ಮತಾಂತರಕ್ಕೆ ಡಿ.ಕೆ ಬ್ರದರ್ಸ್ ಯತ್ನ: ಅಶ್ವತ್ಥ ನಾರಾಯಣ ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಲವು ವರ್ಷಗಳಿಂದ ಕನಕಪುರದಲ್ಲಿ ಮತಾಂತರ ಮಾಡುವ ಹುನ್ನಾರ ನಡೆಯುತ್ತಿದ್ದು, ಇದಕ್ಕೆ ಡಿ.ಕೆ ಬ್ರದರ್ಸ್ ಕೂಡ ಬೆಂಬಲ ನೀಡುತ್ತಿದ್ದಾರೆ. ಮತಾತಂತರ ಯತ್ನವನ್ನು ಸಹೋದರರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಚಾಲನೆ ನೀಡಿರುವುದನ್ನು ವಿರೋಧಿಸಿ ಇಂದು ಹಿಂದೂ ಜಾಗರಣ ವೇದಿಕೆ ”ಕನಕಪುರ ಚಲೋ’ ರ್ಯಾಲಿ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ, ಸುಮಾರು ವರ್ಷಗಳಿಂದ ಇಲ್ಲಿ ಮತಾತಂತರ ನಡೆಸಲು ಡಿ.ಕೆ ಬ್ರದರ್ಸ್ ಹುನ್ನಾರ ನಡೆಸಿದ್ದಾರೆ. ಈ ಮೂಲಕ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಓರ್ವ ಹಿಂದೂ ಹೆಣ್ಣುಮಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೆ 2 ಎಕರೆ ಜಮೀನು ನೀಡುವುದಾಗಿ ಭರವಸೆ ನಿಡುತ್ತಾ ರಾಜಕೀಯವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಡಿ.ಕೆ ಬ್ರದರ್ಸ್ ಈಗ ವ್ಯಾಟಿಕನ್ ಬ್ರದರ್ಸ್ ಆಗಿದ್ದಾರೆ. ಹಿಂದುಗಳು ಪೂಜಿಸುತ್ತಿರುವ ಮುನೇಶ್ವರ ದೇವಾಲಯವನ್ನು ಮುಚ್ಚಿ, ಸ್ಲ್ಯಾಬ್ ಹಾಕಿ ಯೇಸು ಪ್ರತಿಮೆ ನಿರ್ಮಿಸಿರುವುದು ಖಂಡನೀಯ. ಇದು ಹಲವು ವರ್ಷಗಳಿಂದ ಪೂಜಿಸುತ್ತಾ ಬಂದಿದ್ದ ಹಿಂದೂಗಳಿಗೆ ಮಾಡಿರುವ ಮೋಸ ಹಾಗಾಗಿ ಇದರ ವಿರುದ್ಧ ನಾವು ಹೋರಾಡುತ್ತಿದ್ದೇವೆ.

ಕಪಾಲ ಬೆಟ್ಟ ಉಳಿಸಿ ಹೆಸರಲ್ಲಿ ಕನಕಪುರ ಚಲೋ ಹಮ್ಮಿಕೊಳ್ಳಲಾಗಿದ್ದು, ಹಿಂದೂ ಜಾಗರಣ ವೇದಿಕೆ ನಡೆಸುತ್ತಿರುವ ಹೋರಾಟಕ್ಕೆ, ಬಿಜೆಪಿ ಹಾಗೂ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ನೀಡಿವೆ ಎಂದಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button