World Environment Day

ಅಮೇರಿಕೆಯಲ್ಲಿ ಹಂಸಗೀತೆ !

 ವಿಜ್ಞಾನ ಮತ್ತು ಅಜ್ಞಾನಗಳ ಮಧುರ ಮಿಲನ

ಪ್ರೊ. ಜಿ. ಎಚ್. ಹನ್ನೆರಡುಮಠ

ಅಮೇರಿಕ ಶೈಕ್ಷಣಿಕವಾಗಿ ಮುಂದುವರಿದ ರಾಷ್ಟ್ರ, ಆದಿವಿಜ್ಞಾನಿಗಳು, ದೆವ್ವಗಳನ್ನು ನಂಬದವರು ಎಂಬ ನನ್ನ ನಂಬಿಕೆ ಸುಳ್ಳಾಯಿತು.
ಸ್ಯಾನ್‌ಫ್ರಾನ್ಸಿಸ್ಕೋ ಕಡಲ ದಂಡೆಯ ದಾರಿಯಲ್ಲಿ ಮಗ ವಿಶ್ವಾ ಕಾರು ಓಡಿಸುತ್ತಿದ್ದ .
ಬಿಸಿಲು ನಗೆಮಲ್ಲಿಗೆ ತುಂಬಿತ್ತು ! ಕಡಲು ಗಾನವಾಗಿತ್ತು !
ಕಡಲ ಕಲ್ಲೋಲ ಮಾಲೆಗಳ ನಟ್ಟನಡುವೆ ಕಟ್ಟಕಡೆಯ ಬಂಡೆಯ ಮೇಲೆ ಕಟ್ಟಿದ ಲೈಟಹೌಸ್ ….”ಪಾಯಿಂಟ್ ಬೋನಿತಾ”…. ನೋಡುವ ಆಸೆಯಿಂದ ಹಿಗ್ಗಿ ಹೋಗುತ್ತಿದ್ದೆವು. ಕಾರು ೧೨೦ ಮೈಲು ವೇಗದಿಂದ ನುಗ್ಗುತ್ತಿತ್ತು. ಕಾರಣ ಆ ರುದ್ರಭೀಕರ ಕಡಲಬಂಡೆಯ ದೀಪಗೋಪುರಕ್ಕೆ ಮಧ್ಯಾಹ್ನ ಎರಡು ಗಂಟೆಯ ಮೇಲೆ ಪ್ರವೇಶ ನಿಷಿದ್ಧ. ಸಂಜೆಯಾದರೆ ಹೋದವರು ಆ ದೆವ್ವಗಳ ಕೈಯಿಂದ ಪಾರಾಗಿ ಹೊರಳಿ ಬರುವ ಬಗ್ಗೆ ಗ್ಯಾರಂಟಿ ಇಲ್ಲ ! ಹಾಗೆ ಹೋದವರು ಅದೆಷ್ಟೋ ಜನ ಹೋಗಿಯೇಬಿಟ್ಟದ್ದೂ ಉಂಟಂತೆ !
ಲೈಟ್ ಹೌಸು ನೋಡುವ ನಮ್ಮ ಹೌಸಿಗೆ ಇನ್ನೂ ಒಂದು ಪ್ರಮುಖ ಕಾರಣ ಇತ್ತು. ಯಾಕೆಂದರೆ ಕೆಲವೇ ದಿನಗಳ ಹಿಂದೆ ಅಮೇರಿಕೆಯ ದೂರದರ್ಶನದ ಪರದೆಯ ಮೇಲೆ “ಲೈಟ್ ಹೌಸಿನ ದೆವ್ವಗಳು” ಎಂಬ ಆಕರ್ಷಕ ಸುದ್ದಿಪ್ರಸಾರವಾಗಿತ್ತು.

