ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸಬೇಕೆಂದು ಒತ್ತಾಯಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 27 ರ ವರೆಗೆ ಅಧಿವೇಶನ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಅಧಿವೇಶನದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳ್ಳುವುದರಿಂದ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಅಧಿವೇಶನ ಮೊಟಕುಗೊಳಿಸಬೇಕು ಎಂದು ಹಲವರು ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಸಿಎಂ ಯಡಿಯೂರಪ್ಪ, ಮಾರ್ಚ್ 27 ರ ತನಕ ಅಧಿವೇಶನ ನಡೆಯಲಿದೆ. ಬಜೆಟ್ ಅನುಮೋದನೆ ಪಡೆದುಕೊಂಡು ಅಧಿವೇಶನವನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಸಕ್ರಿಯವಾಗಿರಬೇಕು ಎಂದು ಪ್ರಧಾನಿ ಮೋದಿ ಬಯಸಿದ್ದಾರೆ. ಆ ಕಾರಣಕ್ಕಾಗಿಯೇ ಸಂಸತ್ ಅಧಿವೇಶನವನ್ನು ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಅಧಿವೇಶನವನ್ನು ನಡೆಸಲಾಗುತ್ತಿದೆ. ಬಜೆಟ್‌ಗೆ ಅನುಮೋದನೆ ಪಡೆದ ಬಳಿಕ ಮಾರ್ಚ್ 27 ರಂದು ಅಧಿವೇಶವನ್ನು ಮೊಟಕುಗೊಳಿಸಲಾಗುತ್ತದೆ ಎಂದರು. ಮಾರ್ಚ್ 2 ರಂದು ಆರಂಭವಾದ ಅಧಿವೇಶನ ಮಾರ್ಚ್ 31 ರಂದು ಕೊನೆಗೊಳ್ಳಬೇಕಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