
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ರಾಜ್ಯದ ಪಾಲಿಗೆ ಇಂದು ಐತಿಹಾಸಿಕ ದಿನ. ದೇವರು ನಮಗೆ ಎರಡು ಆಯ್ಕೆ ಮಾತ್ರ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ಅದೇ ರೀತಿ ದೇವರಾಜ ಅರಸು ಅವರು 50 ವರ್ಷಗಳ ಹಿಂದೆ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂಬ ಹೆಸರನ್ನು ಕೊಟ್ಟಿದ್ದಾರೆ. ಅವರನ್ನು ಸ್ಮರಿಸಿ ಇಂದು ಈ ಕಾರ್ಯಕ್ರಮ ಆಚರಣೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕರ್ನಾಟಕ 50 ಸಂಭ್ರಮದ ಲಾಂಛನ ಬಿಡುಗಡೆ ಮಾಡಿದ ಡಿಸಿಎಂ, ಅಮ್ಮ ಕೊಟ್ಟಿರುವುದು ಜನ್ಮ. ದೇವರು ಕೊಟ್ಟಿರುವುದು ಬುದ್ಧಿ, ಗುರುಗಳು ಕೊಟ್ಟಿರುವುದು ವಿದ್ಯೆ, ಯಾರು ಕೊಡದೇ ನಮಗೆ ಸಿಕ್ಕಿರುವುದು ಕನ್ನಡ ನಾಡು. ಈ ನಾಡಿನಲ್ಲಿ ನಾವು ಉಸಿರಾಡುತ್ತಿದ್ದೇವೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ’ ಎಂದು ಹೇಳಿದ್ದಾರೆ. ಇಂದು ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದವರು ಕನ್ನಡದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರಕ್ಕೆ, ಸಚಿವ ಶಿವರಾಜ ತಂಗಡಗಿ ಅವರ ನೇತತ್ವದಲ್ಲಿ ಈ ಸಂಭ್ರಮಾಚರಣೆ ಮಾಡುವ ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ ಎಂದರು.
ಕರ್ನಾಟಕ ಎಂಬುದು ಬರೀ ಹೆಸರೇ ಮಣ್ಣಿಗೆ
ಮಂತ್ರ ಕಣಾ, ಶಕ್ತಿ ಕಣಾ
ತಾಯಿ ಕಣಾ, ದೇವಿ ಕಣಾ
ಬೆಂಕಿ ಕಣಾ, ಸಿಡಿಲು ಕಣಾ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು!
ಕನ್ನಡಕ್ಕಾಗಿ ಕೈ ಎತ್ತು
ನಿನ್ನ ಕೈ ಕಲ್ಪವೃಕ್ಷವಾಗುವುದು
ಕನ್ನಡಕ್ಕಾಗಿ ಕೊರಳೆತ್ತು
ಪಾಂಚಜನ್ಯ ಮೊಳಗುತ್ತದೆ
ಕನ್ನಡಕ್ಕಾಗಿ ಕಿರುಬೆರಳೆತ್ತಿದರೆ
ಅದೇ ಗೋವರ್ದನ ಗಿರಿಯಾಗುತ್ತದೆ.
ಎಂದು ವಿಶ್ವಮಾನವ ಕುವೆಂಪು ಅವರು ನಮಗೆ ಸಂದೇಶ ನೀಡಿದ್ದಾರೆ.
ಇಡೀ ವರ್ಷ ಈ ಸಂಭ್ರಮಾಚರಣೆ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ಇದು ಸರ್ಕಾರದ ಕಾರ್ಯಕ್ರಮದ ಜತೆಗೆ ಜನರ ಕಾರ್ಯಕ್ರಮವಾಗಬೇಕು. ಬೆಳಗಾವಿಯಿಂದ ಚಾಮರಾಜನಗರದವರೆಗೂ ಪ್ರತಿ ಹಳ್ಳಿಯಲ್ಲೂ ಯುವ ಪೀಳಿಗೆ ಈ ಸಂಭ್ರಮ ಆಚರಿಸಬೇಕು. ನವೆಂಬರ್ 1ರಿಂದ ಈ ಸಂಭ್ರಮಾಚರಣೆ ಮಾಡಲು ತೀರ್ಮಾನಿಸಲಾಗಿದ್ದು, ನಾವೆಲ್ಲರೂ ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ದೀಪ ಬೆಳಗಿದ್ದೇವೆ.
ಈ ಲಾಂಛನ ಮಾಡಿದ ಹುಡುಗನಿಗೆ ಸಚಿವರು 25 ಸಾವಿರ ಬಹುಮಾನ ಮೊತ್ತ ಘೋಷಿಸಿದ್ದಾರೆ. ಆದರೆ 25 ಸಾವಿರದ ಕಾಲ ಹೋಯಿತು. ಹೀಗಾಗಿ ಪಾಲಿಕೆ ವತಿಯಿಂದ ನಾನು 1 ಲಕ್ಷವನ್ನು ಬಹುಮಾನವಾಗಿ ನೀಡುತ್ತೇನೆ. ಯುವಕರಿಗೆ ನಾವು ಪ್ರೋತ್ಸಾಹ ನೀಡಬೇಕು.
ಈ ವರ್ಷ ರಾಜ್ಯಕ್ಕೆ ಉತ್ತಮ ಮಳೆ ಬೆಳೆ ಆಗಿ ಎಲ್ಲರೂ ನೆಮ್ಮದಿಯಾಗಿ ಬದುಕುವಂತಾಗಲಿ ಎಂದು ನಾನು ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