ಅಮೇರಿಕೆಯ ಯಾವ ಯಾವ ಲೈಟಹೌಸಿನಲ್ಲಿ ಎಷ್ಟು ಎಷ್ಟು ದೆವ್ವಗಳಿವೆ ಅಂತ ಫೋಟೋಗ್ರಾಫಿ ಸಮೇತ ಅಮೇರಿಕೆಯ ಆ ದೂರದರ್ಶನ ಪ್ರಸಾರಮಾಡಿದ್ದನ್ನು ಸ್ಯಾನ್‌ಫ್ರಾನ್ಸಿಸ್ಕೋದ ನಮ್ಮ ಮನೆಯಲ್ಲಿ ಕುಂತು ಕಂಗಾಲ ಕಾಗಿಯಾಗಿ ನೋಡಿದ್ದೆ. ಆ ರಾತ್ರಿಹೊತ್ತಿನ ದೆವ್ವಗಳ ಪ್ರಸಾರವನ್ನು ನೋಡಿದಾಗ ಎಷ್ಟೊಂದು ಅಂಜಿದೆನೆಂದರೆ ಮಗ್ಗುಲಲ್ಲಿ ಕುಂತ ಹೆಂಡತಿಯೇ ದೆವ್ವವೆಂದು ತಿಳಿದು ನಡುಗಿಬಿಟ್ಟೆ!

ವಿಜ್ಞಾನಲೋಕದ ಮಹಾಪ್ರಬುದ್ಧರೆಂದು ನಾನು ತಿಳಿದಿದ್ದ ಅಮೇರಿಕೆಯವರು ದೆವ್ವಗಳನ್ನು ನಂಬುವುದೇ ಇಲ್ಲ ಅಂತ ನನ್ನ ನಂಬಿಗೆ ತಪ್ಪಾಯಿತು. ಅಮೇರಿಕೆಯವರ ಭೂತ- ದೆವ್ವ- ಗಾಬ್ಲಿನ್‌ಗಳ ನಂಬಿಕೆ ನಮಗಿಂತ ನೂರುಪಟ್ಟು… ಸಾವಿರಪಟ್ಟು. ದೆವ್ವಗಳು ನಮಗೆ ದೆವ್ವಗಳು ಮಾತ್ರ. ಆದರೆ; ಅದೇ ದೆವ್ವಗಳು ಅವರಿಗೆ ಮಾರ್ಕೇಟಿಂಗ್ ಗೂಡ್ಸ ಅನ್ನುವ ಸತ್ಯ ಅಮೇರಿಕೆಗೆ ಹೋದಾಗಲೇ ಗೊತ್ತಾಯಿತು. ಆ ಲೈಟಹೌಸಿನಿಂದ…. ಹೆಣ್ಣಾಗಲಿ- ಗಂಡಾಗಲಿ ಒಂದೆರಡು ದೆವ್ವಗಳನ್ನು ನಮ್ಮ ಕೆಮರಾದಲ್ಲಿ ಸರೆಹಿಡಿದುಕೊಂಡು ತರಬೇಕೆಂಬ ತವಕದಿಂದ ತ್ವರೆಮಾಡಿ ಹೋದೆವು.

 

ಬಿಸಿಲಿನ ಹಬ್ಬ !

