ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಇಂದು ರಾಜ್ಯೋತ್ಸವವನ್ನು ಕರ್ನಾಟದಲ್ಲಿ ಮಾತ್ರ ಆಚರಿಸದೇ ಇಡೀ ವಿಶ್ವದಲ್ಲಿಯೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ನಮ್ಮ ಕನ್ನಡ ಭಾಷೆ, ಸಾಹಿತ್ಯ ಆಚಾರ, ವಿಚಾರ ಸಂಸ್ಕೃತಿ, ಪರಿಸರ ಶ್ರೀಮಂತಗೊಂಡಿರುವ ಕನ್ನಡ ನಾಡು ಬಲಾಡ್ಯ ಶಕ್ತಿ ಹೊಂದಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಕರ್ತವ್ಯ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ತಾಲೂಕಾ ಆಡಳಿತದ ಆಶ್ರಯದಲ್ಲಿ ಅಡವಿಸಿದೇಶ್ವರ ಮಠದ ಹತ್ತಿರ ವಿವಿಧ ರೂಪಕಗಳ ಮೇರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಯುವಜನಾಂಗ ಆಂಗ್ಲಭಾಷೆಗೆ ಒತ್ತು ನೀಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ನಾವು ಪ್ರತಿ ದಿನವು ಮನೆಗಳಲ್ಲಿ ಹಾಗೂ ಶಾಲೆಗಳಲ್ಲಿ ನಮ್ಮ ಮಾತೃ ಭಾಷೆ ಕನ್ನಡಕ್ಕೆ ಒತ್ತು ನೀಡಬೇಕು. ಮಾತೃಭಾಷೆಗೆ ಸರಕಾರ ಪ್ರಾತಿನಿಧ್ಯ ಕೊಡಬೇಕು. ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ. ರಾಜ್ಯೋತ್ಸವದಂದು ಮಾತ್ರ ಕನ್ನಡ ಭಾಷೆ ಮಾತನಾಡುವುದಕ್ಕಿಂತ ಪ್ರತಿದಿನದ ಬಳಕೆಯ ಭಾಷೆಯಾಗಬೇಕೆಂದು ಹೇಳಿದರು.
ತಹಶೀಲ್ದಾರ ರೇಷ್ಮಾ ತಾಳಿಕೋಟಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ನಮ್ಮ ಕನ್ನಡ ನಾಡಿನ ವಿವಿಧ ಭಾಗಗಳನ್ನು ಒಗ್ಗೂಡಿಸಿ ಏಕೀಕರಣವಾದ ಹಿನ್ನೆಲೆಯಲ್ಲಿ ನಾವು ಇಂದು ರಾಜ್ಯೋತ್ಸವನ್ನು ಆಚರಿಸುತ್ತಿದ್ದೇವೆ. ಅದಕ್ಕಾಗಿ ನಾವು ನಾಡಿನ ಸಂಸ್ಕೃತಿ ಸಂಪ್ರದಾಯಗಳನ್ನು ಮುನ್ನಡಸಬೇಕಾಗಿದೆ ಎಂದರು.
ಅಡವಿಸಿದ್ದೇಶ್ವರ ಮಠದ ಬಳಿ ಕನ್ನಡಾಂಬೆಯ ಭಾವಚಿತ್ರಕ್ಕೆ ಕ.ಸಾ.ಪ ಅಧ್ಯಕ್ಷ ಪ್ರಕಾಶ ದೇಶಪಾಂಡೆ ಪೂಜೆ ಸಲ್ಲಿಸಿ ಮಾತನಾಡಿ, ಕನ್ನಡವೇ ನಮ್ಮ ಉಸಿರು, ಕನ್ನಡ ಭಾಷೆ ಉಳಿಸುವುದಕ್ಕಾಗಿ ನಾವೆಲ್ಲರೂ ಶ್ರಮೀಸಬೇಕಾಗಿದೆ ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಶಾಲೆಗಳ ಹಾಗೂ ಇಲಾಖೆಗಳ, ಕನ್ನಡವನ್ನು ಪ್ರತಿಬಿಂಬಿಸುವ ರೂಪಕಗಳ ಮೆರವಣಿಗೆಗಳು ಆಕರ್ಷಣೆಯವಾಗಿ ಕಾರ್ಯಕ್ರಮಕ್ಕೆ ಮೆರಗು ನೀಡಿದವು.
ತಾ.ಪಂ ಅಧ್ಯಕ್ಷ ದಸ್ತಗೀರ ಬಸ್ಸಾಪೂರೆ, ಮಾವೀರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ತಾಲೂಕಾ ಪಂಚಾಯತ ಇಒ ಬಿರಾದಾರ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ಉಪತಹಶೀಲ್ದಾರ ಕಿರಣ ಬೆಳವಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಆರೋಗ್ಯ ನಿರೀಕ್ಷಕ ವಿಶ್ವನಾಥ ಸೋಗಲದ, ಸಿ.ಪಿ.ಐ ಗುರುರಾಜ ಕಲ್ಯಾಣ ಶೆಟ್ಟಿ, ನಜುಂಡಪ್ಪ, ಡಾ.ಎಸ್.ಕೆ ಮಂಕಾನದಾರ, ಉದಯ ಹುಕ್ಕೇರಿ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