಯುವ ನೀರು ಹಾಗೂ ಕಾರ್ಖಾನೆಗಳಿಗಾಗಿ ಬಳಸುತ್ತೇವೆ. ಆದರೆ ಈ ೦.೩% ನೀರು ಜಗತ್ತಿನಾದ್ಯಂತ ಸರಿಸಮಾನವಾಗಿ ಹಂಚಿಕೆಯಾಗಿಲ್ಲ. ಬ್ರೆಜಿಲ್ ಒಂದೇ ದೇಶದಲ್ಲಿ ೦.೩% ಸಿಹಿನೀರಿನ ೨೦% ಲಭ್ಯವಿದೆ. ಆದರೆ ಅಲ್ಲಿಯ ಜನಸಂಖ್ಯೆಯ ಜಗತ್ತಿನ ಜನಸಂಖ್ಯೆಯ ೨.೫% ಮಾತ್ರ. ಭಾರತದ ಜನಸಂಖ್ಯೆ ಜಗತ್ತಿನ ಜನಸಂಖ್ಯೆಯ ೧೭% ಆದರೆ ನಮಗೆ ದೊರೆತ ನೀರಿನ ಪ್ರಮಾಣ ೪% ಮಾತ್ರ. ಚೀನಾದ್ದು ೧೯% ಜನಸಂಖ್ಯೆ ಅವರಿಗೆ ಲಭ್ಯವಿರುವ ನೀರಿನ ಪ್ರಮಾಣ ೬% ಮಾತ್ರ. ಹೀಗಾಗಿ ಇರುವ ನೀರಿನ ಲಭ್ಯತೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು.

ಕರ್ನಾಟಕದ ಭೂಮಿ ಫಲವತ್ತಾಗಿದೆ. ಆದರೆ ಎಲ್ಲ ಕಡೆಯೂ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೇ.೬೦ರಷ್ಟು ಕೃಷಿ ಭೂಮಿ ಮಳೆಯಾಧಾರಿತವಾಗಿದೆ. ಕರ್ನಾಟಕದ ಒಟ್ಟು ೧,೯೧,೭೩೧ ಚ.ಕಿ.ಮೀ ಭೂಮಿಯಲ್ಲಿ ಶೇ.೨೦ ಭೂಮಿ ಅರಣ್ಯವಿದೆ. ಉಳಿದರಲ್ಲಿ ಅಂದಾಜು ೧,೨೮,೦೦೦ ಚ.ಕಿ.ಮೀ. ಭೂ-ಪ್ರದೇಶ ಕೃಷಿಯೋಗ್ಯವಾಗಿದೆ. ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ ಶೇ.೪೦.೪೫ರಷ್ಟು ಭೂಮಿ. ಅಂದರೆ ೫೧ ದಶಲಕ್ಷ ಹೆಕ್ಟೇರ್ ಜಮೀನನ್ನು ವಿವಿಧ ಮೂಲಗಳಿಂದ ನೀರಾವರಿಗೆ ಒಳಪಟ್ಟಿದೆ. ಇನ್ನು ಶೇ.೬೦ರಷ್ಟು ಭೂಮಿ ಮಳೆಯಾಧಾರಿತ ಬೇಸಾಯಕ್ಕೆ ಒಳಪಟ್ಟಿದೆ. ರಾಜಸ್ಥಾನದ ನಂತರ ಅತಿಹೆಚ್ಚು ಒಣಭೂಮಿ ಹಾಗೂ ಬರಗಾಲ ಪೀಡಿತ ಪ್ರದೇಶ ಕರ್ನಾಟಕಲ್ಲಿರುವುದು ನಮ್ಮ ಕೃಷಿ ಪ್ರಗತಿಗೆ ಮಾರಕವಾದ ಆಂಶವಾಗಿದೆ ಎಂಬುದು ತುಂಬ ನೋವಿನ ಸಂಗತಿ.

ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಉಪಯೋಗಿಸಲು, ಮಹಾಪೂರವನ್ನು ನಿಯಂತ್ರಿಸಲು, ಬರಗಾಲಗಳ ಹಾವಳಿಯನ್ನು ತಗ್ಗಿಸಲು, ಅಂತರ್ಜಲಮಟ್ಟವನ್ನು ಪುನಶ್ಚೇತನಗೊಳಿಸಲು, ಜಲವಿದ್ಯುತ್ ತಯಾರಿಸಲು ತಂತ್ರಜ್ಞಾನ ಬಳಸಿಕೊಂಡು ಅನುಷ್ಠಾನಗೊಳಿಸುವ ನೀರಾವರಿ ಯೋಜನೆಗಳಿಂದ ಸಾಧ್ಯವಿದೆ. ಇದರಿಂದ ನೀರಾವರಿ ಪ್ರದೇಶದ ಗಾತ್ರ ವೃದ್ದಿಸಿ, ಕೃಷಿ ಉತ್ಪಾದನೆಯನ್ನು ಹೆಚ್ಚಿsಸಿ ರೈತರ ಆರ್ಥಿಕ ವರಮಾನವನ್ನು ಹಾಗೂ ಆ ಮೂಲಕ ದೇಶದ ವಾರ್ಷಿಕ ಆದಾಯವನ್ನು ಉನ್ನತಿಕರಿಸಲು ಸಾಧ್ಯವಿದೆ.

ಕರ್ನಾಟಕದ ಒಟ್ಟು ಜಲರಾಶಿಯಲ್ಲಿ ೨,೦೦೦ ಟಿಎಂಸಿಯಷ್ಟು ಹೇರಳವಾದ ಜಲಸಂಪತ್ತು ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದ ದೊರೆಯುತ್ತದೆ. ಈ ನೀರು ಜಲವಿದ್ಯುತ್ ತಯಾರಿಕೆಗಷ್ಟೆ ಬಳಕೆಯಾಗಿ ನೇರವಾಗಿ ಸಮುದ್ರ ಸೇರುತ್ತಿದೆ. ಈ ನೀರಿನಲ್ಲಿಯ ಸ್ವಲ್ಪ ಪ್ರಮಾಣದ ನೀರನ್ನು ಬಯಲುಸೀಮೆಯ ಕೊರತೆ ಇರುವ ನದಿಪಾತ್ರಗಳಿಗೆ ಹರಿಸಿದರೆ ಆ ಭಾಗದಲ್ಲಿ ಕೃಷಿಯನ್ನು ಸಮೃದ್ದಗೊಳಿಸಬಹುದು.

ಸ್ವಾತಂತ್ರ್ಯಕ್ಕೂ ಮೊದಲೇ ೧೫೦ ವರ್ಷಗಳ ಹಿಂದೆ ಬ್ರಿಟೀಷ್ ಆಡಳಿತದಲ್ಲಿ ಕೇರಳದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಪೆರಿಯಾರ್ ನದಿಗೆ ಮುಲ್ಲಾಪೆರಿಯಾರ ಆಣೆಕಟ್ಟು ನಿರ್ಮಿಸಿ ಪೂರ್ವಾಭಿಮುಖವಾಗಿ ತಿರುಗಿಸಿ ಟನಲ್ ಮೂಲಕ ಹರಿಸಿ ತಮಿಳುನಾಡಿನ ೪ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದ ಮಾದರಿಯಲ್ಲಿ ಕಾಳಿ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸಿದರೆ ಉತ್ತರ ಕರ್ನಾಟಕಕ್ಕೆ ವರದಾನವಾಗುವುದು.

ಸರ್ಕಾರ ಈಗಾಗಲೇ ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪೂರ, ಬೆಂಗಳೂರು ಗ್ರಾಮಾಂತರ, ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರು, ಅಂತರ್ಜಲ ವೃದ್ದಿ ಹಾಗೂ ಕೆರೆ ತುಂಬಿಸಲು ಪಶ್ಚಿಮಾಭಿಮುಖವಾಗಿ ಹರಿಯುವ ನೇತ್ರಾವತಿ ನದಿಯ ಉಪನದಿಗಳನ್ನು ಉಪಯೋಗಿಸಿ ೧೨,೯೩೧ ಕೋಟಿ ರೂ. ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಮಹಾದಾಯಿ ನದಿ ನೀರನ್ನು ಕಳಸಾ-ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ನದಿಗೆ ಹರಿಸಲು ಸರ್ಕಾರ ಸಜ್ಜಾಗಿದೆ. ವರದಾ-ಬೇಡ್ತಿ ನದಿಜೋಡಣೆ, ಶರಾವತಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳುವುದು ಸೇರಿದಂತೆ ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆಗಳು ಸರ್ಕಾರದ ಚಿಂತನೆಯಲ್ಲಿವೆ.