ಆ ರಕ್ಷಿತ ಅರಣ್ಯ ಪ್ರದೇಶದ ಹತ್ತಾರು ಗುಂಜು-ಗೋಜಲು ದಾರಿಗಳನ್ನು ಪಂಜಿನ ದೆವ್ವಗಳಂತೆ ದಾಟಿ ಪಾಯಿಂಟ್ ಬೋನಿತಾ ತಲುಪಿದಾಗ ಮಧ್ಯಾಹ್ನ ಒಂದು ಆಗಿತ್ತು. ಅಮೇರಿಕೆಯಲ್ಲಿ ಅದು ಬಿಸಿಲ ಸುಗ್ಗಿಯ ಕಾಲ. ಭಾರತದಲ್ಲಿ ಬಿಸಿಲೆಂದರೆ ಭೀತಿ. ಅಮೇರಿಕೆಯಲ್ಲಿ ಬಿಸಿಲೇ ಸುಗ್ಗಿ. ಬಿಸಿಲು ಬಿಸಿಲಲ್ಲ; ಬಿಸಿಲಿನ ಹಬ್ಬ ! ಆ ಚಳಿಯ ನಾಡಿನಲ್ಲಿ ಬಿಸಿಲೆಂದರೆ ಥಂಡಿ ಹತ್ತಿದಾಗ ಬ್ರೂ ಕಾಫಿ ಕುಡಿದಷ್ಟು ಖುಶಿ.
ಅಲ್ಲಿಂದ ಆಳ ಸಮುದ್ರದ ಒಳಗೆ ಬಂಡೆಗಳ ಮೇಲಿನ ಇಕ್ಕಟ್ಟು ದಾರಿ ನಡೆದುಹೋಗಲು ಒಂದು ಮೈಲು ಬಿಕ್ಕಟ್ಟು ದಾರಿ ತುಳಿಯಲೇಬೇಕು. ನಮ್ಮನ್ನು ತೆಕ್ಕಿಮುಕ್ಕಿ ಬೀಸುವ ಆ ಕಡಲಗಾಳಿಯಲ್ಲಿ ಹೆಂಡತಿಯ ಕೈಹಿಡಿದು ಹೆಂಡಕುಡಿದವರಂತೆ ಜೋಲಿಹೊಡೆಯುತ್ತ ಹೋದೆ. ಪೋಲಿಸಿನವರು ಇಲಕಲ್ಲ ಚಿಕ್ಕಿಪರಾಸ ಪೇಟಿ ಸೀರೆಯುಟ್ಟ ನನ್ನ ಹೆಂಡತಿಯನ್ನು ಗೌರವದಿಂದ ನೋಡಿ ಸ್ಮಾಯಿಲ್ ಕೊಟ್ಟು ಮುಂದೆ ಬೀಳ್ಕೊಟ್ಟರು.
ನಮ್ಮ ದುರ್ಗಮ ದಾರಿಯ ಎಡಬಲದಲ್ಲಿ ನೂರಾರು ಅಡಿಗಳ ಕೆಳಗೆ ಪ್ಯಾಸಿಫಿಕ್ ಸಾಗರ ಸುಂದರಿ ರಕ್ಕಸಿಯಾಗಿ ಅಪ್ಪಳಿಸುತ್ತಿದ್ದಳು. ಕಾಡುಕೂಡ ಅಮೇರಿಕೆಯವರಿಗೆ ಜೀವಂತ ಕವನ. ಅಂಥಾ ಕಾಡಿನ ಕಿಗ್ಳ ಕಂಟಿಗಳನ್ನು ಭಕ್ತಿಯಿಂದ ಶಿಸ್ತಿನಿಂದ ಸಂರಕ್ಷಿಸಿದ್ದರು.
ಸಮುದ್ರ ಮಧ್ಯದಲ್ಲಿ ಒಂದು ಬಂಡೆಯಿಂದ ಇನ್ನೊಂದು ಬಂಡೆಗೆ ದಾಟಿ ಹೋಗಬಹುದಾದ ರೆಡ್‌ವುಡ್ ಕಟ್ಟಿಗೆಯ ತೂಗು ಸೇತುವೆಗಳು. ಎರಡು ದಂಡೆಗೆ ಪೋಲೀಸಗಿತ್ತಿಯರು ನಮ್ಮನ್ನು ಆ ಕಟ್ಟಿಗೆಯ ಸೇತುವೆಯ ಮೇಲೆ ಶಿಸ್ತಿನಿಂದ ಒಬ್ಬೊಬ್ಬರನ್ನಾಗಿ ಬಿಡುತ್ತಿದ್ದರು. ಒಮ್ಮೆಲೇ ಇಬ್ಬರನ್ನು ಬಿಡುತ್ತಿರಲಿಲ್ಲ. ಕಾರಣ; ಬಹುಶಃ ಸತ್ತರೆ ಒಬ್ಬರೇ ಸಾಯುಲೆಂಬ ಕಾಳಜಿಯಿಂದ!
ನಮ್ಮ ಕಾಲಕೆಳಗೆ ಆಳ ಸಮುದ್ರದ ಬಂಡೆಗಳ ಮೇಲೆ ನೂರಾರು ಸೀಗಲ್ ಹಕ್ಕಿಗಳು, ಗೋದಿಯ ಕಣಕದಂತಿದ್ದ ಸೀಲ್ ಸಮುದ್ರಪ್ರಾಣಿಗಳು ಅಸಂಖ್ಯ ಪ್ರಮಾಣದಲ್ಲಿ ಬಿಸಿಲಿಗೆ ಮೈಯೊಡ್ಡಿ ಮೈ ಕಾಯಿಸುತ್ತ ಯದ್ವಾತದ್ವಾ ಮಲಗಿದ್ದವು. ಅವುಗಳಿಗೆ ಸಾವಿನ ಭಯವಿಲ್ಲ! ನಮಗೆ ನೋವಿನ ರುಚಿಯಿಲ್ಲ !

