Kannada NewsLatest

ಭೂವರಹನಾಥಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ

ಪ್ರಗತಿವಾಹಿನಿ ಸುದ್ದಿ: ಕಲ್ಲಹಳ್ಳಿ; ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧವಾದ ಕಲ್ಲಹಳ್ಳಿಯ ಭೂವರಹನಾಥಸ್ವಾಮಿಗೆ ರೇವತಿ ನಕ್ಷತ್ರದ ಅಂಗವಾಗಿ ವಿಶೇಷ ಅಭಿಷೇಕ ಹಾಗೂ ಪೂಜೆ ಪುರಸ್ಕಾರಗಳು ಸಡಗರ ಸಂಭ್ರಮದಿಂದ ನಡೆದವು.

1 ಸಾವಿರ ಲೀಟರ್ ಹಾಲು, 500ಲೀಟರ್ ಕಬ್ಬಿನ ಹಾಲು 500ಲೀಟರ್ ಎಳನೀರು, ಜೇನುತುಪ್ಪ, ಮೊಸರು, ಹಸುವಿನ ತುಪ್ಪ, ಶ್ರೀಗಂಧ, ಅರಿಶಿನ ಹಾಗೂ ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಿ ಗುಲಾಬಿ, ಮಲ್ಲಿಗೆ ಸೇವಂತಿಗೆ, ಜಾಜಿ, ಕನಕಾಂಬರ, ಮರುಗ, ಸಂಪಿಗೆ, ಪನ್ನೀರು ಹೂವು, ಕಮಲ, ಸೂಜಿಮಲ್ಲಿಗೆ, ತುಳಸಿ, ಪವಿತ್ರ ಪತ್ರೆಗಳು, ಜವನ ಸೇರಿದಂತೆ 58. ಬಗೆಯ ವಿವಿಧ ಹೂವುಗಳಿಂದ ಪುಷ್ಪಾಭಿಷೇಕ ಮಾಡಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

17ಅಡಿ ಎತ್ತರದ ದೇಶದಲ್ಲಿಯೇ ಅಪರೂಪದ್ದಾಗಿರುವ ಬೃಹದಾಕಾರದ ಸಾಲಿಗ್ರಾಮ ಕೃಷ್ಣಶಿಲೆಯ ವಿಗ್ರಹವು ನಯನ ಮನೋಹರವಾಗಿದ್ದು ಬೇಡಿ ಬಂದ ಭಕ್ತರ ಹರಕೆಗಳನ್ನು ನೆರವೇರಿಸಿ ಆಶೀರ್ವದಿಸುತ್ತಾ ಭೂ ವೈಕುಂಠವೆಂದೇ ಪ್ರಖ್ಯಾತವಾಗಿದೆ.

ಭೂವ್ಯಾಜ್ಯಗಳನ್ನು ಪರಿಹರಿಸುವ ಸ್ವಂತ ಸೂರನ್ನು ಹೊಂದಬೇಕೆಂಬ ಕನಸನ್ನು ಹೊತ್ತಿರುವ ಭಕ್ತರು ಹಾಗೂ ಮಧ್ಯಮ ವರ್ಗದ ಜನರ ಕರುಣಾಮಯಿಯಾಗಿರುವ ಭೂವರಹನಾಥಸ್ವಾಮಿಯು ಭಕ್ತರ ಅಭೀಷ್ಠೆಗಳನ್ನು ನೆರವೇರಿಸುತ್ತಾ ಹೇಮಾವತಿ ನದಿಯ ದಡದಲ್ಲಿಯೇ ನೆಲೆ ನಿಂತಿದ್ದಾನೆ.

ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ಆಶ್ರಯದಲ್ಲಿ ದೇವಾಲಯವು ತಿರುಮಲ ತಿರುಪತಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ.108 ಕಂಬಗಳ ಮುಖಮಂಟಪ 150 ಅಡಿ ಎತ್ತರದ ಬೃಹತ್ ರಾಜಗೋಪುರದ ನಿರ್ಮಾಣ ಸೇರಿದಂತೆ ದೇವಾಲಯವನ್ನು ವಾಸ್ತುಬದ್ಧವಾಗಿ ವಿಸ್ತರಣಾ ಕೆಲಸವನ್ನು 50ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಡೆಸಲಾಗುತ್ತಿದ್ದು ಈಗಾಗಲೇ 500 ಲೋಡ್ ಗೂ ಹೆಚ್ಚಿನ ಕಲ್ಲು ಶ್ರೀ ಕ್ಷೇತ್ರವನ್ನು ತಲುಪಿದೆ.

ಇಂದಿನ ರೇವತಿ ನಕ್ಷತ್ರದ ವಿಶೇಷಪೂಜಾ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿಗಳು ಅಭಿಷೇಕವನ್ನು ಕಣ್ತುಂಬಿಕೊಂಡು ಶ್ರೀ ಕ್ಷೇತ್ರ ಹಾಗೂ ಭೂವರಹನಾಥಸ್ವಾಮಿಯ ಶಕ್ತಿಯನ್ನು ಸ್ಮರಿಸಿದರು..ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಿಂದ ಭಗವಂತನ ಸಾಕ್ಷಾತ್ಕಾರ ಹೊಂದಬಹುದು. ಭಗವಂತನಿಗೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ. ಶ್ರದ್ಧಾಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿ ಪೂಜಿಸಿದರೆ ಸಾಕು ದಯಾಮಯನಾದ ಭಗವಂತನು ಒಲಿದು ಆಶೀರ್ವಾದ ಮಾಡಿ ಹರಸುತ್ತಾನೆ ಎಂದರು.

ನವದೆಹಲಿಯಲ್ಲಿ ಹೊಸದಾಗಿ ಪಾರ್ಲಿಮೆಂಟ್ ಭವನವನ್ನು ನಿರ್ಮಿಸಲು ವಾಸ್ತುಸಲಹೆಯನ್ನು ನೀಡಿರುವ ಬಳ್ಳಾರಿಯ ವಾಸ್ತುತಜ್ಞ ಶ್ರೀಧರಪ್ರಮೀಳಾಚಾರ್ ಅವರು ಭಗವಂತನ ಮುಂದೆ ಆದಷ್ಟು ಜಾಗ್ರತೆಯಾಗಿ ಪಾರ್ಲಿಮೆಂಟ್ ಭವನದ ಕಾಮಗಾರಿಯು ಮುಗಿಯಲಿ ಎಂದು ಸಂಕಲ್ಪ ಮಾಡಿದ್ದು ವಿಶೇಷವಾಗಿತ್ತು.

ರಾಜ್ಯದ ಕನ್ನಡ ಸಂಸ್ಕೃತಿ ಮತ್ತು ಅರಣ್ಯ ಸಚಿವರಾದ ಅರವಿಂದಲಿಂಬಾವಳಿ ಅವರ ಧರ್ಮಪತ್ನಿ ಮಂಜುಳಾಲಿಂಬಾವಳಿ, ಮೈಸೂರಿನ ಪರಕಾಲ ಮಠದ ಪೀಠಾಧ್ಯಕ್ಷರಾದ ಶ್ರೀ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿಗಳು, ಜಿಲ್ಲಾ ಪಂಚಾಯತಿ ಮಾಜಿಸದಸ್ಯೆ ಅನುಸೂಯಗಂಗಾಧರ್, ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ವಿಶೇಷ ಪ್ರಸಾದ ಹಾಗೂ ಊಟದ ವ್ಯವಸ್ಥೆಯನ್ನು ದೇವಾಲಯ ಜೀರ್ಣೋದ್ಧಾರ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀನಿವಾಸರಾಘವನ್, ನಾಗೇಶರಾವ್ ವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button