– ರವಿ ಕರಣಂ.
ಇಂದಿನ ದಿನಮಾನಗಳಲ್ಲಿ ಉಂಟಾದ ವೈಜ್ಞಾನಿಕ ಅನ್ವೇಷಣೆಗಳ ಅಲೆಯಲ್ಲಿ ಲೇಖನಿಗೆ ಮುಕ್ತಿಯ ದಾರಿಯ ತೋರಿಸುವುದರೊಂದಿಗೆ, ವಿದ್ಯುನ್ಮಾನ ಬೆರಳಚ್ಚು ಮಣಿಯು ಬರೆಹ ಲೋಕದ ಸಿಂಹಾಸನವೇರಿದೆ. ಜೊತೆಗೆ ಕೈ ಬರೆವಣಿಗೆಯ ಕೌಶಲ್ಯಕ್ಕೆ ಬಲವಾದ ಪೆಟ್ಟು ಕೊಟ್ಟಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಲೇಖನಿ ನೆಪಥ್ಯಕ್ಕೆ ಸರಿಯುತ್ತಿದೆ. ಇದೀಗ ವಿದ್ಯಾರ್ಥಿಗಳ ಬೆರಳಲ್ಲಿ ಚೆಂದವಾಗಿ ಓಡುತ್ತಿರುವ ಲೇಖನಿ, ದೊಡ್ಡವರ ಕೈಯಲ್ಲಿ ಕೇವಲ ಸಹಿಗಾಗಿ, ದಿನಾಂಕಗಳ ನಮೂದಿಗಾಗಿ ಬಳಕೆಯಾಗುತ್ತಿದೆ ಅಷ್ಟೇ. ಆದರೂ ತಾನು ಜೀವಂತವಾಗಿರಲು ಹಲವು ನೆಪಗಳಿಂದ ಉಳಿದುಕೊಳ್ಳಲು ಪ್ರಯತ್ನಿಸುತ್ತಿದೆ. ಅದರಲ್ಲೂ ಸಾಹಿತ್ಯ ಕ್ಷೇತ್ರದ ರೂವಾರಿಗಳ ಕೈಯಲ್ಲಿ ರಾರಾಜಿಸುತ್ತಿದ್ದ ಲೇಖನಿ ಇಂದು ಮಾಯವಾಗುತ್ತಾ, ಬೆರಳಚ್ಚು ಮಣಿಯ ಪ್ರಭಾವದಲ್ಲಿ ಬಿದ್ದ ಯುವ ಸಾಹಿತಿಗಳ, ಕವಿಗಳ, ಕಾದಂಬರಿಕಾರರ, ಅಂಕಣಕಾರರ ಮತ್ತಿತರರಿಂದ ದೂರವಾಗುತ್ತಿದೆ. ಅದಿರಲಿ.
ಅಷ್ಟೇ ಅಲ್ಲ. ಸಾಹಿತ್ಯ ಕ್ಷೇತ್ರವೂ ದೂರವಾಗುತ್ತಿದೆ ಎಂದು ಹೇಳಲು ವಿಷಾದಿಸುತ್ತೇನೆ. ಗುಣಮಟ್ಟದ ಬರೆಹಗಳು ಇದ್ದಾಗಲೂ ಸಹ ಜನ ಮನ ತಲುಪದೇ ಮೂಲೆಗುಂಪಾಗುತ್ತಿದೆ. ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ ಪುಸ್ತಕಗಳು, ದಿನಪತ್ರಿಕೆಗಳು, ವಾರ, ಪಾಕ್ಷಿಕ, ಮಾಸಿಕ, ತ್ರೈಮಾಸಿಕ ಪತ್ರಿಕೆಗಳು ಸದ್ದಿಲ್ಲದೇ ವಿದ್ಯುನ್ಮಾನ ಬೆರಳಚ್ಚು ಮಣಿಯ ಹಿಂದೆ ಬಿದ್ದಿವೆ. ಕೈ ಕೆಲಸ ಮಾಡುವವರ ದೊಡ್ಡ ಸಮೂಹವಿರುತಿತ್ತು. ಈಗ ಮೂರು ನಾಲ್ಕು ಮಂದಿಯೇ ಮಾಡಿ ಮುಗಿಸುವ ಹಂತಕ್ಕೆ ಮುದ್ರಣ ಬಂದಿದೆ. ಇದು ಒಂದು ರೀತಿಯಿಂದ ಸಂತೋಷ ತಂದರೆ, ಹಲವು ರೀತಿಗಳಿಂದ ದುಃಖಕ್ಕೂ ಕಾರಣವಾಗಿದೆ.