ಫೋಟೊ ಕ್ಲಿಕ್ಕಿಸಿಕೊಂಡರು

ನಮ್ಮೆದುರಾದ ಪೆಡಂಭೂತ ಗಾತ್ರದ ಸಮುದ್ರ ಬಂಡೆಯ ಹೊಟ್ಟೆಯಲ್ಲೇ ಒಂದು ನೂರು ಹೆಜ್ಜೆಯ ಸುರಂಗಮಾರ್ಗ ಕೊರೆದಿದ್ದರು. ಆ ಐಸ್‌ಕ್ರೀಂ ದಾರಿಯಲ್ಲಿ ಸಾಗಿ; ಲೈಟಹೌಸಿನ ರುದ್ರಭಯಾನಕ ದೀಪಗೋಪುರ ತಲುಪಿದಾಗ ಆ ಮಹಾದ್ಭುತಕ್ಕೆ ಬೆಚ್ಚಿಬೆದರಿ ಬೆಬ್ಬೆಬ್ಬೇ ಅಂದೆವು ! ನಮ್ಮ ಫೋಟೊ ತೆಗೆಯಲು ಇಬ್ಬರು ಚಂಗುಲಾಬಿ ಹುಡಿಗಿಯರು ಹೆಲ್ಪ್ ಮಾಡಿದರು. ನಿಮ್ಮದು ಯಾವದೇಶ ಅಂತ ಅವರಿಗೆ ಕೇಳಿದಾಗ “ಪಾಕಿಸ್ತಾನ” ಅಂತ ಕುಲುಕುಲು ನಕ್ಕರು!
ಅಂಥ ಅತ್ಯಗಾಧ ಲೈಟಹೌಸನಲ್ಲೂ ಸಾವಿರವರ್ಷಗಳಿಂದ ಈ ಕಡಲ ದಂಡೆಗೆ ಢಿಕ್ಕಿಹೊಡೆದು ನುಚ್ಚುನೂರಾದ ಹಡಗುಗಳ ಒಂದು ದೊಡ್ಡ ಮ್ಯಾಪು ಅಲ್ಲಿ ಹಾಕಿದ್ದರು. ಅದೊಂದು ಆ ಲೈಟಹೌಸಿನ ಮಿನಿಮ್ಯೂಝಿಯಂ! ಯಾವ ಢಿಕ್ಕಿಯಲ್ಲಿ ಎಷ್ಟುಜನ ಯಶಸ್ವಿಯಾಗಿ ಸತ್ತರೆಂಬ ಅಂಕಿಸಂಖ್ಯೆಯೂ ಅಲ್ಲಿತ್ತು. ನಾವು ಆ ದೆವ್ವದ ಮ್ಯುಜಿಯಂದಲ್ಲಿ ಕಂಗಾಲಕಾಗಿ ಆದೆವು!
ಲೈಟ ಹೌಸಿನ ಮುಂದೆ ಕಾವಲು ಪಡೆಯ ಮೋಹಕ ಪೊಲೀಸ್ ಮೋಹಿನಿಯರು ನಮ್ಮೊಂದಿಗೆ ಸಹಕರಿಸಿ ಫೋಟೊ ಕ್ಲಿಕ್ಕಿಸಿಕೊಂಡರು.
ಲೈಟಹೌಸಿನ ಆ ಗಂಭೀರ ಶಿಖರದಿಂದ ಕೆಂಪುದೀಪ ಕ್ಷಣಕ್ಷಣಕ್ಕೂ ಫಕಫಕಿಸುತ್ತ ಸುತ್ತಮುತ್ತಲ ಸಹಸ್ರಮೈಲುಗಳ ಪ್ಯಾಸಿಫಿಕ್ ಸಮುದ್ರದೊಡಲಲ್ಲಿ ಸಿಗ್ನಲ್ ರವಾನಿಸುತ್ತಿತ್ತು. ಜೊತೆಗೆ ಓಂಕಾರ ನಾದದಂಥ ಒಂದು ಭೂಂಗುಡುವ ದೂರಸ್ಪರ್ಶಿ ನಾದವೂ ಆ ಶಿಖರದಿಂದ ಕಡಲ ಹಡಗುಗಳಿಗೆ ಧ್ವನಿ ಕಳಿಸುತ್ತಿತ್ತು.

ಅವು ವಾಕಿಂಗ್ ಹೋಗಿರಬಹುದು!

