Kannada NewsKarnataka NewsLatest

ಕನ್ನಡಕ್ಕೆ ಸಾವಿಲ್ಲ, ಆದರೆ ಸವಾಲುಗಳಿವೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕನ್ನಡವು ಬದುಕಾಗಬೇಕು, ಬದುಕು ಕನ್ನಡವಾಗಬೇಕು. ಅಂದಾಗ ಮಾತ್ರ ಕನ್ನಡಿಗರು ಕರ್ನಾಟಕದ ನೆಲದಲ್ಲಿ ತನ್ನ ಸಾರ್ವಭೌಮತ್ವವನ್ನು ಹಿಡಿದಿಟ್ಟುಕೊಳ್ಳಬಹುದು. ಜನಭಾಷೆಯಾದ ಕನ್ನಡವು ಆಳಲು ಬಂದವರನ್ನು ಅರಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಕನ್ನಡಕ್ಕೆ ಸಾವಿಲ್ಲ, ಆದರೆ ಸವಾಲುಗಳಿವೆ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯಪಟ್ಟರು.

ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಏರ್ಪಡಿಸಿದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟಕರಾಗಿ ಮಾತನಾಡಿದರು.

ಪ್ರಾದೇಶಿಕ ಅಸಮತೋಲನ ಇದ್ದ ಮಾತ್ರಕ್ಕೆ ಅದನ್ನು ಸಮತೋಲನಗೊಳಿಸುವ ಪ್ರಯತ್ನವನ್ನು ಮಾಡಬೇಕೇ ಹೊರತು ಪ್ರತ್ಯೇಕತೆಯ ಧ್ವನಿಯು ಅಗತ್ಯವಿಲ್ಲ. ಪ್ರಾದೇಶಿಕ ಅಸಮತೋಲನವು ಇರುವುದು ಸತ್ಯದ ಸಂಗತಿಯಾಗಿದ್ದರೂ, ಅದು ರಾಜಕೀಯ ಬಣ್ಣವನ್ನು ಹೊಂದಬಾರದು.

ಏಕೀಕರಣೋತ್ತರ ಸನ್ನಿವೇಶದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ಮಾತು ಸಮ್ಮತವಲ್ಲ. ಆದರೆ, ಆಗಬೇಕಾದ ಅಭಿವೃದ್ಧಿಯ ಮುನ್ನೋಟ ಬಹುದೊಡ್ಡದಿದೆ. ಬದ್ಧತೆಯಿಂದ ರಾಜಕೀಯ ನಾಯಕರು ನಡೆದುಕೊಂಡು ಕನ್ನಡದ ಅನನ್ಯತೆಯನ್ನು ಕಾಪಾಡಬೇಕು ಎಂದರು.

ಎಷ್ಟೋ ಜನಗಳ ಹೋರಾಟ ಮತ್ತು ತ್ಯಾಗಗಳಿಂದ ಏಕೀಕರಣ ಸಾಧ್ಯವಾಗಿದೆ. ಆದರೆ ಏಕೀಕರಣ ವಿಘಟನೆಗೆ ದಾರಿಯಾಗಬಾರದು ಎಂದು ಅಭಿಪ್ರಾಯಪಟ್ಟರು.

ರಾಜಕೀಯ ಇಚ್ಛಾಶಕ್ತಿಯ ಕೊರತೆ


ಮೊದಲ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಮಹಾದೇವ ಪ್ರಕಾಶ ಅವರು ಮಾತನಾಡಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದಾಗಿ ಅಸಮತೋಲನ ಉಳಿದುಕೊಂಡಿದೆ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಿದ್ದಾಗಲೂ ಉತ್ತರ ಕರ್ನಾಟಕವು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲಿಲ್ಲ ಎಂದರು.