ಎತ್ತಿನಹೊಳೆಯ ಯೋಜನೆಯ ಮಾದರಿಯಲ್ಲಿ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕದ ಮಲಪ್ರಭಾ-ಘಟಪ್ರಭಾ ನದಿಗಳಿಗೆ ಹರಿಸಿದರೆ, ಬೆಳಗಾವಿ, ಧಾರವಾಡ, ಬಾಗಲಕೋಟ & ಗದಗ ಜಿಲ್ಲೆಗಳ ನೀರಿನ ಬವಣೆಯನ್ನು ತಪ್ಪಿಸಬಹುದು.

ಕಾಳಿ-ಮಲಪ್ರಭಾ-ಘಟಪ್ರಭಾ ಯೋಜನೆ

ಕಾಳಿ ನದಿಯು ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಜೊಯ್ಡಾ ತಾಲೂಕಿನ ಡಿಗ್ಗಿ ಎಂಬಲ್ಲಿ ಹುಟ್ಟಿದೆ. ಪಾಂಡ್ರಿ, ತಟ್ಟಿ ಹಳ್ಳ ಮತ್ತು ಡೊಂಕ ನಾಲಾ ಎಂಬ ಚಿಕ್ಕ ನದಿ, ಹಳ್ಳಗಳು ಕಾಳಿಯನ್ನು ಸೇರುತ್ತವೆ. ಕಾಳಿನದಿಯು ೪,೧೮೮ ಚದರ ಕಿ.ಮಿ ಜಲಾನಯನ ಪ್ರದೇಶವನ್ನು ಹೊಂದಿದೆ. ಈ ನದಿಯು ೧೫೯ ಕಿ.ಮೀ ಉದ್ದ ಹರಿದು ಕಾರವಾರ ಬಳಿಯ ಸದಾಶಿವಗಡ ಎಂಬಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತಿದೆ.

ಕಾಳಿನದಿಗೆ ಸೂಪಾ, ಬೊಮ್ಮನಹಳ್ಳಿ, ಕೊಡಸಳ್ಳಿ ಹಾಗೂ ೪ ಜಲಾಶಯಗಳನ್ನು ಕಟ್ಟಲಾಗಿದ್ದು, ಸೂಪಾದಲ್ಲಿ ೧೦೦ ಮೆ.ವ್ಯಾಟ್, ಅಂಬಿಕಾನಗರ ಬಳಿಯ ನಾಗಝರಿ ಎಂಬಲ್ಲಿ ಬೊಮ್ಮನಹಳ್ಳಿ ಜಲಾಶಯದಲ್ಲಿಯ ನೀರನ್ನು ಉಪಯೋಗಿಸಿಕೊಂಡು ೮೫೫ ಮೆ.ವ್ಯಾಟ್, ಕೊಡಸಳ್ಳಿ ಜಲಾಶಯದಲ್ಲಿ ೧೨೦ ಮೆ. ವ್ಯಾಟ್ ಹಾಗೂ ಕದ್ರಾ ಜಲಾಶಯದಲ್ಲಿ ೧೫೦ ಮೆ.ವ್ಯಾಟ್ ಸೇರಿ ಒಟ್ಟು ೧೨೫೦ ಮೆ. ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ನದಿಯ ನೀರನ್ನು ಕೃಷಿ ಕಾರ್ಯಗಳಿಗೆ ಬಳಸಲಾಗುವುದಿಲ್ಲ. ಎಲ್ಲ ನೀರು ನೇರವಾಗಿ ಹರಿದು ನದಿ ಸೇರುತ್ತವೆ. ನಿಜಕ್ಕೂ ಇದು ದೊಡ್ಡ ಹಾನಿಕಾರಕ ಸಂಗತಿ. ಇದರಲ್ಲಿ ೨೫ ಟಿ.ಎಂ.ಸಿ ನೀರನ್ನು ಮಲಪ್ರಭಾ-ಘಟಪ್ರಭಾಕ್ಕೆ ಹರಿಸಿದರೆ ಈ ಭಾಗದ ಭಾಗ್ಯದ ಬಾಗಿಲು ತೆರೆಯುತ್ತದೆ.