ಇಂದಿನ ಯುವ ಬರೆಹಗಾರರಿಗೆ ತಮ್ಮ ಪುಸ್ತಕಗಳನ್ನು ಅಚ್ಚು ಹಾಕಿಸಿ ಹೊರ ತರಲು ತುಂಬಾ ಪ್ರಯಾಸದಾಯಕ. ಹಾಗೂ ಹೀಗೂ ಮಾಡಿ, ಪುಸ್ತಕ ಹೊರ ತಂದರೆ, ಕೊಂಡು ಓದುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಹೊಸ ತಲೆಮಾರುಗಳು ಓದುವುದನ್ನು ಬಿಟ್ಟು ಬಿಟ್ಟಿದೆ. ಸರಿಯಾಗಿ ಕನ್ನಡವನ್ನು ಓದಲು ಬಾರದ ದೊಡ್ಡ ಸಮೂಹವೇ ನಿರ್ಮಾಣವಾಗಿ ಬಿಟ್ಟಿದೆ. ನಗರ ಪ್ರದೇಶದ ಶಾಲಾ ಕಾಲೇಜುಗಳಲ್ಲಿ ಆಂಗ್ಲ ಮಾಧ್ಯಮದಲ್ಲಿಯೇ ಕಲಿಯುವ ಮಕ್ಕಳಿಗಂತೂ ಕನ್ನಡ ತುಂಬಾ ಕಷ್ಟಕರವಾದ ವಿಷಯ. ಕನ್ನಡ ವಿಷಯವೇ ಅಲರ್ಜಿ. ಕನ್ನಡ ಪಾಠಗಳ ವಿವರಣೆಯನ್ನು ಆಂಗ್ಲ ಭಾಷೆಯಲ್ಲಿ ಹೇಳಿ ಕೊಡುವ ಪರಿಸ್ಥಿತಿ ! ನಮ್ಮ ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ಅನ್ನು ಕನ್ನಡ ವಿವರಣೆ ಕೇಳಿ ಅರ್ಥ ಮಾಡಿಕೊಂಡಂತೆ!
ಅದು ಹೇಗೋ ಕನ್ನಡ ಮಾಧ್ಯಮ ಶಾಲೆಗಳನ್ನು ನೆಚ್ಚಿಕೊಂಡ ಗ್ರಾಮೀಣ ಭಾಗದ ಜನತೆ ಕನ್ನಡವನ್ನು ಉಳಿಸಿಕೊಳ್ಳುತ್ತಿದೆ. ಈಗೀಗ ಕರ್ಣಾಟಕ ಸರಕಾರವೇ ಖಾಸಗಿ ಶಾಲೆಗಳಿಗೆ ಸರಿ ಸಮಾನವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಲು ಮುಂದಾಗಿದೆ. ಮುಂದೊಂದು ದಿನ ಕನ್ನಡ ಕಲಿಕೆಯೂ ನಿಲ್ಲಬಹುದು. ಸಂಶಯವಿಲ್ಲ. ಅಂತಹದರಲ್ಲಿ ಕನ್ನಡ ಭಾಷೆಯ ಸಾಹಿತ್ಯ ಕಳೆಗುಂದುತ್ತಿದೆ. ಅದರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರೆ, ಮುಂದಿನ ದಿನಗಳಲ್ಲಿ ಕನ್ನಡ ಕಲಿಕೆ ತೀರಾ ಕಡಿಮೆಯಾಗಬಹುದೇನೋ !