ಆ ಶೀತಲ ಶನಿಯಂತಿರುವ ಮ್ಯುಜಿಯಮ್ಮಿನ ಯಾವ ಮೂಲೆಯಲ್ಲಾದರೂ ದೆವ್ವಗಳಿವೆಯೇ ಅಂತ ಹುಡಿಕಿಯೇ ಹುಡಿಕಿದೆವು. ನಮಗೆ ಬಾಯಾಡಿಸಲು ಕೂಡ ಒಂದು ಪುಡಿಕಾಸು ಪುಂಡಿಪಲ್ಲೆ ದೆವ್ವ ಸಿಗಲಿಲ್ಲ. ತುಂಬಾ ನಿರಾಸೆಯಾದ ನನಗೆ….. “ಅವು ವಾಕಿಂಗ್ ಹೋಗಿರಬಹುದು”….ಎಂದು ಹೆಂಡತಿ ಸಮಾಧಾನ ಹೇಳಿದಳು.
ಸಮುದ್ರ ತೋಳಿನ ರುದ್ರಮಿಲನವೇ ಈ ಪಾಯಿಂಟ್ ಬೋನೀತಾ! ಅಂಥಾ ಅಪರಂಪಾರ ಕಾಡು- ಕಡಲು ಸುತ್ತಿದರೂ ಅಲ್ಲಿ ಒಂದೇಒಂದು ಬೀಡಿ- ಚುಟ್ಟಾ-ಸಿಗರೇಟು ತುಂಡು, ಪ್ಲಾಸ್ಟಿಕ್ ಪಿಶಾಚಿಯ ಕಸ-ಕಡ್ಡಿ ಸಿಗಲಿಲ್ಲ. ನೆಲವನ್ನು ನಾಲಿಗೆಯಿಂದ ನೆಕ್ಕಬೇಕು…. ಅಂಥಾ ಸ್ವಚ್ಛ! ಅಂಥಾ ಸುಂದರ!
ಎತ್ತರದ ಆ ಪೋಲೀಸವ್ವೆಯ ಸೂಚನೆಯಂತೆ ಅಲ್ಲಿಯೇ ಇದ್ದ ಇನ್ನೊಂದು ಮ್ಯೂಜಿಯಂ ಪ್ರವೇಶಿಸಿದೆವು. ಎಂಥಾ ವಿಚಿತ್ರ ಅಂತೀರಿ? ಒಬ್ಬ ಅಮೇರಿಕನ್ ಮಹಿಳೆ ಕೋಟಿಗಟ್ಟಲೆ ಡಾಲರ್ ಸುರಿದು ಆ ಕಡಲಿನ ಆದಿಮಾನವ ಸಂಸ್ಕೃತಿಯ ಒಂದು ಮ್ಯೂಜಿಯಂ ಆಸ್ಥೆಯಿಂದ ನಡೆಸುತ್ತಿದ್ದಾಳೆ. ಕಾರಣ ಅವಳ ತಂದೆ ಇದೇ ಪಾಯಿಂಟ್ ಬೋನಿತಾದಲ್ಲಿ ಸೇವೆಮಾಡಿ ಸತ್ತುಹೋದನಂತೆ. ತಂದೆಯ ನೆನಪಲ್ಲಿ ರೂಪಪಡೆದ ಈ ವಸ್ತುಸಂಗ್ರಹಾಲಯ ಕಡಲು ಕಾಡು ನಾಡಿನ ಆದಿ ಮಾನವರ ಬದುಕು ಬವಣೆ, ನೆಲ- ಹೊಲ- ಬಿಲಗಳನ್ನು ಜೀವಂತವಾಗಿ ಬಿಚ್ಚಿಟ್ಟಿದೆ! ರಾಕ್ಷಸಗಾತ್ರದ ಇಂದಿನ ಅಮೇರಿಕೆ ಇನ್ನೂ ಹುಟ್ಟುವ ಮೊದಲೇ ಅಲ್ಲಿಯ ನೂರಾರು ಬುಡಕಟ್ಟುಗಳ ಆದಿ ನಿವಾಸಿಗಳ ಜೀವನ ಶೈಲಿ, ಆಹಾರ, ವಿಹಾರಗಳೆನ್ನೆಲ್ಲ ಆ ಮ್ಯುಜಿಯಮ್ಮಿನಲ್ಲಿ ಹೂಬೇಹೂಬಾಗಿ ರೂಪಗೊಳಿಸಲಾಗಿತ್ತು.

