*ಕರ್ಣಾಟಕ ಬ್ಯಾಂಕ್ ನಿಂದ ಸಿ.ಎಸ್.ಆರ್ ನಿಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಚೇರಿ ನವೀಕರಣಕ್ಕೆ ನೆರವು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾರ್ವಜನಿಕ ಹೊಣೆಗಾರಿಕೆ ನಿರ್ವಹಣೆ (ಸಿ.ಎಸ್.ಆರ್.) ನಿಧಿಯ ಅಡಿಯಲ್ಲಿ ಕರ್ಣಾಟಕ ಬ್ಯಾಂಕ್ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಕಂಪ್ಯೂಟರ್ಗಳು ಹಾಗೂ ಪೀಠೋಪಕರಣಗಳಿಗೆ 20,00,000 ( ಇಪ್ಪತ್ತು ಲಕ್ಷ ರೂಪಾಯಿಗಳು) ರೂ.ಗಳನ್ನು ನೀಡಿದೆ. ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಕನ್ನಡ ಅಭಿವೃದ್ಧಿಯ ಕಾಯಕದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ, ನಾಡಿನ ಹೆಮ್ಮೆಯ ಕರ್ಣಾಟಕ ಬ್ಯಾಂಕ್ ಪರಿಷತ್ತಿನೊಂದಿಗೆ ಕೈ ಜೋಡಿಸಿರುವುದಕ್ಕೆ ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಆಭಾರಿಯಾಗಿದೆ ಎಂದು ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಕರ್ಣಾಟಕ ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಉಪಕ್ರಮದ ಭಾಗವಾಗಿ ಬ್ಯಾಂಕು ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ನಿರಂತರ ಒಡನಾಟದಲ್ಲಿ ಇದ್ದು, ಕನ್ನಡ ಭಾಷೆ, ನಾಡು- ನುಡಿ ಸಂಸ್ಕೃತಿಯ ಅಭ್ಯುದಯಕ್ಕೆ ಕೈ ಜೋಡಿಸುತ್ತ ಬಂದಿರುತ್ತದೆ. ಹೀಗೆ ಜನಪರ ಕಾಳಜಿಯಿಂದಾಗಿ ಕರ್ಣಾಟಕ ಬ್ಯಾಂಕ್ ನಾಡಿಗೆ ಮಾದರಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯ ೨ನೇ ಮಹಡಿಗೆ ಅಗತ್ಯವಿರುವ ಫಾಲ್ ಸೀಲಿಂಗ್, ಎಲೆಕ್ಟ್ರೀಲ್ ವೈರಿಂಗ್, ಫ್ಯಾನ್ಗಳು, ವಿದ್ಯುತ್ ವ್ಯವಸ್ಥೆ, ಪೀಠೋಪಕರಣಗಳು, ವರ್ಕ್ಸ್ಸ್ಟೇಷನ್ಗಳಿಗಾಗಿ 20 ಲಕ್ಷ ರೂ. ಕೊಡುಗೆಯಾಗಿ ನೀಡುವ ಮೂಲಕ ಕನ್ನಡದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಬೇಕಾಗಿರುವ ಉಪಕರಣಗಳನ್ನು ಈಗಾಗಲೇ ಸರಬರಾಜು ಮಾಡಿರುವ ಸಂಸ್ಥೆಗೆ ಕರ್ಣಾಟಕ ಬ್ಯಾಂಕ್ ಸಿಎಸ್ಆರ್ ನಿಧಿಯಡಿಯಲ್ಲಿ ಮೊದಲ ಹಂತದಲ್ಲಿ ಹಣ ಬಿಡುಗಡೆ ಮಾಡಿತ್ತು. ಕಾಮಗಾರಿಗಳು ನಡೆದಿರುವ ಹಿನ್ನೆಲೆಯಲ್ಲಿ ಪರಿಷತ್ತು ನೀಡಿರುವ ದೃಡೀಕರಣಾ ಪತ್ರದ ಆಧಾರದಲ್ಲಿ ಬ್ಯಾಂಕ್ ಬಾಕಿ ಉಳಿದಿರುವ ಹಣವನ್ನು ಮಂಜೂರು ಮಾಡುವುದಾಗಿ ಹೇಳಿತ್ತು. ಅದರಂತೆ ಈಗ ಎಲ್ಲಾ ಕಾಮಗಾರಿಗಳು ಮುಕ್ತಾಯವಾದ ಹಿನ್ನೆಲೆಯಲ್ಲಿ ಹಣವನ್ನು ಬಿಡುಗಡೆ ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿದೆ. ನಮ್ಮ ಬ್ಯಾಂಕ್ ಕನ್ನಡ ನಾಡು ನುಡಿ ಭಾಷೆಯ ಮೇಲೆ ಅಪಾರವಾದ ಗೌರವ ಇಟ್ಟುಕೊಂಡ ಹಿನ್ನೆಲೆಯಲ್ಲಿ ಪರಿಷತ್ತಿನ ಕಾರ್ಯವನ್ನು ಕಂಡು ನಮ್ಮ ಬ್ಯಾಂಕ್ ಕಡೆಯಿಂದ ಕನ್ನಡದ ಕಾಯಕದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಡುಗೆಯನ್ನು ನೀಡಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕನ್ನಡದ ಕೆಲಸಕ್ಕೆ ಬ್ಯಾಂಕ್ ಶುಭ ಹಾರೈಸುತ್ತಿದೆ ಎಂದು ಕರ್ಣಾಟಕಾ ಬ್ಯಾಂಕ್ನ ಉಪ ಪ್ರಧಾನ ವ್ಯವಸ್ಥಾಪಕರಾದ ನಾಗರಾಜ್ ಉಪಾಧ್ಯಾಯ ಅವರು ಚಕ್ ನೀಡಿ ಮಾತನಾಡಿದರು.
ಕರ್ಣಾಟಕ ಬ್ಯಾಂಕ್ ಸಾರ್ವಜನಿಕ ಹೊಣೆಗಾರಿಕೆ ನಿರ್ವಹಣೆ (ಸಿ.ಎಸ್.ಆರ್.) ನಿಧಿಯ ಅಡಿಯಲ್ಲಿ ಈಗಾಗಲೇ ಮೊದಲ ಹಂತವಾಗಿ 17,48,146.00 (ಹದಿನೇಳು ಲಕ್ಷದ ನಲವತ್ತೆಂಟು ಸಾವಿರದ ನೂರ ನಲವತ್ತಾರು)ರೂ. ನೀಡಿದ್ದು, ಈ ಬಾರಿ 20,00,000 (ಇಪ್ಪತ್ತು ಲಕ್ಷ ರೂಪಾಯಿಗಳು) ರೂ. ನೀಡುವುದರೊಂದಿಗೆ ಒಟ್ಟು 37,48,146.00 ( ಮೂವತ್ತೇಳು ಲಕ್ಷದ ನಲವತ್ತೆಂಟು ಸಾವಿರದ ನೂರ ನಲವತ್ತಾರು) ರೂ. ಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದ ಮಾಧವ ವಿ.ಪಿ. ಅವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