*ವಿಶೇಷ ಅಧಿವೇಶನ ಆರಂಭ: ಉಭಯ ಸದನಗಳಲ್ಲಿಯೂ ವಂದೇ ಮಾತರಂ 2 ಚರಣ ಮುಗಿದರೂ ಪೂರ್ತಿ ಹಾಡು ಹಾಡಿದ ಬಿಜೆಪಿ-ಜೆಡಿಎಸ್ ಸದಸ್ಯರು*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ವಿಧಾನ ಮಂಡಲ ವಿಶೇಷ ಅಧಿವೇಶನ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ವಿಧಾನ ಪರಿಷತ್ ಹಾಗೂ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಂದೇ ಮಾತರಂ ಗೀತೆ ಪೂರ್ಣ ಹಾಡಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಭಾಪತಿ ಸಲಿಂ ಅಹ್ಮದ್ ವಿಪಕ್ಷ ಸದಸ್ಯರಿಗೆ ಸರ್ಕಾರದ ಆದೇಶವನ್ನು ಪಾಲಿಸುವಂತೆ ಸೂಚಿಸಿದರು. ವಿಪಕ್ಷ ಸದಸ್ಯರ ಗದ್ದಲದ ನಡುವೆಯೇ ಪರಿಷತ್ ಕಲಾಪ ಆರಂಭವಾಯಿತು. ಈ ವೇಳೆ ವಿಧಾನಪರಿಷತ್ನಲ್ಲಿ 2 ಚರಣಗಳ ವಂದೇ ಮಾತರಂ ಗಾಯನ ಹಾಡಲಾಯಿತು. ಎರಡು ಚರಣ ಹಾಡು ಮುಗಿದರೂ ಬಿಜೆಪಿ ಸದಸ್ಯರು ಸಂಪೂರ್ಣ ಗೀತೆ ಹಾಡುವುದನ್ನು ಮುಂದುವರಿಸಿದರು.
ಬಿಜೆಪಿ ಸದಸ್ಯರು ಹಾಡುತ್ತಿದ್ದರೂ ಸಭಾಪತಿಯವರು ತಕ್ಷಣವೇ ಸಂವಿಧಾನ ಪೀಠಿಕೆ ಬೋಧನೆ ಆರಂಭಿಸಿದ್ದು, ಕಾಂಗ್ರೆಸ್ ಸದಸ್ಯರು ಪೀಠಿಕೆ ಓದಿದರು. ಇದರಿಂದಾಗಿ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ವಂದೇ ಮಾತರಂ ಪೂರ್ಣವಾಗಿ ಹಾಡದ ಸರ್ಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಸಂವಿಧಾನ ಪೀಠಿಕೆ ಓದದ ಬಿಜೆಪಿ ನಾಯಕರಿಗೆ ಧಿಕ್ಕಾರ ಎಂದು ಸಭಾನಾಯಕ ಯತೀಂದ್ರ ಪ್ರತಿಘೋಷಣೆ ಕೂಗಿದರು.
ಗದ್ದಲದ ನಡುವೆಯೇ ಡಿಸಿಎಂ ಪರಮೇಶ್ವರ್ ಕಸ್ತೂರಿ ರಂಗನ್ ವರದಿ ವಿಚಾರ ಚರ್ಚೆಗೆ ಪ್ರಸ್ತಾವನೆ ಮಂಡಿಸಿದರು.
ಅತ್ತ ವಿಧಾನಸಭೆಯಲ್ಲಿಯೂ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಂದೇ ಮಾತರಂ ಗೀತೆ ಪೂರ್ಣ ಹಾಡುವಂತೆ ಒತ್ತಾಯಿಸಿದರು. ಅಲ್ಲಿಯೂ ಎರಡು ಚರಣಗಳ ಹಾಡು ಮುಗಿದರೂ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಹಾಡು ಮುಂದುವರೆಸಿದರು.
ವಿಪಕ್ಷ ಸದಸ್ಯರು ಗೀತೆ ಹಾಡುತ್ತಿದ್ದ ವೇಳೆಯಲ್ಲೇ ಸ್ಪೀಕರ್ ಅವರು ಸಂತಾಪ ಸೂಚನಾ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡರು. ಸ್ಪೀಕರ್ ಕ್ರಮದ ನಡುವೆಯೂ ವಿಪಕ್ಷ ಸದಸ್ಯರು ಪೂರ್ಣ ಗೀತೆಯನ್ನು ಹಾಡಿ ಮುಗಿಸಿದರು.