ಎರಡು ಸರಳ ವಿಧಾನಗಳನ್ನು ನದಿ ಜೋಡಣೆಯ ಕಾರ್ಯಕ್ಕೆ ರೂಪಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತಿವೆ.

ಆಯ್ಕೆ-೧: ಸೂಪಾ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಯಾದ ನಂತರ ಲಭ್ಯವಾಗುವ ನೀರನ್ನು ಪಶ್ಚಿಮ ಘಟ್ಟಗಳ ಅರಣ್ಯದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಅಳ್ನಾವರ ಮೂಲಕ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಏತ ನೀರಾವರಿ ಯೋಜನೆಯ ಪೈಪಲೈನ್ ಮೂಲಕ ಮಲಪ್ರಭಾ ಹಾಗೂ ಘಟಪ್ರಭಾ ನದಿಗೆ ನೀರು ಹರಿಸಬಹುದು. ೨ ಹಂತದಲ್ಲಿ ನೀರನ್ನು ಲಿಪ್ಟ್ ಮಾಡುವ ಯೋಜನೆ ಇದಾಗಿದ್ದು, ದಿನದ ೧೮ ಗಂಟೆ ವರ್ಷದ ೮ ತಿಂಗಳು ಲಿಫ್ಟಿಂಗ್ ಮೂಲಕ ವಾರ್ಷಿಕ ೨೫ ಟಿಎಂಸಿ ನೀರನ್ನು ೨ ನದಿಗಳಿಗೆ ಹರಿಸಬಹುದು.

ಸ್ಟೇಜ್-೧ ಲಿಪ್ಟಿಂಗ್: ಮೊದಲ ಹಂತದಲ್ಲಿ ಸಮುದ್ರ ಮಟ್ಟದಿಂದ ೪೩೦ಮಿ. ಎತ್ತರದಲ್ಲಿರುವ ಸೂಪಾ ಜಲಾಶಯದ ಕೆಳಭಾಗದಲ್ಲಿ ಒಂದು ತಿರುವು ತಡೆಗೊಡೆ ನಿರ್ಮಿಸಿ, ನೀರನ್ನು ಏತ್ತಿ ದಾಂಡೆಲಿಯಿಂದ ಉತ್ತರದಲ್ಲಿರುವ ಎಸ್.ಎಚ್.೩೪ ಹೆದ್ದಾರಿ ಪಕ್ಕದಲ್ಲಿ ಎಮ್‌ಎಸ್. ಪೈಪಲೈನ್ ಮೂಲಕ ೨೮ ಕಿ.ಮೀ ದೂರದಲ್ಲಿ ಸಮುದ್ರಮಟ್ಟದಿಂದ ೬೦೨.೫೦ ಮಿ. ಎತ್ತರದಲ್ಲಿರುವ ಅಳ್ನಾವರವರೆಗೆ ನೀರು ಹರಿಸುವುದು.

ಸ್ಟೇಜ್-೨ ಲಿಪ್ಟಿಂಗ್: ಅಳ್ನಾವರ್‌ದಲ್ಲಿ ಬ್ಯಾರೇಜ್ ನಿರ್ಮಿಸಿ, ಸ್ಟೇಜ್-೧ ಲಿಪ್ಟಿಂಗ್‌ನಲ್ಲಿ ದೊರೆಯುವ ನೀರನ್ನು ಒಂದು ಪೈಪಲೈನ್ ಮೂಲಕ ಅಳ್ನಾವರದಿಂದ ರಸ್ತೆ ಪಕ್ಕದಲ್ಲಿ ಪೈಪಲೈನ್ ಮೂಲಕ ೪೦ ಕಿ.ಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ-೪ನ್ನು ದಾಟಿಕೊಂಡು ಎಮ್.ಕೆ. ಹುಬ್ಬಳ್ಳಿ ಬಳಿ ಮಲಪ್ರಭಾ ನದಿಗೆ ಸೇರಿಸುವುದು. ಎಮ್.ಕೆ. ಹುಬ್ಬಳ್ಳಿಯಿಂದ ಇದೇ ಪೈಪಲೈನ್ ಮೂಲಕ ಅಲ್ಲಿಂದ ೫೦ ಕಿ.ಮೀ ಅಂತರದಲ್ಲಿರುವ ಹುಕ್ಕೇರಿ ತಾಲೂಕಿನ ಶಿರೂರ ಬಳಿಯ ಮಾರ್ಕಂಡೇಯ ಜಲಾಶಯಕ್ಕೆ ಮತ್ತು ೬೦ಕಿ.ಮೀ ಅಂತರದಲ್ಲಿರುವ ಹಿಡಕಲ್ ಜಲಾಶಯಕ್ಕೆ ನೀರು ಹರಿಸಬಹುದು.