ರಾಜ್ಯದ ತಲಾ ಆದಾಯಗಳನ್ನು ಸಂಪಾದಿಸುವಲ್ಲಿ ಮುಖ್ಯಮಂತ್ರಿಗಳ ಕ್ಷೇತ್ರದ ಜನರು ಹಿಂದೆ ಬಿದ್ದಿರುವುದು ವಾಸ್ತವದ ಸಂಗತಿ. ರಾಜ್ಯವು ಪ್ರಗತಿಯನ್ನೇನಾದರು ಸಾಧಿಸಿದ್ದರೆ ಚಾಮರಾಜ ಒಡೆಯರ, ಎಸ್. ನಿಜಲಿಂಗಪ್ಪ, ದೇವರಾಜ ಅರಸ ಅವರ ಆಳ್ವಿಕೆಯ ಅವಧಿಯಲ್ಲಿ ದೂರದೃಷ್ಟಿಯ ಯೋಜನೆಗಳು ಕಾಯಕಲ್ಪಗೊಂಡವು.

ಜಾಗತೀಕರಣೋತ್ತರ ಸನ್ನಿವೇಶದಲ್ಲಿ ಸಮ್ಮಿಶ್ರ ಸರ್ಕಾರಗಳು ಪೂರ್ಣಪ್ರಮಾಣದ ಅಭಿವೃದ್ಧಿಗೆ ಮಾರಕವಾದವು, ಇದರಿಂದಾಗಿ ಇಂದಿಗೂ ಅಸಮತೋಲನ ಮುಂದುವರಿದಿದೆ. ಆದರೆ ಮುಂಬರುವ ಸರ್ಕಾರಗಳು ಇದನ್ನು ಅನುಲಕ್ಷಿಸಿ ಯೋಜನೆಗಳನ್ನು ರೂಪಿಸಿ ಈ ಅಸಮತೋಲನವನ್ನು ಸರಿಪಡಿಸಬಹುದಾಗಿದೆ ಎಂದು ಮಹಾದೇವ ಪ್ರಕಾಶ ಅಭಿಪ್ರಾಯಪಟ್ಟರು.

ಸಮಾಜೋ-ಆರ್ಥಿಕ ವಿದ್ಯಮಾನಗಳನ್ನು ಕುರಿತು ವಿಷಯ ಮಂಡಿಸಿದ ಪ್ರೊ. ಟಿ. ಆರ್. ಚಂದ್ರಶೇಖರ ಅವರು ಪ್ರಾದೇಶಿಕ ಅಸಮತೋಲನವನ್ನು ತೊಲಗಿಸಲು ವೈಜ್ಞಾನಿಕ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ.

ರಾಮಕೃಷ್ಣ ಹೆಗಡೆ ಅವರ ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆಯಿಂದೀಚೆಗೆ ಕೇವಲ ಕಾಗದದ ವಿಕೇಂದ್ರೀಕರಣವನ್ನು ಕಾಣಬಹುದೆಂದು ಕಳವಳ ಪಟ್ಟುಕೊಂಡರು. ಸುಸ್ಥಿರ ಅಭಿವೃದ್ಧಿಗೆ ತಲಾದಾಯವು ಮುಖ್ಯವಾಗುವುದಿಲ್ಲ, ಸಂಪತ್ತು ಇದೆ ಎಂದು ಮಾತ್ರಕ್ಕೆ ನಾವು ಶ್ರೀಮಂತರಾಗುವುದಿಲ್ಲ. ಸುಸ್ಥಿರ ಅಭಿವೃದ್ಧಿ ಶೈಕ್ಷಣಿಕ, ಬೌದ್ಧಿಕ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಒಳಗೊಂಡಿರುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಗಳು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ರಾಜ್ಯಸರ್ಕಾರಗಳಿಗೆ ಸಂವಿಧಾನದತ್ತವಾಗಿ ಬಂದ ಆದ್ಯತೆ ಸಿಗುತ್ತಿಲ್ಲ. ಇದರಿಂದಾಗಿ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ಇತ್ತೀಚಿನ ನಿರ್ಣಯಗಳು ಅದರಲ್ಲೂ ಮುಖ್ಯವಾಗಿ ನೀಟ್ ಪರೀಕ್ಷೆ, ಜಿ.ಎಸ್.ಟಿ, ಹಿಂದಿ ಭಾಷಾ ಹೇರಿಕೆ, ಒಂದು ದೇಶ ಒಂದು ಚುನಾವಣೆ ಮುಂತಾದ ಕೆಲವು ನಿರ್ಧಾರಗಳು ಪ್ರಾದೇಶಿಕ ಅಭಿವೃದ್ಧಿಗೆ ವ್ಯತಿರಿಕ್ತವಾಗುವ ಅಪಾಯವಿದೆ.

