Karnataka NewsNational

*ಕಲ್ಯಾಣೋತ್ಸವ ಹಾಗೂ ಸ್ಟಾರ್ಟ್‌ಅಪ್‌ ಕಂಪನಿಗಳ ಜೊತೆ ಸಭೆ: ಟಿಟಿಡಿ ಸದಸ್ಯ ಎಸ್‌ ನರೇಶ್‌ಕುಮಾರ್‌*

ಪ್ರಗತಿವಾಹಿನಿ ಸುದ್ದಿ: ಟಿಟಿಡಿ ಅಧ್ಯಕ್ಷರಾದ ಬಿ.ಆರ್‌ ನಾಯ್ಡು ಅವರು ನಾಳೆಯಿಂದ ಮೂರು ದಿನಗಳ ಕಾಲ ಬೆಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ.

ಈ ಪ್ರವಾಸ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರುಗಳನ್ನು ಭೇಟಿ ಮಾಡಲಿದ್ದಾರೆ ಎಂದು ಟಿಟಿಡಿ ಸದಸ್ಯರಾದ ಎಸ್‌ ನರೇಶ್‌ ಕುಮಾರ್‌ ತಿಳಿಸಿದ್ದಾರೆ. 

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಟಿಟಿಡಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ಬಿ ಆರ್‌ ನಾಯ್ಡು ಅವರು ಆಗಮಿಸುತ್ತಿದ್ದಾರೆ. ಈ ಪ್ರವಾಸದ ಸಂಧರ್ಭದಲ್ಲಿ ಹೊಸ ಟಿಟಿಡಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಟಿಟಿಡಿ ಸದಸ್ಯರಲ್ಲಿ ಮೊದಲ ಬಾರಿಗೆ ನರೇಶ್‌ ಕುಮಾರ್‌ ಅವರು ಜಿಎನ್‌ಆರ್‌ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ, ಮಲ್ಲೇಶ್ವರಂ ವೈಯಾಲಿಕಾವಲ್‌ ನಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. 

ಕರ್ನಾಟಕ ರಾಜ್ಯದಿಂದ ಅದರಲ್ಲೂ ಬೆಂಗಳೂರು ನಗರದಿಂದ ಅತಿಹೆಚ್ಚು ಭಕ್ತಾದಿಗಳು ತಿರುಪತಿ-ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ರಾಜ್ಯದ  ಭಕ್ತಾದಿಗಳಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಗಬೇಕಾಗಿರುವಂತಹ ಕಾರ್ಯಗಳ ಬಗ್ಗೆ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಟಿಟಿಡಿ ಅಧ್ಯಕ್ಷರು ಭೇಟಿ ಮಾಡಿ ಚರ್ಚಿಸಲಿದ್ದಾರೆ. 

ಹಾಗೆಯೇ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪ, ಕೇಂದ್ರ ಸಚಿವರಾದ ಹೆಚ್‌ ಡಿ ಕುಮಾರ ಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್‌ ಅಶೋಕ್‌ ಸೇರಿದಂತೆ ವಿರೋಧಪಕ್ಷಗಳ ನಾಯಕರನ್ನೂ ಭೇಟಿಯಾಗಲಿದ್ದಾರೆ ಎಂದು ಎಸ್‌ ನರೇಶ್‌ ಕುಮಾರ್‌ ತಿಳಿಸಿದ್ದಾರೆ. 

ಸ್ಟಾರ್ಟ್‌ಅಪ್‌ ಕಂಪನಿಗಳ ಪ್ರತಿನಿಧಿಗಳು ಹಾಗೂ ಭಕ್ತಾದಿಗಳೊಂದಿಗೆ ಸಭೆ

ಬೆಂಗಳೂರು ನಗರದ ಸ್ಟಾರ್ಟ್‌ಅಪ್‌ ಕಂಪನಿಗಳ ಪ್ರತಿನಿಧಿಗಳೊಂದಿಗೆ ಟಿಟಿಡಿ ಅಧ್ಯಕರಾದ ಬಿ ಆರ್‌ ನಾಯ್ಡು ಅವರು ಸಭೆಯನ್ನು ನಡೆಸಲಿದ್ದಾರೆ. ಇಂದಿನ ಪೀಳಿಗೆಯ ಉದ್ಯಮಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ದಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ. ಇದಲ್ಲದೇ ಅಧ್ಯಕ್ಷರು ರಾಜ್ಯದ ಪ್ರಮುಖ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ರಾಜ್ಯದ ಭಕ್ತಾದಿಗಳೊಂದಿಗೆ ಸಭೆ ನಡೆಸಲಿದ್ದು, ತಿರುಪತಿ – ತಿರುಮಲ ದೇವಸ್ಥಾನದಲ್ಲಿನ ಸೌಲಭ್ಯಗಳು, ಕುಂದುಕೊರತೆಗಳ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಟಿಟಿಡಿ ಸದಸ್ಯರಾದ ಎಸ್‌ ನರೇಶ್‌ ಕುಮಾರ್‌ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button