ಅಳ್ನಾವರ ಬ್ಯಾರೇಜ್‌ನಿಂದ ಇನ್ನೊಂದು ಪೈಪಲೈನ್ ಮೂಲಕ ಎಸ್.ಎಚ್.೩೪ ಹೆದ್ದಾರಿಯ ಇಕ್ಕೆಲದಲ್ಲಿ ಅಳ್ನಾವರದಿಂದ ೩೪ ಕಿ.ಮೀ. ದೂರದಲ್ಲಿರುವ ಸಮುದ್ರ ಮಟ್ಟದಿಂದ ೭೦೫ ಮೀ. ಎತ್ತರದಲ್ಲಿರುವ ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದವರೆಗೆ ನೀರನ್ನು ಹರಿಸಬಹುದು. ಅಲ್ಲಿಂದ ಅವಶ್ಯವಿರುವ ಬರಪೀಡಿತ ಪ್ರದೇಶಕ್ಕೆ ಕಾಲುವೆ ಮುಖಾಂತರ ನೀರು ಹರಿಸಬಹುದು.

ಯೋಜನೆಯ ಅನುಷ್ಟಾನಕ್ಕೆ ಮೊದಲ ಹಂತದ ಲಿಪ್ಟಿಂಗ್‌ಗೆ ೮೦ ಮೇಗಾ ವ್ಯಾಟ್ ಮತ್ತು ದ್ವಿತೀಯ ಹಂತದ ಲಿಪ್ಟಿಂಗ್‌ಗೆ ೮೦ ಮೆಗಾವ್ಯಾಟ್ ಸೇರಿ ೧೬೦ ಮೆ.ವ್ಯಾಟ್ ವಿದ್ಯುತ್ ಅವಶ್ಯಕವಿರುತ್ತದೆ. ಈ ಮೂಲಕ ವಾರ್ಷಿಕ ಘಟಪ್ರಭಾ ನದಿಗೆ ೧೦ ಟಿಎಂಸಿ ಹಾಗೂ ಮಲಪ್ರಭಾ ನದಿಗೆ ೧೦ ಟಿಎಂಸಿ ಮತ್ತು ಧಾರವಾಡದ ನರೇಂದ್ರ ಬಳಿ ೫ ಟಿಎಂಸಿ ಕಾಳಿನದಿಯ ನೀರನ್ನು ೫,೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ತರ ಕರ್ನಾಟಕಕ್ಕೆ ಹರಿಸಬಹುದು.

