*ಕಿತ್ತೂರು ಉತ್ಸವ, ಬೆಳಗಾವಿ ರಾಜ್ಯೋತ್ಸವಕ್ಕೆ ಮೈಸೂರು ದಸರಾ ಮಾದರಿ ಅನುದಾನ ಬಿಡುಗಡೆಗೆ ಕರವೇ ಆಗ್ರಹ*
ಪಾದಯಾತ್ರೆ ಮೂಲಕ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಉತ್ತರ ಕರ್ನಾಟಕದ ಎರಡು ಪ್ರಮುಖ ಉತ್ಸವಗಳಿಗೆ ಮೈಸೂರು ದಸರಾ ಮಾದರಿಯಲ್ಲಿ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಕರವೇ ಜಿಲ್ಲಾಧ್ಯಕ್ಷ ದೀಪಕ ಬ ಗುಡಗನಟ್ಟಿ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವವನ್ನು ಬಿಂಬಿಸುವ ಕಿತ್ತೂರು ಉತ್ಸವಕ್ಕೆ ಐದು ಕೋಟಿ ರೂ ಅನುದಾನ, ಹಾಗೂ ಬೆಳಗಾವಿ ನಗರದಲ್ಲಿ ನಡೆಯುವ ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ರಾಜ್ಯ ಸರ್ಕಾರ ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಚನ್ನಮ್ಮನ ಕಿತ್ತೂರಿನಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ನಡುವಳಿಕೆಯಿಂದ ಪ್ರತಿ ವರ್ಷ ಉತ್ತರ ಕರ್ನಾಟಕದ ಜನ ರಾಜ್ಯೋತ್ಸವ ಮತ್ತು ಕಿತ್ತೂರು ಉತ್ಸವಕ್ಕಾಗಿ ಹೋರಾಟ ಮಾಡಲೇಬೇಕಾಗುತ್ತದೆ. ಸರ್ಕಾರ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದೇ ಇರುವದರಿಂದ ಉತ್ಸವಗಳ ಸಿದ್ಧತೆ ಮಾಡಲು ಬೆಳಗಾವಿ ಜಿಲ್ಲಾಡಳಿತ ಪ್ರತಿ ವರ್ಷವೂ ವೇದನೆ ಅನುಭವಿಸುತ್ತಲೇ ಬಂದಿದೆ.
ಸರ್ಕಾರ ಕಿತ್ತೂರು ಉತ್ಸವದ ಎರಡು ಅಥವಾ ಮೂರು ದಿನ ಮೊದಲು ಅನುದಾನ ಬಿಡುಗಡೆ ಮಾಡುತ್ತದೆ. ಇಷ್ಟೊಂದು ವಿಳಂಬವಾಗಿ, ಅಲ್ಪ ಪ್ರಮಾಣದ ಅನುದಾನವನ್ನು ಬೆಳಗಾವಿ ಜಿಲ್ಲೆಯ ಜನ ಹೋರಾಟ, ಕೂಗಾಟ, ಚೀರಾಟ ಮಾಡಿದ ಬಳಿಕವೇ ಕೊಡುತ್ತೀರಾ. ಇದು ಸರಿಯೇ? ಮೈಸೂರು ದಸರಾ ಉತ್ಸವಕ್ಕೆ ಅನುದಾನ ಕೊಡಿ ಎಂದು ಅಲ್ಲಿಯ ಜನ ಎಂದಿಗೂ ಹೋರಾಟ ಮಾಡಿದ್ದನ್ನು ನಾವು ಕೇಳಿಲ್ಲ. ನೋಡಿಲ್ಲ. ಅಲ್ಲಿಯ ಜನ ಹೋರಾಟ ಮಾಡುವ ಮೊದಲೇ ಅನುದಾನ ಬಿಡುಗಡೆ ಮಾಡ್ತೀರಾ ? ಈ ತಾರತಮ್ಯ ದಿಂದ ನಾವು ನೊಂದಿದ್ದೇವೆ. ನಮ್ಮ ಸಹನೆಯ ಕಟ್ಟೆ ಒಡೆಯುವ ಹೊಸ್ತಿಲಲ್ಲಿದೆ ಎಂದು ಎಚ್ಚರಿಸಿದ್ದಾರೆ.
ಕಿತ್ತೂರು ಉತ್ಸವಕ್ಕೆ ಐದು ಕೋಟಿ ರೂ, ಬೆಳಗಾವಿ ರಾಜ್ಯೋತ್ಸವಕ್ಕೆ ಎರಡು ಕೋಟಿ ರೂ ಅನುದಾನವನ್ನು ಪ್ರತಿ ವರ್ಷ ಅಗಸ್ಟ್ ತಿಂಗಳ ಮೊದಲ ವಾರದಲ್ಲೇ ಬಿಡುಗಡೆ ಮಾಡುವ ನಿರ್ಧಾರ ಬಜೆಟ್ ನಲ್ಲೇ ಪ್ರಕಟಿಸಬೇಕು. ಇದಕ್ಕಾಗಿ ವಿಶೇಷ ನಿಯಮಾವಳಿ ಜಾರಿ ಮಾಡಬೇಕು. ಯಾವುದೇ ಸರ್ಕಾರ ಬಂದರೂ ಈ ನಿಯಮ ಪಾಲನೆಯಾಗುವ ಕಾನೂನು ರಚಿಸಬೇಕು ಎಂದು ಕರವೇ ಒತ್ತಾಯಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