Politics

*ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿವಿವಿಧ ಪಕ್ಷಗಳ ಶಾಸಕರನ್ನು ಸದಸ್ಯರನ್ನಾಗಿಸಲು ಪರಿಶೀಲನೆ: ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಆಡಳಿತ ಪಕ್ಷದ ಶಾಸಕರು ಸೇರಿದಂತೆ ವಿವಿಧ ಪಕ್ಷಗಳ ಶಾಸಕರನ್ನು ಕೂಡ ಸದಸ್ಯರನ್ನಾಗಿ ನೇಮಕ ಮಾಡಲು, ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸೋಮವಾರ ವಿಧಾನಸಭೆಯಲ್ಲಿ ನಡೆದ ಉತ್ತರ ಕರ್ನಾಟಕ ಅಭಿವೃದ್ಧಿ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

 ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ 371(ಜೆ) ಕಲಂ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ಕಲ್ಪಿಸಲಾಗಿದ್ದು, ಇದಕ್ಕಾಗಿಯೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದೆ.  ಈ ಭಾಗದ ಅಭಿವೃದ್ಧಿಗಾಗಿ ಪ್ರಸ್ತುತ ವರ್ಷ 5000 ಕೋಟಿ ರೂ. ಗಳ ಅನುದಾನವನ್ನು ಸರ್ಕಾರ ಒದಗಿಸಿದೆ.  ಅಲ್ಲದೆ ಅಭಿವೃದ್ಧಿ ಕಾರ್ಯಗಳೂ ಕೂಡ ನಡೆಯುತ್ತಿವೆ.  ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಹಿಂದೆ ಆ ಭಾಗದ ವಿವಿಧ ಪಕ್ಷದ ಶಾಸಕರುಗಳನ್ನು ಕೂಡ ಸದಸ್ಯರನ್ನಾಗಿ ನೇಮಿಸಿ, ಚರ್ಚೆ ನಡೆಸಿ, ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿತ್ತು.  ಆದರೆ ಈ ಬಾರಿ ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ನೇಮಿಸಿದ್ದು, ಮಂಡಳಿಯಲ್ಲಿ ಕೇವಲ ಆಡಳಿತ ಪಕ್ಷದ ಶಾಸಕರು ಮಾತ್ರ ಸದಸ್ಯರನ್ನಾಗಿ ನೇಮಿಸಲಾಗಿದೆ.  ಇದನ್ನು ಸರಿಪಡಿಸಿ, ಅನ್ಯ ಪಕ್ಷದ ಶಾಸಕರನ್ನು ಕೂಡ ಮಂಡಳಿಗೆ ಸದಸ್ಯರನ್ನಾಗಿ ನೇಮಿಸಬೇಕು ಎಂದು ಶಾಸಕರಾದ ನೇಮಿರಾಜ್, ಮಾನಪ್ಪ ವಜ್ಜಲ್, ಶಿವರಾಜ್ ಪಾಟೀಲ್ ಸೇರಿದಂತೆ ವಿವಿಧ ಶಾಸಕರುಗಳು ಒತ್ತಾಯಿಸಿದರು. 

ಇದಕ್ಕೆ ಸದನದಲ್ಲಿಯೇ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಪ್ರಾಮಾಣಿಕ ಯತ್ನದ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371(ಜೆ) ಕಲಂ ನಡಿ ವಿಶೇಷ ಸ್ಥಾನಮಾನ ದೊರೆತಿದೆ. ಈ ಭಾಗದ ಅಭಿವೃದ್ಧಿಗಾಗಿಯೇ ರಚಿಸಲಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅನ್ಯ ಪಕ್ಷದ ಶಾಸಕರನ್ನು ಸದಸ್ಯರನ್ನಾಗಿ ನೇಮಿಸಿಲ್ಲ, ಎನ್ನುವ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದೀರಿ. ಈ ಕುರಿತಂತೆ ಚರ್ಚಿಸಿ, ಅನ್ಯ ಪಕ್ಷದವರನ್ನು ಕೂಡ ಮಂಡಳಿಯಲ್ಲಿ ಸದಸ್ಯರನ್ನಾಗಿ ನೇಮಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button