Kannada Rajyotsava – Home Add
Valmiki Jayanti Add

ಕರಾಳ ದಿನಕ್ಕೆ ಅವಕಾಶವಿಲ್ಲ, ಸರಳ, ಸಾಂಕೇತಿಕ ರಾಜ್ಯೋತ್ಸವ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಪ್ರತಿ ವರ್ಷ ಕರಾಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ನಂತರದಲ್ಲಿ ಅವಕಾಶ ನೀಡಲಾಗುತ್ತದೆ. ಅದು ಆಗಬಾರದು ಎಂದು ಕನ್ನಡ ಸಂಘಟನೆಗಳು ಆಗ್ರಹಿಸಿದವು. 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಕೋವಿಡ್ -19 ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ರಾಜ್ಯೋತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡಲಾಗುವುದು. ರಾಜ್ಯೋತ್ಸವದಲ್ಲಿ ಪೋಲಿಸ್ ಪರೇಡ್ ಗೆ ಮಾತ್ರ ಅವಕಾಶವಿದ್ದು, ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆರವಣಿಗೆಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಅ.17) ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಸಿ.ಪಿ.ಎಡ್ ಮೈದಾನದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ನಗರದ ಚೆನ್ನಮ್ಮ ವೃತ್ತದಲ್ಲಿರುವ ಚನ್ನಮ್ಮನ ಪುತ್ಥಳಿಗೆ ಜಿಲ್ಲಾಡಳಿತ ವತಿಯಿಂದ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಬಾರಿ ಯಾವುದೇ ಕಾರಣಕ್ಕೂ ಕರಾಳ ದಿನ ಆಚರಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಕಳೆಗುಂದದಿರಲಿ:

ಹಿರಿಯ ಕನ್ನಡಪರ ಹೋರಾಟಗಾರರಾದ ಅಶೋಕ ಚಂದರಗಿ ಅವರು, ನಗರದಲ್ಲಿನ ಅಂಗಡಿ ಮುಂಗಟ್ಟುಗಳ ಫಲಕಗಳು ಕನ್ನಡ ಭಾಷೆಯಲ್ಲಿ ಕಡ್ಡಾಯವಾಗಿ ಬರೆಯಬೇಕು ಇಲ್ಲವಾದರೆ ಅಂತಹ ಅಂಗಡಿ ಮುಂಗಟ್ಟುಗಳ ಪರವಾನಿಗೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಪೋಲಿಸ್ ಇಲಾಖೆಯು ಸಾರ್ವಜನಿಕರಿಗೆ ವಿಧಿಸುವ ದಂಡಗಳ ಆದೇಶ ಮತ್ತು ವಸೂಲಾತಿ ರಶೀದಿ ಕನ್ನಡ ಭಾಷೆಯಲ್ಲಿ ಮುದ್ರಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ಚಂದರಗಿ‌ ಮನವಿ ಮಾಡಿಕೊಂಡರು.

ಕರಾಳ ದಿನಾಚರಣೆಗೆ ಅನುಮತಿ‌ ಬೇಡ:

ಕನ್ನಡ ರಾಜ್ಯೋತ್ಸವ ದಿನದಂದು ಕೆಲ ಸಂಘಟನೆಗಳು ಕರಾಳ ದಿನಾಚರಣೆ ಆಚರಿಸಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಅದಕ್ಕೆ ಅನುಮತಿ ನೀಡಬಾರದು ಎಂದು ಎಲ್ಲ ಕನ್ನಡ ಸಂಘಟನೆಗಳ ಪರವಾಗಿ ಅಶೋಕ ಚಂದರಗಿ ಮನವಿ ಮಾಡಿಕೊಂಡರು.

ಪ್ರತಿ ವರ್ಷ ಕರಾಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ನಂತರದಲ್ಲಿ ಅವಕಾಶ ನೀಡಲಾಗುತ್ತದೆ. ಅದು ಆಗಬಾರದು ಎಂದು ಕನ್ನಡ ಸಂಘಟನೆಗಳು ಆಗ್ರಹಿಸಿದವು.
ಮಹಾಂತೇಶ ರಣಗಟ್ಟಿಮಠ ಸೇರಿದಂತೆ ಹಲವಾರು ಕನ್ನಡ ಹೋರಾಟಗಾರರು ಉಪಸ್ಥಿತರಿದ್ದರು.

ಕೋವಿಡ್-19 ಸೋಂಕಿನಿಂದ ಇತ್ತೀಚಿಗೆ ಮೃತರಾದ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಹಾಗೂ ಕನ್ನಡ ಪರ ಹೋರಾಟಗಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ಮೌನ ಆಚರಿಸಲಾಯಿತು.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಘೂಳಪ್ಪ ಹೊಸಮನಿ, ಬೆಳಗಾವಿ ನಗರ ಪೋಲಿಸ್ ಆಯುಕ್ತರಾದ ಕೆ.ತ್ಯಾಗರಾಜನ್, ಉಪ ಪೊಲೀಸ್ ಆಯುಕ್ತರಾದ ವಿಕ್ರಮ್ ಆಮಟೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದರ್ಶನ ಎಚ್.ವಿ, ಅಪರ ಜಿಲ್ಲಾಧಿಕಾರಿ ಅಶೋಕ ದುಟಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ವಿವಿಧ ಕನ್ನಡ ಪರ ಹೋರಾಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.