ಕಡಿಮೆ ವಿದ್ಯುತ್ ಹಾಗೂ ಕಡಿಮೆ ವೆಚ್ಚದ ಪರ್ಯಾಯ ಅವಕಾಶ

ಆಯ್ಕೆ – ೨ ಸೂಪಾ ಜಲಾಶಯದ ನೀರನ್ನು ಮಲಪ್ರಭಾ ನದಿಗೆ ಹರಿಸುವುದು: ಸೂಪಾ ಜಲಾಶಯದಲ್ಲಿ ಸಂಗ್ರಹವಾದ ಕಾಳಿನದಿಯ ನೀರನ್ನು ಮಲಪ್ರಭಾ ನದಿಗೆ ನೀರು ಹರಿಸಲು ಮೊದಲ ಹಂತದಲ್ಲಿ ಸಮುದ್ರಮಟ್ಟದಿಂದ ೫೫೪ ಮೀ. ಎತ್ತರದಲ್ಲಿರುವ ಸೂಫಾ ಜಲಾಶಯದ ನೀರನ್ನು, ಸಮುದ್ರಮಟ್ಟದಿಂದ ೬೬೬ ಮೀ. ಎತ್ತರದವರೆಗೆ ಜಾಕವೆಲ್ ಮತ್ತು ಪಂಪಹೌಸ್ ಸಹಾಯದಿಂದ ೩.೩ ಮೀ ಸುತ್ತಳತೆಯ ಎಮ್.ಎಸ್. ಪೈಪಲೈನ್‌ನಲ್ಲಿ ಮೇಲೆತ್ತಿ ಅಲ್ಲಿಂದ ೧ ಕಿ. ಮೀ ದೂರದಲ್ಲಿರುವ ಗ್ರಾವಿಟಿ ಸುರಂಗ ಮಾರ್ಗದವರೆಗೆ ನೀರನ್ನು ಹರಿಸುವುದು. ೫.೫ ಸುತ್ತಳತೆಯ ೩೩ ಕಿ.ಮೀ ಉದ್ದದ ಸುರಂಗದಲ್ಲಿ ನೀರು ಪಶ್ಚಿಮ ಘಟ್ಟಗಳನ್ನು ದಾಟಿ ಸಮುದ್ರ ಮಟ್ಟದಿಂದ ೬೪೪ ಮೀ. ಎತ್ತರದಲ್ಲಿರುವ ಮಲಪ್ರಭಾ ನದಿಗೆ ಸೇರುತ್ತದೆ. ಹೀಗೆ ವಾರ್ಷಿಕ ೨೫ ಟಿಎಂಸಿ ಕಾಳಿ ನದಿ ನೀರನ್ನು ಮಲಪ್ರಭಾ ನದಿಗೆ ತಲುಪಿಸಬಹುದು. ಲಿಪ್ಟ್ ಅಳವಡಿಕೆ, ಗ್ರಾವಿಟಿ ಸುರಂಗ ಮಾರ್ಗ ನಿರ್ಮಾಣ, ಪೈಪಲೈನ್ ಸೇರಿದಂತೆ ಮೊದಲ ಹಂತದ ಯೋಜನಾ ವೆಚ್ಚವು ೨೩೮೦.೦೦ ಕೋಟಿ ರೂ.ಗಳು ಆಗುತ್ತದೆ.

ಮಲಪ್ರಭಾ ನದಿಯಿಂದ ಬಳ್ಳಾರಿ ನಾಲೆಗೆ ನೀರು ಹರಿಸುವುದು: ಯೋಜನೆಯಿಂದಾಗಿ ಕಾಳಿ ನದಿಯಿಂದ ಬಂದ ವಾರ್ಷಿಕ ೨೫ ಟಿಎಂಸಿ ನೀರಿನಲ್ಲಿ, ೧೫ ಟಿಎಂಸಿ ನೀರನ್ನು ಮಲಪ್ರಭಾ ನದಿ ಮೂಲಕ ಹರಿಸಿ ನವಿಲುತೀರ್ಥ ಜಲಾಶಯದಲ್ಲಿ ಸಂಗ್ರಹಿಸುವುದು ಹಾಗೂ ಉಳಿದ ೧೦ ಟಿಎಂಸಿ ನೀರನ್ನು ಘಟಪ್ರಭಾ ನದಿಗಾಗಿ ಹಿಡಕಲ್ ಜಲಾಶಯಕ್ಕೆ ಸಾಗಿಸವುದು. ಮಲಪ್ರಭಾ ನದಿಯಿಂದ ಬಳ್ಳಾರಿ ನಾಲೆಗೆ ನೀರನ್ನು ಲಿಫ್ಟ್ ಮಾಡಿದರೆ ಘಟಪ್ರಭಾ ನದಿಗೆ ನೀರು ಹರಿಸಬಹುದು. ಸಮುದ್ರ ಮಟ್ಟದಿಂದ ೬೪೪ ಮೀ ಎತ್ತರದಲ್ಲಿರುವ ಮಲಪ್ರಭಾ ನದಿಯಿಂದ ೭೫೦ ಮೀ ಎತ್ತರದವರೆಗೂ ೧೮ ಕಿ.ಮೀ ದೂರದವರೆಗೂ ನೀರನ್ನು ಲಿಪ್ಟ್ ಮಾಡಿ ೩.೩ ಸುತ್ತಳತೆಯ ಪೈಪಲೈನ್ ಮೂಲಕ ಬಳ್ಳಾರಿ ನಾಲೆಗೆ ತಂದು ಸೇರಿಸುವುದು. ಈ ಹಂತದ ಒಟ್ಟು ಯೋಜನಾ ವೆಚ್ಚವು ರೂ. ೭೨೦ ಕೋಟಿಯಾಗುತ್ತದೆ.

ಬಳ್ಳಾರಿ ನಾಲೆಯಿಂದ ಘಟಪ್ರಭಾ ನದಿಗೆ ನೀರು ಹರಿಸುವುದು: ಬಳ್ಳಾರಿ ನಾಲೆಯಿಂದ ೧೮ ಕಿ.ಮೀ. ಉದ್ದದ ಗ್ರಾವಿಟಿ ಸುರಂಗ ಮಾರ್ಗದ ಮೂಲಕ ನೀರನ್ನು ಹಿಡಕಲ್ ಡ್ಯಾಂಗೆ ಸೇರಿಸುವುದು. ಹೀಗೆ ವಾರ್ಷಿಕ ೧೦ ಟಿಎಂಸಿ ಕಾಳಿನದಿಯ ನೀರನ್ನು ಹಿಡಕಲ್ ಜಲಾಶಯಕ್ಕೆ ಸೇರಿಸಬಹುದು. ಈ ಹಂತದ ಯೋಜನಾ ವೆಚ್ಚವು ೭೨೦ ಟಿಎಂಸಿ ಆಗುತ್ತದೆ. ಈ ಮೂರು ಹಂತದ ಯೋಜನೆಯ ಒಟ್ಟು ವೆಚ್ಚ ೩೮೨೦.೦೦ ಕೋಟಿಯಷ್ಟಾಗುತ್ತದೆ.

ಕಡಿಮೆ ಖರ್ಚು ಹಾಗೂ ತಾಂತ್ರಿಕ ತೊಂದರೆಯಿಲ್ಲದೇ ಉತ್ತರ ಕರ್ನಾಟಕದ ೪ ಜಿಲ್ಲೆಗಳನ್ನು ಸಮೃದ್ದಗೊಳಿಸಬಹುದು:

ಕಾಳಿ ನದಿಯು ನಮ್ಮ ರಾಜ್ಯದಲ್ಲಿಯೇ ಹುಟ್ಟಿ ನಮ್ಮ ರಾಜ್ಯದಲ್ಲಿಯೇ ಸಮುದ್ರ ಸೇರುತ್ತದೆ. ಯಾವುದೇ ಅಂತರಾಜ್ಯ ಕಿರಿಕಿರಿ ಇಲ್ಲ ಅದಲ್ಲದೇ ಯಾವುದೇ ನೀರಾವರಿ ಯೋಜನೆಯನ್ನು ಸರ್ಕಾರ ಕೈಗೊಂಡಾಗ ಭೂ-ಸ್ವಾಧೀನ, ಪುನರ್‌ವಸತಿ& ಪುನರ್ ನಿರ್ಮಾಣ, ಕಾಲುವೆ ನಿರ್ಮಾಣದಂತಹ ಕೆಲಸಗಳು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗುತ್ತವೆ. ಇಲ್ಲಿ ಸೂಫಾ ಡ್ಯಾಂ, ನವೀಲುತೀರ್ಥ ಡ್ಯಾಂ ಹಾಗೂ ಮಾರ್ಕಂಡೆಯ ಡ್ಯಾಂ ಕಾಮಗಾರಿ ಈಗಾಗಲೇ ಪೂರ್ಣಗೊಂಡಿವೆ. ಕೇವಲ ಏತ ನೀರಾವರಿಗೆ ಸಂಬಂಧಿಸಿದ ಪೈಪಲೈನ್ ನಿರ್ಮಾಣ ಹಾಗೂ ಪಂಪಹೌಸ್ ಮತ್ತು ಇನ್ನಿತರ ಕಾಮಗಾರಿಗಾಗಿ ಮಾತ್ರ ಸರ್ಕಾರ ಹಣ ವ್ಯಯಿಸಬೇಕು. ಹೀಗಾಗಿ ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗುವುದಿಲ್ಲ.

