ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡದ ಕಾನೂನು ನಿಘಂಟನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಅವರು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿರುವ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರುಗಳಿಗೆ 2019-20 ಮತ್ತು 2020-21ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ದಿನನಿತ್ಯ ನ್ಯಾಯಾಲಯದಲ್ಲಿ ಕನ್ನಡದ ಬಳಕೆಯಾಗಲು ಕನ್ನಡದ ಕಾನೂನು ನಿಘಂಟನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು. ಸಮಾನಾಂತರ ಕನ್ನಡ ಶಬ್ದಗಳು ಸ್ಥಾಪಿತವಾದರೆ ಬಳಸಲು ನ್ಯಾಯಾಧೀಶರಿಗೆ ಅನುಕೂಲವಾಗಲಿದೆ. ಹಲವಾರು ಇಂಗ್ಲಿಷ್ ಶಬ್ಧಗಳಿಗೆ ನೇರವಾದ ಕನ್ನಡದ ಪದಗಳಿಲ್ಲ. ಮಾತೃಭಾಷೆಯಲ್ಲಿ ತೀರ್ಪು ಬರುವ ಅವಶ್ಯಕತೆ ಇದೆ ಎಂದರು.
ವಕೀಲರ ಮಗ
ನಾನು ವಕೀಲ ಅಲ್ಲ ಆದರೆ ವಕೀಲರ ಮಗ. ಹತ್ತಿರದಿಂದ ಈ ವೃತ್ತಿಯನ್ನು ಕಂಡಿದ್ದೇನೆ. ನಮ್ಮ ತಂದೆಯವರ ಬಳಿಗೆ 28 ಕಿರಿಯ ವಕೀಲರಿದ್ದರು. ಮೊದಲು ಜನರು ಬಹಳ ಮುಗ್ಧರಿದ್ದರು. ಅವರು ವಕೀಲರು ಏನು ಹೇಳಿದರೂ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಕನ್ನಡದಲ್ಲಿ ತರ್ಜುಮೆ
ಪ್ರಕರಣಗಳ ತೀರ್ಪು ಕನ್ನಡದಲ್ಲಿ ಬಾರದಿದ್ದರೆ ಎಷ್ಟೊ ಸಮಸ್ಯೆಗಳಾಗುತ್ತವೆ. ತೀರ್ಪುಗಳನ್ನು ಕನ್ನಡದಲ್ಲಿ ತರ್ಜುಮೆಗೊಳಿಸುವ ವ್ಯವಸ್ಥೆಯಾಗಬೇಕು. ಅವುಗಳನ್ನು ಎಲ್ಲಾ ನ್ಯಾಯಾಲಯಗಳ ಗ್ರಂಥಾಲಯಗಳಿಗೆ ಕಳುಹಿಸಬೇಕು ಎಂದರು. ಕನಿಷ್ಠ ಪಕ್ಷ ತರ್ಜುಮೆಯಾದ ತೀರ್ಪು ಗಳನ್ನು ನೋಡಿಕೊಳ್ಳುವ ಅವಕಾಶವಿರಬೇಕು ಎಂದರು.
ಆಡಳಿತಗಾರರಿಗೂ ಕಾನೂನಿನ ಅರಿವು ಅಗತ್ಯ
ಈ ಪ್ರಕ್ರಿಯೆಯಲ್ಲಿ ನ್ಯಾಯ ಸುಲಭವಾಗಿ ಕೊಡುವ ವ್ಯವಸ್ಥೆ ಯಾಗಲಿದೆ. ಇಂದಿನ ಕಾಲದಲ್ಲಿ ತೀರ್ಪುಗಳ ಅರ್ಥೈಸುವಿಕೆ ಬಹಳ ಕಷ್ಟ. ಆಡಳಿತಗಾರರಿಗೂ ಕಾನೂನಿನ ಅರಿವು ಅಗತ್ಯ. ಪ್ರಾಥಮಿಕ ಮಾಹಿತಿ ಇದ್ದರೆ ನ್ಯಾಯ ನೀಡಲು ಸಾಧ್ಯ. ನ್ಯಾಯ ದಾನ ತೀರ್ಪಿನಿಂದ ಪ್ರಾರಂಭವಾಗಿ, ಕಕ್ಷಿದಾರಣಿಗೆ ಮುಟ್ಟಿದಾಗ ಪೂರ್ಣವಾಗುತ್ತದೆ ಎಂದರು.
ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆ
ತೀರ್ಪು, ಅಭಿಪ್ರಾಯಗಳ ವ್ಯತ್ಯಾಸ ಗೊತ್ತಿರಬೇಕು. ಅದಕ್ಕಾಗಿ ತರಬೇತಿ ಅಗತ್ಯವಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ದರೆ, ನ್ಯಾಯದ ಬಗ್ಗೆ ನಂಬಿಕೆ ಉಳಿದಿದ್ದರೆ, ಯಾರಿಗಾದರೂ ಅನ್ಯಾಯವಾಗಿದ್ದರೆ ನಮಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇರುವುದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಮಾತ್ರ. ಅಂತರರಾಷ್ಟ್ರೀಯ ಮಟ್ಟದ ನ್ಯಾಯಾಂಗ ವ್ಯವಸ್ಥೆ ಇಲ್ಲಿ ಇರುವುದರಿಂದ ವಿದೇಶಿ ಹೂಡಿಕೆದಾರರು ಇಲ್ಲಿಗೆ ಬರುತ್ತಾರೆ. ನಮ್ಮ ದೇಶದ ಪ್ರಗತಿಯಲ್ಲಿ ನ್ಯಾಯಾಂಗದ ಕೊಡುಗೆ ಬಹಳ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ದೇಶದಲ್ಲಿ ಸ್ಥಿರತೆಯನ್ನು ತಂದು ಸುಸ್ಥಿರ ಬೆಳವಣಿಗೆಗೆ ನ್ಯಾಯಾಂಗ ಕೊಡುಗೆ ನೀಡುತ್ತಿದೆ. ಪ್ರಮುಖ ಪಾತ್ರ ವಹಿಸಿದೆ. ಕಕ್ಷಿದಾರರಿಗೆ ನ್ಯಾಯ ಕೊಡುವುದಷ್ಟೆ ಅಲ್ಲ ಕನ್ನಡದಲ್ಲಿ ನ್ಯಾಯ ಕೊಡುವ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದರು.
ಕನ್ನಡದಲ್ಲಿ ತೀರ್ಪು ನೀಡುವುದು ಸುಲಭದ ಮಾತಲ್ಲ
ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಕ್ಕೆ ತರಲು ಸುದೀರ್ಘ ಹೋರಾಟ ನಡೆದಿದೆ. ವಿ.ಕೃ ಗೋಕಾಕ್ ನೇತೃತ್ವದ ಸಮಿತಿಯ ವರದಿಯನ್ನು ಅನುಷ್ಠಾನಆಡಲು ದೊಡ್ಡ ಚಳವಳಿ ನಡೆದಿದೆ. ಇಂದು ಬಹುತೇಕವಾಗಿ ಆಡಳಿತ ಕನ್ನಡದಲ್ಲಿ ಆಗುತ್ತಿರುವುದು ಗಮನಿಸುತ್ತಿದ್ದೇವೆ. ಶಿಕ್ಷಣದಲ್ಲಿ ಕನ್ನಡದ ಬಗ್ಗೆ ಕರ್ನಾಟಕ ಸರ್ಕಾರ ಹಲವಾರು ಕಾನೂನು ಗಳನ್ನು ರೂಪಿಸಿದೆ. ಹಲವಾರು ಸುತ್ತೋಲೆ ಹೊರಡಿಸಿದೆ. ಆದರೂ ಸರ್ವೋಚ್ಚ ನ್ಯಾಯಾಲಯ ಶಿಕ್ಷಣ ದಲ್ಲಿ ಸ್ವಾತಂತ್ರ್ಯವಿರಬೇಕು ಎಂದಿರುವ ಕಾರಣ ಸಂಪೂರ್ಣವಾಗಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ.. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕೆ, ಕನ್ನದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ 1-5 ವರೆಗೆ ಮಾತೃಭಾಷೆ ಯಲ್ಲಿ ಕಲಿಯಬೇಕೆಂದು ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ಮಾತೃಭಾಷೆಗೆ ಒತ್ತು ನೀಡಿದೆ. ಪ್ರಾಥಮಿಕ ಮತ್ತು ಇಂಜಿನಿಯರಿಂಗ್ ನಲ್ಲಿಯೂ ಕನ್ನಡದಲ್ಲಿಯೇ ವ್ಯಾಸಂಗ ಮಾಡಲು ಅವಕಾಶವಿದೆ. ಕನ್ನಡ ಕಾಯುವ,ಉಳಿಸುವ,ಬೆಳೆಸಲು ಸಮಗ್ರ ಕನ್ನಡದ ವಿಧೇಯಕವನ್ನು ಈಗಾಗಲೇ ವಿಧಾನಮಂಡಲದಲ್ಲಿ ಮಂಡಿಸಿದ್ದು, ಬರುವ ದಿನಗಳಲ್ಲಿ ಅನುಮೋದಿಸಿ, ಎಲ್ಲಾ ರಂಗಗಳಲ್ಲಿ ಕಾನೂತಾತ್ಮಕವಾಗಿ ಕನ್ನಡದ ಅನುಷ್ಠಾನಕ್ಕೆ ಪ್ರಥಮ ಬಾರಿಗೆ ಪ್ರಯತ್ನ ಮಾಡಲಾಗುತ್ತಿದೆ. ನ್ಯಾಯಾಂಗದಲ್ಲಿ ಕನ್ನಡ ಸ್ವಲ್ಪ ಕಷ್ಟಸಾಧ್ಯ. ಕನ್ನಡ ಭಾಷೆ ಯಲ್ಲಿ ಕಲಿತ ಮಕ್ಕಳು ಎಲ್ಲಾ ರಂಗದಲ್ಲಿಯೂ ಮುಂದೆ ಬರುತ್ತಿದ್ದಾರೆ. ಅದು ಅವರ ಸಾಮರ್ಥ್ಯವನ್ನು ತೋರಿಸುತ್ತದೆ. ಹಲವಾರು ದೇಶಗಳ ಪ್ರಮುಖ ನೀತಿಗಳಿಂದ ಕೂಡಿದ ಕಾನೂನು, ಪ್ರಜಾಪ್ರಭುತ್ವದಲ್ಲಿ ಚರ್ಚೆಯಾಗಿ ವ್ಯವಸ್ಥಿತ ರೂಪ ನೀಡಲಾಗಿದೆ. ಕನ್ನಡದಲ್ಲಿ ತೀರ್ಪು ನೀಡುವುದು ಸುಲಭದ ಮಾತಲ್ಲ. ಆದರೆ ಕನ್ನಡ ದಲ್ಲಿ ತೀರ್ಪು ನೀಡಿರುವುದು ಅಭೂತಪೂರ್ವ ಸಾಧನೆ ಎಂದು ಅಭಿನಂದಿಸಿದರು. ಕನ್ನಡ ಅರಿವಿನಿಂದ ಮಾಡಿರುವ ಈ ಕಾರ್ಯ ವಿಸ್ತರಿಸಬೇಕು. ಉಚ್ಛ ನ್ಯಾಯಾಲಯದಲ್ಲಿಯೂ ಇದಾಗಬೇಕು ಎಂಬ ಅಪೇಕ್ಷೆ ಕನ್ನಡಿಗರದ್ದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ.ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಪ್ರೊ.ಮಲ್ಲಪುರಂ ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ: ಎನ್ ಮಂಜುಳಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ;ಸಂತೋಷ್ ಹಾನಗಲ್ಲ ಉಪಸ್ಥಿತರಿದ್ದರು.
*ಮುಂಬರುವ ಬಜೆಟ್ ನಲ್ಲಿ ನೇಕಾರರಿಗೆ ಇನ್ನಷ್ಟು ಬೆಂಬಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/mysorenekara-sanghaamrita-mahotsavacm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