Advertisement -Home Add

ರಾಜ್ಯದಲ್ಲಿ 10ಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ

ಕಲಬುರಗಿ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ಸೋಂಕು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮತ್ತೆರಡು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮತ್ತೆರಡು ಕೋವಿಡ್- 19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ ಹತ್ತಕ್ಕೆರಿದೆ. ಬೆಂಗಳೂರಿನಲ್ಲಿ ಯುಕೆ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಹಾಗೂ ಕಲಬುರಗಿಯಲ್ಲಿ (ಈ ಮೊದಲೇ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ್ದ) 60 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರಿಬ್ಬರು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ಶೀಘ್ರ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಸಚಿವ ಕೆ.ಸುಧಾಕರ್, ಅಮೆರಿಕದಿಂದ ಆಗಮಿಸಿದ ಟೆಕ್ಕಿಯ ಸಹೋದ್ಯೋಗಿಯಲ್ಲಿ ಕೊರೊನಾ ಇರುವುದು ಪತ್ತೆಯಾಗಿದೆ. ಶಂಕಿತ 244 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಂತರ ನೀಡಲಾಗುವುದು ಎಂದು ಹೇಳಿದ್ದರು.

ಡೆಲ್ ಕಂಪನಿಯ ಟೆಕ್ಕಿ, ಆತನ ಪತ್ನಿ, ಮಗಳು, ಮೈಂಡ್ ಟ್ರೀ ಕಂಪನಿಯ ಟೆಕ್ಕಿ, ಕಲಬುರಗಿ ವ್ಯಕ್ತಿ(ಕೊರೊನಾದಿಂದ ನಿಧನ), ಗೂಗಲ್ ಕಂಪನಿಯ ಟೆಕ್ಕಿ,ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಮಗಳು, ಮೈಂಡ್ ಟ್ರೀ ಕಂಪನಿಯ ಟೆಕ್ಕಿ ಜೊತೆ ಪ್ರಯಾಣಿಸಿದ ಸಹೋದ್ಯೋಗಿ, ಯುಕೆ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿ, ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು.