Ghataprabha

ಗುರುವೆಂಬ ಬೆಳಕು

ಗುರು ಪೂರ್ಣಿಮೆ ನಿಮಿತ್ತ ಈ ಲೇಖನ

ಗುರು ಪೂರ್ಣಿಮೆ ನಿಮಿತ್ತ ಈ ಲೇಖನ

 

ನೀತಾ ರಾವ್

ಶ್ರೇಷ್ಠ ಶಿಷ್ಯನೊಬ್ಬ ತನಗಿಂತ ಶ್ರೇಷ್ಠನಾದ ಗುರುವಿನ ಹುಡುಕಾಟದಲ್ಲಿರುತ್ತಾನೆ. ಅಂತೆಯೇ ಸವಾಲು ಹಾಕುವ ಶಿಷ್ಯನೊಬ್ಬನಾದರೂ ಇರಲೆಂದು ಗುರುವಿನ ಒಳಗು ತಪಸುತ್ತಿರುತ್ತದೆ. ಗುರು-ಶಿಷ್ಯರ ಈ ಹುಡುಕಾಟ, ಮಿಲನ ಮತ್ತು ಕಾದಾಟಗಳು ಗಂಧ ತೀಡಿದಂತೆ ಪರಿಮಳವನ್ನು ಹೊಮ್ಮಿಸುವ ಸುಂದರ ಸಂಬಂಧವಾಗಿ ಏರ್ಪಡಬೇಕೆಂದರೆ ಶಿಕ್ಷಕನು ಗುರುವಿನೆತ್ತರಕ್ಕೆ ಏರಬೇಕು. ಶಿಷ್ಯನು ಜ್ಞಾನದಾಹಿಯಾಗಿರಬೇಕು.
ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಗುರುಗಳಾಗಿ ಸ್ವೀಕರಿಸುವ ಮುನ್ನ ವಿಧ ವಿಧವಾಗಿ ಗುರುವನ್ನು ಪರೀಕ್ಷಿಸಿದರು. ಪ್ರಶ್ನೆಗಳ ಮಳೆಗರೆದು ಪರಮಹಂಸರ ಉತ್ತರಗಳ ತಂಪಿನಲ್ಲಿ ತೊಯ್ದು ಸುಖಿಸಿದರು. ಆನಂತರವೇ ಅವರು ಗುರುಗಳನ್ನು ಒಪ್ಪಿಕೊಂಡದ್ದು. ಇಂಥ ಗುರು-ಶಿಷ್ಯ ಪರಂಪರೆ ಭಾರತೀಯರಾದ ನಮಗೆ ಹೊಸತೇನಲ್ಲ. ಹುಕ್ಕ-ಬುಕ್ಕರಿಗೆ ವಿದ್ಯಾರಣ್ಯರು ಗುರುವಾಗಿ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಲು ಪ್ರೇರಣೆಯಾದರೆ, ಶಿವಾಜಿಗೆ ಸಮರ್ಥ ರಾಮದಾಸರು ಹಿಂದೂ ಸಾಮ್ರಾಜ್ಯದ ಮಾರ್ಗವನ್ನು ತೋರಿದರು. ಇದಕ್ಕೂ ಹಿಂದೆ ಚಾಣಕ್ಯನು ಚಂದ್ರಗುಪ್ತ ಮೌರ್ಯನ ಗುರುವಾಗಿ ಸಾಮ್ರಾಜ್ಯ ಸ್ಥಾಪನೆಯ ಹರಿಕಾರನಾದ. ಭವ್ಯ ಭಾರತದ ಸುವರ್ಣ ಇತಿಹಾಸದ ಪುಟಗಳೆಲ್ಲ ಗುರುವಿನ ಮಹತ್ವವನ್ನು ತಿಳಿಸಿಯೇ ಇವೆ.
ಕಲಾಕಾರರ ಬದುಕನ್ನು ಅವರ ಗುರುಗಳೇ ರೂಪಿಸುವ ರೂಢಿಯ ಬಗ್ಗೆಯೂ ನಾವೆಲ್ಲ ಓದಿ, ನೋಡಿ ತಿಳಿದಿದ್ದೇವೆ. ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆಗಳಲ್ಲಿ ಗುರುವಿನ ಪಾತ್ರ ಬಹು ದೊಡ್ಡದು. ಅಲ್ಲಿ ಅಕ್ಷರಷಃ ಗುರುವಿನ ಗುಲಾಮನೇ ಆಗಿ ಶಿಷ್ಯನು ಗುರುಸೇವೆಯನ್ನು ಮಾಡುತ್ತ, ಅವರು ಹೇಳಿದಾಗ ಕಲಿತು, ಅಪ್ಪಣೆ ಕೊಟ್ಟಾಗ ಕಲಾ ಪ್ರದರ್ಶನ ಮಾಡುತ್ತಾನೆ. ಶಿಷ್ಯನು ಯಾವಾಗ ಸಾರ್ವಜನಿಕವಾಗಿ ವೇದಿಕೆಯಲ್ಲಿ ಪ್ರದರ್ಶನ ನಡೆಸಬೇಕು, ಅವನು ಸ್ವತಂತ್ರನಾಗಿ ಪ್ರದರ್ಶನ ನೀಡಬಹುದೇ, ಬೇಡವೇ ಎಂದೆಲ್ಲವನ್ನೂ ನಿರ್ಣಯಿಸುವವರು ಗುರುಗಳೇ. ನನ್ನಿಂದ ಕಲಿಯುವುದು ಮುಗಿಯಿತು, ಇನ್ನು ನೀನು ಸ್ವತಂತ್ರ ಎಂದು ಹೇಳುವವರೆಗೂ ಗುರುವಿನ ಮನೆಯಲ್ಲೇ ಇದ್ದು ಕಲಿತ ಅನೇಕ ಕಲಾವಿದರು ಇಂದು ಗಾಯನ, ವಾದ್ಯ, ನೃತ್ಯಗಳಲ್ಲಿ ಜಾಗತಿಕ ಕೀರ್ತಿಯನ್ನು ಗಳಿಸಿದ ಉದಾಹರಣೆಗಳು ಹೇರಳವಾಗಿವೆ. ಪ್ರತಿ ಸಲ ವೇದಿಕೆ ಏರುವಾಗಲೂ ಗುರುವನ್ನು ಮನದಲ್ಲಿ ಸ್ಮರಿಸಿ, ನಮಸ್ಕರಿಸುವ ಸಂಪ್ರದಾಯ ನಮ್ಮಲ್ಲಿನ್ನೂ ಜೀವಂತವಾಗಿದೆ.
ಹಾಗಿದ್ದರೆ ಆ ಗುರುವಾದರೂ ಅದೆಂಥ ಶ್ರೇಷ್ಠತೆಯ ಶಿಖರವನ್ನೇರಿ ನಿಂತಿರಬಹುದು? ಜೀವನದುದ್ದಕ್ಕೂ ಅವನು ಬಳಿ ಇರುವನೇ? ಹೆಜ್ಜೆ ಹೆಜ್ಜೆಗೂ ಸರಿ-ತಪ್ಪುಗಳ ಲೆಕ್ಕ ತಿಳಿಸಿ ನಮ್ಮನ್ನು ನೇರ್ಪುಗೊಳಿಸುವನೇ? ಊಹೂಂ.‌ ಗುರು ಕೈ ಹಿಡಿದು ನಡೆಸುವ ಸಹಪ್ರಯಾಣಿಕನಲ್ಲ. ಅರಿವಿನ ಬೆಳಕು ತೋರಿಸುವ ದಾರಿದೀಪ. ಅವನ ಬೆಳಕಿನ ದಾರಿಯಲ್ಲಿ ಒಂದಿಷ್ಟು ಸಾಗಿದ ನಂತರ ನಮ್ಮೊಳಗೆ ಸ್ವಂತದ ಬೆಳಕೊಂದು ಹುಟ್ಟಬೇಕು. ಮತ್ತೆ ಅದೇ ನಮ್ಮನ್ನು ಮುಂದೆ ನಡೆಸಬೇಕು. ಅಂಥ ಬೆಳಕನ್ನು ನಮ್ಮೊಳಗೇ ಹೊತ್ತಿಸುವ ಗುರುವು ನಮಗೆ ಬೇಕು.
ಇಂದಿನ ವಸ್ತುಸ್ಥಿತಿಯ ಬಗ್ಗೆ ಅವಲೋಕಿಸೋಣ. ಗುರುವಿನ ಸ್ಥಾನ ಪಡೆದವರೊಬ್ಬರು ನಮ್ಮ ಬದುಕಿನಲ್ಲಿ ಇರುವರೇ? ಅಥವಾ ಹಿಂದೊಮ್ಮೆ ಬಂದು ದಾರಿ ತೋರಿ ಇನ್ನು ನನ್ನ ಕೆಲಸ ಮುಗಿಯಿತು ಎಂದು ಹೇಳಿ ಹೋದರೂ ಇಂದಿಗೂ ನೆನಪಿನ ದೀಪವಾಗಿ ಉರಿಯುತ್ತಿರುವರೇ? ನಾವೇ ಶಿಕ್ಷಕ ವೃತ್ತಿಯನ್ನು ಕೈಗೊಂಡಿದ್ದರೆ ಗುರುವಾಗಲು ಪ್ರಯತ್ನಿಸಿದ್ದೇವೆಯೇ? ಮಾಹಿತಿ ಸ್ಫೋಟದ ಈ ಯುಗದಲ್ಲಿ ಗುರುವಿನ ಪಾತ್ರ ಮತ್ತು ಪ್ರಸ್ತುತತೆ ಏನು? ಸರ್ಚ್ ಮಾಡಲು ಗೂಗಲ್ ಗುರು, ಮಾಹಿತಿ ನೀಡಲು ಲಕ್ಷ ಲಕ್ಷ ಜಾಲತಾಣಗಳು, ಪ್ರತಿ ವಿಷಯದ ಮೇಲೂ ವಿಡಿಯೋ ತೇಲಿಬಿಡಲು ಯೂಟ್ಯೂಬ್, ಕಲಿಸಲು ಟೊಂಕ ಕಟ್ಟಿ ನಿಂತ e ಟೀಚರ್ ಗಳು, ಹಾಗಿದ್ದರೆ ಶಿಕ್ಷಕಿಯಾಗಿ ನಾನೆಷ್ಟು ಪ್ರಸ್ತುತ? ಹೀಗೆ ಕೇಳಿಕೊಂಡಾಗಲೇ ನಮಗೆ ಇನ್ನೊಂದಿಷ್ಟು ವಿಚಾರಗಳು ಹೊಳೆಯುವವು. ಮಾಹಿತಿಯನ್ನು ಯಾರೂ ಒದಗಿಸಬಹುದು. ಮಾರ್ಗದರ್ಶನಕ್ಕೆ ಮಾತ್ರ ಗುರುವೇ ಬೇಕು. ಸಿಗುವ ಮಾಹಿತಿಯನ್ನು ಹೇಗೆ ಬಳಸಬೇಕೆಂಬುದನ್ನು ಅರಿಯಲಾದರೂ, ಅದರ ಉಪಯುಕ್ತತೆ, ಅದರ ಸೂಕ್ತ ಬಳಕೆ, ಇವುಗಳನ್ನು ತಿಳಿಸಿಕೊಡಲು ಗುರುವು ಬೇಕು.
ಇಂಥ ಪ್ರಶ್ನೆಗಳೆಲ್ಲ ನಮ್ಮನ್ನು ಬಾಧಿಸುತ್ತಿದ್ದರೆ ಮಾತ್ರ ನಾವೆಷ್ಟು ವಿದ್ಯಾರ್ಥಿಗಳ ಬದುಕಿನಲ್ಲಿ, ವಿಚಾರಗಳಲ್ಲಿ ಬದಲಾವಣೆ ತಂದಿದ್ದೇವೆ ಎಂದು ಲೆಕ್ಕ ಹಾಕಿಕೊಂಡು ಸ್ವಂತ ಪರಿಶೋಧನೆ ಮಾಡಿಕೊಳ್ಳಲು ಸಾಧ್ಯ. ಈ ವಿಚಾರಗಳೇ ನಮ್ಮನ್ನು ನಾವು ಸಧ್ಯಕ್ಕಿರುವ ಸ್ಥಾನದಿಂದ ಒಂದು ಸ್ತರ ಮೇಲೇರಿಸುತ್ತವೆ. ನಮ್ಮ ವಿದ್ಯಾರ್ಥಿಗಳ ಬುದ್ಧಿ-ಭಾವಗಳು ಮೇಲ್ಮಟ್ಟಕ್ಕೇರಲು ನಮ್ಮ ಕೊಡುಗೆಯೇನು? ಅವರಲ್ಲಿ ವೈಚಾರಿಕತೆಯನ್ನು ಬೆಳೆಸಿದೆವೇ? ಅವರನ್ನು ಮೌಢ್ಯದಿಂದ ಪಾರು ಮಾಡಿದೆವೇ? ಅವರನ್ನು ಬಂಧಮುಕ್ತ ಮಾಡಿದೆವೇ? ಅಥವಾ ಇವೆಲ್ಲವನ್ನೂ ಒಮ್ಮೆಯೂ ಯೋಚಿಸದೇ ಕೇವಲ ನೌಕರಿ ಮಾಡುತ್ತಿದ್ದೇವೆಯೇ? ಶಿಕ್ಷಕರಾದ ನಾವು ಯಾರಿಗೆ ಗುರುಗಳಾದೆವು? ಯಾರ ಗುರಿ ತಲುಪಲು ದಾರಿಯ ದೀಪಗಳಾಗಿ ಉರಿದೆವು? ಪ್ರಶ್ನೆಗಳ ಉತ್ತರಗಳು ಸ್ಪೂರ್ತಿದಾಯಕವಾಗಿದ್ದರೆ ನಾವು ಶಿಕ್ಷಕರಿಂದ ಗುರುವಿನ ಮಟ್ಟಕ್ಕೆ ಏರಿದ್ದೇವೆ ಎಂದರ್ಥ. ಮತ್ತು ಅದುವೇ ನಮ್ಮ ಗುರಿಯಾಗಲಿ. ಆ ಗುರಿಯೇ ನಮನ್ನು ಸರಿಯಾದ ಪಥದಲ್ಲಿ ನಡೆಸುವ ಶುಕ್ರತಾರೆಯಾಗಲಿ.
ಎಲ್ಲರಿಗೂ ಗುರುಪೌರ್ಣಿಮೆಯ ಶುಭ ಹಾರೈಕೆಗಳು.