ಸಾಹಿತ್ಯ ಕ್ಷೇತ್ರ ಹಿಂದಿನಿಂದಲೂ ಹಲವು ಮಹತ್ತರ ಸಾಧನೆಗಳ ಮೂಟೆಯನ್ನೇ ಹೊತ್ತು ತಂದಿದೆ. ಇದನ್ನು ಕಟ್ಟಿ ಬೆಳೆಸುವಲ್ಲಿ ಮಹಾನ್ ಸಾಹಿತ್ಯ ದೈತ್ಯ ಶಕ್ತಿಗಳು ಕೆಲಸ ಮಾಡಿವೆ. ನಿಮಗೆ ಗೊತ್ತಿಲ್ಲದಿರಬಹುದು. ಕಾಯಿಲೆಗೆ ಔಷಧಿ ತೆಗೆದುಕೊಳ್ಳದೇ, ಪುಸ್ತಕ ಪ್ರಕಟಣೆಗೆ ಹಣ ಸುರಿದು ಹೋದ ಸಾಹಿತಿಗಳೆಷ್ಟೋ ಇದ್ದಾರೆಂದರೆ, ಅವರ ಸಾಹಿತ್ಯ ಕೊಡುಗೆಗೆ ಯಾವ ಬೆಲೆ ಕಟ್ಟುತ್ತೀರಿ ? ಅಂತಹ ಕ್ಷೇತ್ರ ಇಂದು ತೀರಾ ಬಡವಾಗುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತು,ಕನ್ನಡ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಅದಕ್ಷ, ಅಪ್ರಾಮಾಣಿಕ ಮತ್ತು ಭಾಷೆ,ನೆಲ,ಜಲ, ಪ್ರಾಕೃತಿಕ ಸಂಪತ್ತು ಮತ್ತಿತರ ಮೂಲ ಜ್ಞಾನವೇ ಇಲ್ಲದಿರುವವರ ಪಾಲಾಗಿ, ಸೊರಗುತ್ತಿದೆ. ಕೇವಲ ರಾಜಕೀಯ ಬೆಂಬಲ,ಜಾತಿ ಆಧಾರಿತ, ವ್ಯಕ್ತಿಗಳು ಯಾವ ಬದಲಾವಣೆ ತರಬಲ್ಲರು ? ಯಾವ ಬಡ ಬರೆಹಗಾರರಿಗೂ ಉತ್ತೇಜನ ಕೊಡುವುದಿಲ್ಲ. ಯಾರನ್ನೂ ಬೆಳಕಿಗೆ ತರುವುದಿಲ್ಲ. ತುಳಿಯಲೆತ್ನಿಸುತ್ತಿದೆಯೇ ಹೊರತು ಎತ್ತಿ ಹಿಡಿಯುವ ಪ್ರಯತ್ನ ಕಂಡಿದ್ದೇ ಇಲ್ಲ. ಇಂದು ಪ್ರಶಸ್ತಿ ವಿಜೇತರು ಅರ್ಜಿ ಹಾಕಿ ಪಡೆದವರೇ ಹೆಚ್ಚು. ಇನ್ನು ಪ್ರತಿಭೆಯು ಎಷ್ಟು?ಎಂದು ನೀವೇ ಊಹಿಸಿ ಬಿಡಿ.
ತಮ್ಮ ಆಪ್ತ ವರ್ಗದ, ತಮ್ಮನ್ನು ಬೆಂಬಲಿಸುವ ಬರೆಹಗಾರರಿಗೆ ಆದ್ಯತೆ ಕೊಡುವ ಮೂಲಕ ಸಶಕ್ತ, ಉತ್ತಮ ಸಾಹಿತ್ಯ ರಚಿಸಿದವರು ಗಣನೆಗೆ ಸಿಗದೇ ಹೋಗಿದ್ದಾರೆ. ಇನ್ನು ಸಾರಸ್ವತ ಲೋಕ ಹಳ್ಳ ಹಿಡಿಯದೇ ಉಪ್ಪರಿಗೆ ಹಿಡಿಯುವುದೇ ? ಯಾವ ಪರಿಷತ್ತು, ಪ್ರಾಧಿಕಾರ, ಇಲಾಖೆ, ಆಯೋಗಗಳೂ ಕೆಲಸಕ್ಕೆ ಬಾರದೇ ಹೋಗಿವೆ. ಕನ್ನಡ ನಾಡನ್ನು ಕಟ್ಟಿದ ಸಾಹಿತ್ಯ ಲೋಕ ಇಂದು ಕಸದ ತೊಟ್ಟಿಗೆ ಸೇರಿದಂತೆಯೇ ಆಗಿದೆ. ಕಳೆದ ದಶಕಗಳಿಂದಾದ ಕನ್ನಡದ ಅಭಿವೃದ್ಧಿಗಳೇನು? ತಿಳಿಸಲು ಏನೇನೂ ಇಲ್ಲ. ಕೇವಲ ಸಮ್ಮೇಳನದ ಭಾಷಣಗಳು, ತೀರ್ಮಾನಗಳು ಅಲ್ಲೇ ಕೊಳೆಯುತ್ತವೆಯೇ ಹೊರತು ಸಾಬೀತು ಮಾಡುವ ಶಕ್ತಿಯಿರದು.
ಮುಖ್ಯವಾಗಿ ಸಾಹಿತ್ಯದ ಗಂಧ,ಗಾಳಿ ಗೊತ್ತಿರಬೇಕು. ಮುಖ್ಯವಾಗಿ ಕನ್ನಡ ಸಾಹಿತ್ಯ ಚರಿತ್ರೆ. ಈಗಿನ ಮಹಾ ಮಹಿಮರನ್ನು ಕೇಳಿಬಿಡಿ. ಸರಿಯಾಗಿ ನಾಡಗೀತೆಯನ್ನೇ ಹೇಳಲು ಬಾರದ ಇವರುಗಳೆಲ್ಲ ನಾಡನ್ನು, ನಾಡಿನ ಸಾಹಿತ್ಯವನ್ನು ಕಟ್ಟ ಬಲ್ಲರೇ ? ಇಂತಿಪ್ಪ ಜನರ ನಡುವೆ ಯುವ ಬರೆಹಗಾರರು ಹೊರ ಬರಲಾದೀತೇ ? ಸರಕಾರ ಇದಕ್ಕೆ ಸರಿಯಾದ ಬುನಾದಿ ಹಾಕಬೇಕು. ಅದು ಬಿಟ್ಟು ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಲು ಹಣ ಕೊಟ್ಟು ಕೈ ಕಟ್ಟಿ ಕುಳಿತುಕೊಳ್ಳುವುದಲ್ಲ. ಅದು ನೋಡಿ. ಸಮ್ಮೇಳನ ಮುಂದೆ ಹೋಯಿತು. ಕಾರಣ ಸಿದ್ದತೆ ಆಗಿಲ್ಲವೆಂದೋ ನಾನಾ ಕಾರಣಗಳ ನೆಪ. ನಿಜ ಎಂದರೆ ಚುನಾವಣೆಯ ಸಂದರ್ಭದಲ್ಲಿ ಮಾಡಿದರೆ, ಹಲವು ಭಾಗಗಳಿಂದ ಬರುವ ಜನರ ಮುಂದೆ ತಮ್ಮ ‘ಸಾಧನೆಗಳ ಮಹಾಪೂರ’ ಹರಿಸಿ, ಅಂದರೆ “ಕಡೆದು ಕಟ್ಟೆ ಹಾಕಿದ್ದನ್ನು”, ರಾಜಕೀಯಕ್ಕೆ ಬಳಸಿಕೊಳ್ಳುವ ತಂತ್ರ. ಅದಕ್ಕೆ ಅವಕಾಶ ಕೊಡದಂತೆ ನೋಡಿಕೊಳ್ಳುವುದು ನಮ್ಮ ತಂತ್ರವಾಗಬೇಕು.
ಕೆಲವಾರು ವಿಷಯಗಳನ್ನು ಈ ಮೂಲಕ ಚಿಂತನೆಗೊಳಪಡಿಸಲು ಕೊಡಲಾಗಿದೆ. ಇದರ ಮೇಲೆ ಹತ್ತು ಹೆಜ್ಜೆ ಮುಂದೆ ಹೋಗಿ ಕಾರ್ಯಗತಗೊಳಿಸಿದರೆ, ಅವರವರ ಯೋಗ್ಯತೆಯು ತಿಳಿದು ಬರುತ್ತದೆ. ಒಟ್ಟಲ್ಲಿ ನಮ್ಮ ಸಾಹಿತ್ಯ ಬೆಳೆದರದುವೇ ನಮ್ಮ ಭಾಗ್ಯ.
ಅವು ಇಂತಿವೆ;
1) ಜಾತಿ,ಮತ,ಲಿಂಗ ಬೇಧವಿಲ್ಲದೇ ಬರೆಹಗಾರರಿಗೆ ಉತ್ತೇಜನ ಕೊಡುವ ಯೋಜನೆಗಳು ಬರಬೇಕು.
2) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರಿಷತ್ತು ಗಳಿಂದ ಪುಸ್ತಕಗಳ ಪ್ರಕಟಣೆಗೆ ಧನ ಸಹಾಯ ದೊರೆಯಬೇಕು. ಪ್ರತಿ ವರ್ಷವೂ ಪ್ರತಿ ತಾಲೂಕಿನಿಂದ ಕನಿಷ್ಠ ಹತ್ತು ಪುಸ್ತಕಗಳನ್ನು ಪ್ರಕಟಿಸಿ ಹೊರ ತರುವ ಯೋಜನೆಯನ್ನು ರೂಪಿಸಿಸಬೇಕು. ಅಂದರೆ ಪ್ರತಿ ವರ್ಷವೂ ಪ್ರತಿ ತಾಲೂಕಿನಿಂದ ಹತ್ತು ಜನ ಬರೆಹಗಾರರು ಹೊರ ಹೊಮ್ಮುವ ಅವಕಾಶ ದೊರೆಯುತ್ತದೆ.
3) ಪುಸ್ತಕಗಳನ್ನು ಮೌಲ್ಯಮಾಪನ ಮಾಡಿಸಿ, ಯೋಗ್ಯತೆಯ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಬೇಕು.
4) ಲೇಖಕರ, ಕವಿಗಳನ್ನು ತಾವೇ ಗುರುತಿಸಿ ಸನ್ಮಾನಿಸಬೇಕು. ಅರ್ಜಿ ಹಾಕಿಸಿ ಪರಿಚಯಿಸಿಕೊಳ್ಳುವ ಸಂದರ್ಭಗಳು ಬರಲೇಬಾರದು.
5) ಇದರಲ್ಲಿ ಪ್ರಶಸ್ತಿಗಾಗಿ ಬರೆದ ರಾಜಕೀಯ ವ್ಯಕ್ತಿಗಳ ಶಿಫಾರಸ್ಸಿನ ಪತ್ರವನ್ನು ಬಹಿರಂಗವಾಗಿ ತಿಪ್ಪೆಗೆಸೆದು, ಯೋಗ್ಯರಿಗಷ್ಟೇ ಕೊಡಬೇಕು.
6) ಪ್ರತಿ ತಿಂಗಳು ರಾಜ್ಯಾದ್ಯಂತ ಕನ್ನಡ ಭಾಷೆಗೆ ಸಂಬಂಧಿಸಿದ ಕಾರ್ಯ ಯೋಜನೆಗಳ, ಚಟುವಟಿಕೆಗಳ ಮಾಹಿತಿ ಪತ್ರ ಹೊರಡಿಸಬೇಕು. ತನ್ಮೂಲಕ ಜನತೆಯನ್ನು ಕನ್ನಡ ನಾಡಿನ ಎಲ್ಲ ಅಂಶಗಳ ಮೇಲೂ ಗಮನ ಹರಿಸಲು ಸಹಕಾರಿಯಾಗಬೇಕು.
