ಪ್ರಗತಿವಾಹಿನಿ ಸುದ್ದಿ: ಕನ್ನಡ ನಾಡಿನ ಜವಾಬ್ದಾರಿ ನಾಗರಿಕರಾದ ನಾವುಗಳು ನಾಡಿನ ವೈಜ್ಞಾನಿಕ, ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಹಾಗೂ ವಿಶ್ವ ಗುರುವಾಗುವತ್ತ ದಾಪುಗಾಲಿಡಿರುತ್ತಿರುವ ಭಾರತದ ಭೂಪಟದಲ್ಲಿ ಕರ್ನಾಟಕವನ್ನು ಶ್ರೇಷ್ಠ ರಾಜ್ಯವನ್ನಾಗಿ ಮಾಡುವತ್ತ ದೃಷ್ಠಿಹರಿಸಿ ನಮ್ಮ ಸಾಮಾಜಿಕ ಕೆಲಸಗಳಿಂದ “ವಿಶ್ವ ಭಾರತಿಗೆ ಕನ್ನಡದ ಆರತಿ ಮಾಡೋಣ” ಎಂದು ಪ್ರೊ. ವಿದ್ಯುಶಂಕರ್ ಎಸ್. ಅವರು ಹೇಳಿದರು. ಇವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಇವತ್ತಿನ ಈ ರಾಜ್ಯೋತ್ಸವದ ಜೊತೆಗೆ ನಾವು “ಸುವರ್ಣ ಕರ್ನಾಟಕ” ಸಂಭ್ರಮದಲ್ಲಿದ್ದೆವೆ ಅದೇನೆಂದರೆ 1956ರಲ್ಲಿ ರಾಜ್ಯ ರಚನೆಯಾದರೂ 1973 ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ “ಕರ್ನಾಟಕ” ಎಂದು ನಾಮಕರಣವಾಯಿತು. ಈ ನಾಮಕರಣವಾಗಿ 50 ವರ್ಷಗಳು ಮುಗಿದು 51 ನೇ ವರ್ಷಕ್ಕೆ ಕಾಲಿಟ್ಟಿದ್ದೆವೆ.
ನಮ್ಮ ನಾಡು ತುಂಬಾ ವಿಶಿಷ್ಟ ಮತ್ತು ವಿಶೇಷವಾದದ್ದು ಕನ್ನಡವೇ ಸತ್ಯ. ಕನ್ನಡವೇ ನಿತ್ಯ’. ಕನ್ನಡ ಎಂಬುದು ಬರೀ ಭಾಷೆಯಲ್ಲ, ಅದು ನಮ್ಮೆಲ್ಲರ ಉಸಿರು ಮತ್ತು ಈ ನೆಲದ ಸಂಸ್ಕೃತಿ ಹಾಗೂ ನಿತ್ಯದ ಬದುಕು ಎಂದು ಹೇಳಿದರು.
ಭಾರತದ ಅತ್ಯಂತ ಪುರಾತನ ಭಾಷೆ ಮತ್ತು ಸಂಸ್ಕೃತಿಗಳಲ್ಲಿ ಒಂದಾದ ಕನ್ನಡ ಭಾಷೆಗೆ ಸುಮಾರೂ ಎರಡು ಸಾವಿರ ವರ್ಷಗಳ ಇತಿಹಾಸವಿದೆ.
ಈ ಭಾಷೆಯ ಲಿಪಿ ಮತ್ತು ಮಾತಾಡುವ ಶೈಲಿ ವೈಜ್ಞಾನಿಕವಾಗಿದ್ದು ಪರಿಪೂರ್ಣ ಭಾಷೆಯಾಗಿದೆ. ಅದಕ್ಕೆ ವಿನೋಬಾ ಭಾವೆ ಅವರು ಕನ್ನಡ ಭಾಷೆಗೆ “ಲಿಪಿಗಳ ರಾಣಿಯಂದು” ಕರೆದಿದ್ದಾರೆ.
ಹಲ್ಮಿಡಿಯ ಶಾಸನವನ್ನು ಇದುವರೆಗೂ ಕನ್ನಡದ ಪ್ರಾಚೀನ ಶಾಸನವೆನ್ನಲಾಗುತ್ತಿತ್ತು. ಆದರೆ ಕೇಂದ್ರ ಪುರಾತತ್ವ ಇಲಾಖೆ ಹಲ್ಮಿಡಿಗಿಂತಲೂ ಹಳೆಯದಾದ ಶಾಸನವನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಹತ್ತಿರದ ತಾಳಗುಂದಲ್ಲಿ ಪತ್ತೆ ಹಚ್ಚಲಾಗಿದ್ದು ಕನ್ನಡ ಇತಿಹಾಸ ಇನ್ನೂ ಹಿಂದಕ್ಕೆ ಹೋಗುತ್ತದೆ.
ಇಷ್ಟು ಶ್ರೇಷ್ಠ ಇತಿಹಾಸ ಹೊಂದಿರುವ ಕನ್ನಡದಲ್ಲಿ ಪಂಪ, ರನ್ನ, ಹರಿಹರ, ರಾಘವಾಂಕ, ಕೇಶಿರಾಜ, ಸರ್ವಜ್ಞ, ಬಸವಣ್ಣ, ಅಕ್ಕಮಹಾದೇವಿ, ದಾಸರು, ಇತ್ತೀಚಿನ ಕುವೆಂಪು, ಬೇಂದ್ರೆ, ತರಾಸು, ಮಾಸ್ತಿ ಮತ್ತು ಇನ್ನೂ ಅನೇಕ ಕವಿಗಳು ಹಾಗೂ ಲೇಖಕರಿಂದ ಹೊರಹೊಮ್ಮಿದ ಸಾಹಿತ್ಯ ಕನ್ನಡವನ್ನು ಜಗತ್ತಿನ ಅತ್ಯಂತ ಸಂಪತ್ತುಳ್ಳ ಭಾಷೆಯನ್ನಾಗಿ ಮಾಡಿದೆ.
ಅಷ್ಟೇ ಅಲ್ಲದೆ ಅನೇಕ ಕನ್ನಡ ನೆಲದ ಮಹನೀಯರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಿ ರಾಷ್ಟ್ರಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದಿದ್ದಾರೆ.
ಇವತ್ತು ನಾವು ಈ ಶ್ರೇಷ್ಠ ಭಾಷೆಯನ್ನು ಬಳಸುವುದರ ಜೊತೆಗೆ ಭಾಷೆಯ ಸಾಹಿತ್ಯದ ಬೆಳವಣಿಗೆಗೆ ನಮ್ಮ ಕೈಲಾದ ಸೇವೆಯನ್ನು ಮಾಡಿ
ತಾಯಿ ಭಾರತಿಗೆ ಕನ್ನಡದ ಆರತಿಯನ್ನು ಮಾಡಿ ವಿಶ್ವಗುರು ಭಾರತದ ಭೂಪಟದಲ್ಲಿ ಕನ್ನಡದ ನೆಲ ಸುವರ್ಣಯುಗದಿಂದ ಕಂಗೊಳಿಸುವಂತಾಗಲಿ.
ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿ ಟಿ ಯು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