ಫ್ರೀ….. ಫ್ರೀ

ಅಲ್ಲಿಯ ಅಪಾರ ಸಂಗ್ರಹಗಳ ಜೊತೆಗೆ ನಮ್ಮನ್ನು ಆಕರ್ಷಿಸಿದ್ದು ಬಿಸಿಬಿಸಿಯ ಟೀ-ಕಾಫಿ ಕಾರ್ನರ್! ಅದಕ್ಕೆ ಎಷ್ಟು ದುಡ್ಡು ಅಂತ ಆ ದಮ್ಮ ಮೈಕಟ್ಟಿನ ಒಡತಿಗೆ ಕೇಳಿದೆವು. ಅವಳು….. “ಫ್ರೀ….. ಫ್ರೀ….” ಅಂತ ಆಮಂತ್ರಿಸಿದಳು. ಫ್ರೀ ಇದ್ದರೆ ಸಾಕು ನನ್ನ ಹೆಂಡತಿ ಹಾಜರ! ಬೆಂಗಳೂರಿನಲ್ಲಿ ರವೀಂದ್ರಕಲಾ ಕ್ಷೇತ್ರದ ಪುಕ್ಕಟೆ ನಾಟಕಗಳೆಂದರೆ ಅವಳಿಗೆ ಬೆಲ್ಲ-ಬೆಳಸಿ! ಜೀವನದಲ್ಲೇ ಎಂದಿಗೂ ಚಹಾ ಸೇವಿಸದ ಅವಳು ಇಂದು ಆ ಅಪರಂಪಾರ ಥಂಡಿಗೆ ಗದಗುಟ್ಟಿ ನಡುಗಿ ಚಹಾದ ಟಮ್ರೇಲಾ ಎತ್ತಿದಳು. ನಾವೆಲ್ಲರೂ ಕಾಫಿಯ ಟಮ್ರೇಲಾ ಗಾತ್ರದ ಮಿಲ್ಟ್ರಿ ಕಪ್ಪಿನಲ್ಲಿ ತುಟಿಗಳನ್ನು ತೇಲಿಸಿದೆವು.
ಮ್ಯುಜಿಯಂ ವೀಕ್ಷಣೆಯ ನಂತರ ಅವಳಿಂದ ಬೀಳ್ಕೊಟ್ಟು ಮರಳಿ ಸ್ಯಾನ್‌ಫ್ರಾನ್ಸಿಸ್ಕೋದ ಆ ಕಡಲದಂಡೆಯ ಗುಡ್ಡದಗುಂಟ ಮಗ ಭಿರ್ರೀಂಗ್ ಅಂತ ಕಾರು ಓಡಿಸಿದ. ಕಾರಿನಲ್ಲೇ ಮನೆಯಿಂದ ತಂದ ಉಪ್ಪಿಟ್ಟು- ವಡಾ- ಇಡ್ಲಿ- ಚೂರಮರಿ-ಚೂಡಾ ಮುಟುಮುಟು ತಿಂದೆವು.

ನಮಗೆ ಪುರಸೊತ್ತಿಲ್ಲ!

