ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನರೆ ಸಂತ್ರಸ್ತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ಅಗತ್ಯ ಪರಿಹಾರಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರಿಸಿದ ಸಿಎಂ ಯಡಿಯೂರಪ್ಪ, ಸರ್ಕಾರದ ಕೆಲಸ ಕಾರ್ಯಗಳನ್ನು ವಿವರಿಸಿದರು. ನೆರೆಯಿಂದ ರಾಜ್ಯಕ್ಕೆ ಅಪಾರ ಹಾನಿಯುಂಟಾದರೂ ಜನರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಒದಗಿಸುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದರು.
ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವ ಎರಡು ಲಕ್ಷಕ್ಕೂ ಹೆಚ್ಚು ಜನರಿಗೆ ಒಂದು ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಮಳೆಯಿಂದ ಹಾನಿಯಾದ ಅಂಗಡಿ ಮುಂಗಟ್ಟುಗಳಿಗೆ 25 ಸಾವಿರ ಹಾಗೂ ಮಗ್ಗ ಕಳೆದುಕೊಂಡವರಿಗೆ 50 ಸಾವಿರ ಪರಿಹಾರ ವಿತರಿಸಲಾಗಿದೆ. ರೈತರಿಗೆ ಬೆಳೆ ಪರಿಹಾರ ನೀಡಲಾಗಿದ್ದು, ಕೇಂದ್ರದ ಸಹಕಾರದಿಂದ ಒಣ ಬೇಸಾಯದಲ್ಲಿ ಪ್ರತಿ ಹೆಕ್ಟರ್‌ಗೆ 16,000, ನಿರಾವರಿ ಬೆಳೆಗಳಿಗೆ 23,000 ಹಾಗೂ ತೋಟಗಾರಿಕೆ ಬೆಳೆಗಳಿಗೆ 28,000 ಪರಿಹಾರ ಘೋಷಣೆ ಮಾಡಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಎಂಬ ನಾಮಕರಣ ಜನರಲ್ಲಿ ಹೊಸ ಉಲ್ಲಾಸ ಮೂಡಿಸಿದೆ. ದಾಸ್ಯದ ಸಂಕೋಲೆಯಿಂದ ಹೊರ ಬಂದ ಮನಸ್ಥಿತಿ ಜನರಲ್ಲಿ ಮೂಡಿಸಿದ್ದು ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಬೀದರ್, ಕಲಬುರಗಿ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ದಿಗೆ ವರದಾನವಾಗಿದೆ.
ರಾಜ್ಯದಲ್ಲಿ 23 ಸಾವಿರಕ್ಕೂ ಹೆಚ್ಚು ಮೀನುಗಾರರ 50 ಸಾವಿರ ರೂ ವರೆಗಿನ ಸಾಲ ಮನ್ನಾ ಮಾಡಲಾಗಿದೆ. ಹಾನಿಗೊಳಗಾದ 330 ದೋಣಿಗಳಿಗೆ ತಲಾ 20,000 ಗಳಂತೆ ಹಾಗೂ 662 ಬಲೆಗಳಿಗೆ ತಲಾ ರೂ. 10,000 ರಂತೆ ಒಟ್ಟು 1.52 ಕೋಟಿ ರೂ ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಇನ್ನು ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಗದ್ದಲ ನಡೆದಿದ್ದರೂ ಗದ್ದಲದ ನಡುವೆಯೆ ಎಂಟು ವಿದೇಯಕಗಳನ್ನು ಮಂಡಿಸಲಾಗಿದೆ. ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ, 2020 ನೇ ಸಾಲಿನ ಕರ್ನಾಟಕ ಪೌರ ಸೇವೆಗಳ ತಿದ್ದುಪಡಿ ಕಾಯ್ದೆ, ಕರ್ನಾಟಕ ಬಹಿರಂಗ ಸ್ಥಳಗಳ ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ ತಿದ್ದುಪಡಿ ವಿಧೇಯಕ, ಕರ್ನಾಟಕ ರೇಸ್ ಕೋರ್ಸ್ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕ, ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ, ವಿಶ್ವ ವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ರೇಸ್ ಕೋರ್ಸ್ ಪರವಾನಿಗೆ ನೀಡುವ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿ ಆನುಮೋದನೆ ನೀಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