ಇದರಿಂದಾಗಿ ಪ್ರಾದೇಶಿಕ ಅಸಮತೋಲನವು ಮತ್ತಷ್ಟು ಉಲ್ಬಣಿಸುವ ಸಮಸ್ಯೆಯಾಗಬಹುದು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡರು ವಿಶ್ವವಿದ್ಯಾಲಯದ ದಶಮಾನೋತ್ಸವದ ಸಂದರ್ಭದಲ್ಲಿ ಏಕೀಕರಣೋತ್ತರ ಕರ್ನಾಟಕ ಕುರಿತ ಚಿಂತನೆಯು ಸಕಾಲಿಕವಾಗಿದೆ. ವಿಶ್ವವಿದ್ಯಾಲಯದ ದಶಮಾನೋತ್ಸವ ಸಂಭ್ರಮದ ವರ್ಷಾಚರಣೆಗೆ ಇದು ಶುಭಾರಂಭವಾಗಿದೆ ಎಂದರು.

ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಪೂರಕವಾಗುವ ಹತ್ತು ಯೋಜನೆಗಳನ್ನು ರೂಪಿಸಿಕೊಂಡು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವಲ್ಲಿ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಉಪಕ್ರಮಗಳನ್ನು ಚುರುಕುಗೊಳಿಸುವ ಅನಿವಾರ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಸಮಾರೋಪ ಭಾಷಣವನ್ನು ಮಾಡಿದ ಡಾ. ಸಿದ್ದನಗೌಡ ಪಾಟೀಲ ಅವರು ಕರ್ನಾಟಕದ ಏಕೀಕರಣವು ಇನ್ನು ಪೂರ್ಣಗೊಂಡಿಲ್ಲ, ಪ್ರಕ್ರಿಯೆಯು ಅಪೂರ್ಣವಾಗಿದೆ. ಆಲೂರು, ಅಕ್ಕಲಕೋಟೆ, ಜತ್ತ, ಗಡಹಿಂಗ್ಲಜ, ಮಡಕಶಿರಾ, ಕಾಸರಗೋಡು ಮುಂತಾದ ಅನೇಕ ಕನ್ನಡ ಪ್ರದೇಶಗಳು ಹೊರನಾಡಲ್ಲಿ ಉಳಿದುಕೊಂಡಿವೆ. ಅನ್ಯಭಾಷಿಕರಿಂದ ಅಲ್ಲಿನ ಕನ್ನಡಿಗರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಏಕೀಕರಣವು ಅಪೂರ್ಣ ಪ್ರಕ್ರಿಯೆಯಾಗಿರುವ ಸಂಗತಿ ನೋವನ್ನು ತಂದಿದೆ ಎಂದು ಅಭಿಪ್ರಾಯಪಟ್ಟರು.

ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಅವರು ಸ್ವಾಗತಿಸಿದರು, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಹಣಕಾಸು ಅಧಿಕಾರಿಗಳಾದ, ಪ್ರೊ. ಡಿ. ಎನ್. ಪಾಟೀಲ ಉಪಸ್ಥಿತರಿದ್ದರು.

ಡಾ. ಶೋಭಾ ನಾಯಕ ಪರಿಚಯಿಸಿದರು, ಕನ್ನಡ ವಿಭಾಗದ ಅಧ್ಯಾಪಕರುಗಳಾದ ಡಾ. ಗಜಾನನ ನಾಯ್ಕ, ಡಾ. ಮಹೇಶ ಗಾಜಪ್ಪನವರ, ಡಾ. ಪಿ. ನಾಗರಾಜ, ಉಪಸ್ಥಿತರಿದ್ದರು. ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button