ಕಡಲ ಪರ್ವತದ ಓರೆಗುಂಟ ಓಡುತ್ತಿರುವ ನಮ್ಮ ಕಾರು ಒಮ್ಮೆಲೇ ಘಕ್ಕನೇ ನಿಂತಿತು! ಶಿವಶಿವಾ…. ನೋಡುತ್ತೇವೆ…. ನಡುದಾರಿಯಲ್ಲಿ ಒಬ್ಬ ಅಮೇರಿಕೆಯ ಮನುಷ್ಯ ಕಣ್ಣಿಗೆ ಕರ್ಚೀಪು ಒತ್ತಿ ಅಳುತ್ತ ನಿಂತಿದ್ದಾನೆ. ನಾವು ಏನು ಆಕ್ಸಿಡೆಂಟು ಅಂತ ಅವನ ಬಳಿ ಹೋದೆವು.
ನಿಜಕ್ಕೂ ಅಲ್ಲಿ ಭೀಕರ ದುರಂತ ಸಂಭವಿಸಿತ್ತು. ಬಾರಕೋಲು ಹೊಡೆದಂತೆ ಬೀಸುತ್ತಿದ್ದ ಸಮುದ್ರದ ವೇಗದ ಗಾಳಿಯಲ್ಲಿ ತೇಲಿಬರುತ್ತಿದ್ದ ಮೂರು ಕಡಲ ಹಕ್ಕಿಗಳು ಗಾಳಿಗೆ ದಾರಿತಪ್ಪಿ; ಅವನ ವೇಗದ ಕಾರಿಗೆ ಫಡಲ್ಲನೇ ಅಪ್ಪಳಿಸಿ, ದಾರಿಯ ಮಧ್ಯದಲ್ಲಿ ಕ್ಷಣಾರ್ಧದಲ್ಲಿ ಹೆಣವಾಗಿ ಬಿದ್ದಿದ್ದವು!
ಅವನ ಗಲ್ಲದಿಂದ ಕಣ್ಣೀರು ಇಳಿಯುತ್ತಿತ್ತು !
ನಮ್ಮ ಬೆಂಗಳೂರೇ ವಾಸಿ. ಏಕೆಂದರೆ ಪಕ್ಷಿಗಳೇಕೆ ಇಲ್ಲಿ ಮನುಷ್ಯರೇ ಗಾಡಿಗಳಿಗೆ ಢಿಕ್ಕಿ ಹೊಡೆದರೂ ಯಾಕೆಂದು ಕೇಳಲು ನಮಗೆ ಪುರಸೊತ್ತಿಲ್ಲ!
ಅಗಾಧ ನೋವು ಅನುಭವಿಸುತ್ತಿದ್ದ ಆ ಅಮೇರಿಕನ್ನನ ಭುಜವನ್ನು ವಿಶ್ವಾ ಮೆಲ್ಲನೆ ಮುಟ್ಟಿ ಸಂತೈಸಿ, ಮೌನವಾಗಿ ಕಾರಿನಲ್ಲಿ ಕುಳ್ಳಿರಿಸಿದ. ಆ ಪಕ್ಷಿಗಳ ಮೃತ ದೇಹಗಳನ್ನು ಟಿಶ್ಯೂ ಪೇಪರಿನಲ್ಲಿ ಮೆಲ್ಲನೇ ಸುತ್ತಿ; ಸಮುದ್ರದ ಮಳಲ ರಾಸಿಯಲ್ಲಿ ಹುಗಿದು, ಒಂದು ನಿಮಿಷ ಪ್ರಾರ್ಥನೆ ಸಲ್ಲಿಸಿದ. ನಾವೆಲ್ಲರೂ ಪ್ರಾರ್ಥನೆಯಲ್ಲಿ ಕ್ಷಣಕಾಲ ತೇಲಿ ಹೋದೆವು. ಮೇಲೆ ಆಕಾಶ ಹನಿಹನಿ ಸುರಿಸಿತು.
ಕಡಲು ಕೂಗಿತು. ಸಂಜೆ ಕರೆಯಿತು. ಕಡಲ ಹಕ್ಕಿಗೆ ಕಡೆಯ ನಮನ ಸಲ್ಲಿಸಿ , ಮರಳಿ ನಮ್ಮ ಕಾರು ಸ್ಯಾನ್‌ಫ್ರಾನ್ಸಿಸ್ಕೋದ ಕಡೆಗೆ ಓಡುತ್ತಿತ್ತು.
ನಮ್ಮ ಖುಶಿ ಮಾಯವಾಗಿತ್ತು !
ನಮ್ಮ ಮನಸ್ಸು ಭಾರವಾಗಿತ್ತು !
ನಮ್ಮ ಕಾರು ಮೌನಯಾತ್ರೆಯಲ್ಲಿ ಅಮೇರಿಕೆಯ ರಾತ್ರಿ ಕೊರೆಯುತ್ತ ಹಂಸಗೀತೆ ಹಾಡುತ್ತಿತ್ತು !!

 

ಲೇಖಕರ ವಿಳಾಸ –

ಪ್ರೊ. ಜಿ. ಎಚ್. ಹನ್ನೆರಡುಮಠ
# ೫ : “ಮಾವು ಮಲ್ಲಿಗೆ” : ಯೋಗಭವನ: ಇಂದ್ರಪ್ರಸ್ಥ
ಬನ್ನೇರುಘಟ್ಟದ ದಾರಿ: ಗೊಟ್ಟಿಗೆರೆ ಅಂಚೆ :ಬೆಂಗಳೂರ- ೫೬೦೦೮೩
ದೂರವಾಣಿ- ೯೯೪೫೭ ೦೧೧೦೮