ಮಲಪ್ರಭಾ ನದಿಗೆ ಕಟ್ಟಲಾದ ರೇಣುಕಾಸಾಗರ ಜಲಾಶಯ ನೀರಿನ ಕೊರತೆ ಅನುಭವಿಸುತ್ತಿದೆ. ಈ ಜಲಾಶಯವನ್ನು ನಂಬಿ ಸರ್ಕಾರ ೨೨,೦೦೦ ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಕಾಲುವೆಗಳು, ಉಪಕಾಲುವೆಗಳು ನೀರಿಲ್ಲದೇ ಅನಾಥವಾಗಿವೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟ ಸೇರಿದಂತೆ ಹಲವಾರು ನಗರ ಮತ್ತು ಪಟ್ಟಣ ಪ್ರದೇಶಗಳು ನೂರಾರು ಹಳ್ಳಿಗಳು ಕುಡಿಯುವ ನೀರು ಕೃಷಿಗಾಗಿ ಮಲಪ್ರಭಾ ಹಾಗೂ ಘಟಪ್ರಭಾ ನದಿಯನ್ನೇ ಅವಲಂಭಿಸಿವೆ. ಈ ನದಿಗಳು ಸಮೃದ್ದವಾದರೆ ಉತ್ತರ ಕರ್ನಾಟಕದ ೪ ಜಿಲ್ಲೆಗಳು ಸಮೃದ್ದವಾಗುತ್ತವೆ.

ಎಂ.ಆರ್.ಎನ್ (ನಿರಾಣಿ) ಫೌಂಡೇಶನ್ ವರದಿ:

ಅತಿಹೆಚ್ಚು ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ಉತ್ತರ ಕರ್ನಾಟಕ ನೀರಾವರಿಯಿಂದ ವಂಚಿತವಾಗಿದೆ. ಇರುವ ನೀರಾವರಿ ಭೂಮಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸುವ ಜೊತೆಗೆ ಹೊಸ ೨.೫ ಲಕ್ಷ ಎಕರೆ ಹೊಸ ಅಚ್ಚುಕಟ್ಟು ಪ್ರದೇಶವನ್ನು ಸೃಷ್ಟಿಸಲು ಸಾಧ್ಯವಿದೆ. ಈಗಾಗಲೇ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ ರಾಜ್ಯಗಳು ನೀರಾವರಿಯಲ್ಲಿ ಅದ್ಬುತ ಸಾಧನೆ ಮಾಡಿವೆ. ತೆಲಂಗಾಣದ ಕಾಲೇಶ್ವರಂ, ಆಂದ್ರಪ್ರದೇಶದ ಪಟ್ಟೆಸೀಮಾ, ಗುಜರಾತ್‌ನ ಸುಜಲಾಂ ಸುಫಲಾಂ, ಮಧ್ಯಪ್ರದೇಶದ ನರ್ಮದಾ ಕ್ಷಿಪ್ರಾ ನದಿ ಜೋಡಣೆ ಯೋಜನೆಗಳು ನಮಗೆ ಮಾದರಿಯಾಗಬೇಕು. ಈ ದೆಸೆಯಲ್ಲಿ ಉತ್ತರ ಕರ್ನಾಟಕದಲ್ಲಿ ಇಂತಹ ಯೋಜನೆಗಳ ಅವಶ್ಯಕತೆ ಇದೆ, ಹಾಗಾಗಿ ಉತ್ತರ ಕರ್ನಾಟಕ ಸಮಗ್ರ ನೀರಾವರಿಯ ಸಂಕಲ್ಪದೊಂದಿಗೆ ಸಹೋದರ ಬೀಳಗಿ ಶಾಸಕರಾದ ಮುರುಗೇಶ ನಿರಾಣಿಯವರು ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ ಮೂಲಕ ೩ ನದಿಜೋಡಣೆ ಯೋಜನೆಗಳ ವಿಸ್ಕೃತ ಯೋಜನೆಯನ್ನು ರೂಪಿಸಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿ ಉತ್ತರ ಕರ್ನಾಟಕ ನೀರಾವರಿಗೆ ಹೊಸಭಾಷ್ಯ ಬರೆಯಲಿ.

(ಇಲ್ಲಿರುವುದು ಲೇಖಕರ ಅಭಿಪ್ರಾಯ. ಇದಕ್ಕೆ ಪ್ರತಿಕ್ರಿಯೆಗಳನ್ನು ನೀಡಬಹುದು. [email protected])

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button