7) ಕನ್ನಡ ನಾಡು ನುಡಿಯ ಬಗೆಗೆ ಕೇವಲ ನಮ್ಮಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಸಂಸ್ಕೃತಿಯ ಅನಾವರಣಗೊಳಿಸುವ ಕಾರ್ಯಕ್ರಮಗಳು ಜರುಗಬೇಕು. ಸಾಹಿತಿಗಳ ಪರಿಚಯ,ಕವಿಗೋಷ್ಠಿ,ನಾಟಕ,ನಾಟ್ಯ,ಚಿತ್ರ ಕಲೆ, ಜಾನಪದ ಕಲಾ ಪ್ರದರ್ಶನ, ಜಾನಪದ ಕ್ರೀಡೆಗಳು ಇತ್ಯಾದಿ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುವ ಕೆಲಸಗಳಾಗಬೇಕು.
8) ಮಕ್ಕಳು ಮತ್ತು ಯುವಕರಲ್ಲಿ ಜಾಗೃತಿ ಮೂಡಿಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು, ಬಹುಮಾನ ಘೋಷಿಸುವುದು. ಹೊರ ರಾಜ್ಯ ಮತ್ತು ರಾಷ್ಟ್ರಗಳಿಗೆ ಕಳಿಸಿಕೊಡುವುದು ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.
9) ಪ್ರತಿ ವರ್ಷವೂ ನಾಡಿನ ಸಾಹಿತ್ಯ ಕ್ಷೇತ್ರದ ಹೆಸರಾಂತ ಕವಿ, ಲೇಖಕ, ಬರೆಹಗಾರರ ಹದಿನೈದು ಜನರ ತಂಡವನ್ನು ರಚಿಸಿ, ಅವರ ಮೂಲಕ ಸಾಹಿತ್ಯ ಬಳಗದ ಕಾರ್ಯಕ್ರಮಗಳನ್ನು ನಡೆಸಲು ಸಲಹೆ, ಮಾರ್ಗಸೂಚಿಗಳನ್ನು ಪಡೆಯಬೇಕು.
10) ನಡೆಸಿದ ಕಾರ್ಯಕ್ರಮಗಳನ್ನು ಮೌಲ್ಯಮಾಪನಕ್ಕೊಳಪಡಿಸಿ, ನಾಡಿನ ಸಾಂಸ್ಕೃತಿಕ ಅಭಿವೃದ್ಧಿಗೆ ಯೋಜನೆಗಳನ್ನು ಸಂಘಟಿಸಬೇಕು. ಸದಾ ಚಲನೆಯಲ್ಲಿರುವಂತೆ ಮಾಡುವಂತಹ ಯೋಗ್ಯ ವ್ಯಕ್ತಿಯು ಮುಂದಾಳುವಾಗಿರಬೇಕು.
ಏನಾದರೂ ಮಾಡಲಿ, ಹೇಗಾದರೂ ಮಾಡಲಿ ಒಟ್ಟಲ್ಲಿ ನಾಡಿನಾದ್ಯಂತ ಕನ್ನಡದ ಕೆಲಸಗಳಾಗಬೇಕು. ಎಲ್ಲದನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವ ಅಭಿವೃದ್ಧಿ ಕೆಲಸಗಳಾಗಬೇಕು. ಜಿಡ್ಡುಗಟ್ಟಿ, ಅಲಸ್ಯದ ಕೆಸರಲ್ಲಿ ಬಿದ್ದ ಮನಸುಗಳು ಎದ್ದು ಬಂದರೆ ಸಾಕು. ನಮ್ಮ ನಾಡು ಧನ್ಯವಾದೀತು. ಇಂಥದೊಂದು ಪ್ರಯತ್ನ ಶುರುವಾಗಲಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