ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಇಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಬಹುತೇಕ ಸ್ತಬ್ಧವಾಗಿದ್ದು, ವಿಮಾನ ಹಾರಾಟಕ್ಕೂ ಬಂದ್ ಬಿಸಿ ತಟ್ಟಿದೆ.
ಕಾವೇರಿ ನೀರಿಗಾಗಿ ವಿವಿಧ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ. ಏರ್ ಪೋರ್ಟ್ ನತ್ತ ಮುನ್ನುಗ್ಗಿದ ಕಾರ್ಯಕರ್ತರನ್ನು ಪೊಲಿಸರು ತಡೆದಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಆಗಮಿಸುವ ಹಾಗೂ ಬೆಂಗಳೂರಿನಿಂದ ನಿರ್ಗಮಿಸುವ 44 ವಿಮಾನಗಳನ್ನು ರದ್ದು ಮಾಡಲಾಗಿದೆ. ಬಂದ್ ನಿಂದಾಗಿ ವಿಮಾನ ನಿಲ್ದಾಣಗಳಲ್ಲಿಯೂ ಪ್ರಯಾಣಿಕರಿಲ್ಲದ ಹಿನ್ನೆಲೆಯಲ್ಲಿ 44 ವಿಮಾನ ಸ್ಥಗಿತಗೊಂಡಿದೆ.
ಹೊರ ರಾಜ್ಯಗಳ ವಿಮಾನಗಳು ಮಾತ್ರ ರದ್ದಾಗಿದ್ದು, ಕರ್ನಾಟಕದೊಳಗಿನ ವಿಮಾನ ಹಾರಾಟ ಎಂದಿನಂತಿವೆ ಎಂದು ತಿಳಿದುಬಂದಿದೆ.
ಇನ್ನು ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು, ಬಸ್ ಗಳು ನಿಂತಲ್ಲೇ ನಿಂತಿವೆ. ಆಟೋ ಸ್ಟ್ಯಾಂಡ್ ಗಳಲ್ಲಿಯೂ ಆಟೋಗಳು ನಿಂತಿದ್ದು, ಬೆರಳೆಣಿಕೆಯಷ್ಟು ಜನರ ಓಡಾಟವೂ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ರೈಲು ನಿಲ್ದಾಣಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಅಂಗಡಿ ಮುಂಗಟ್ಟು, ಹೋಟೆಲ್, ಮಾಲ್ ಗಳು, ಚಿತ್ರಮಂದಿರಗಳು, ಶಾಲಾ-ಕಾಲೇಜುಗಳು ಬಂದ್ ಆಗಿದ್ದು, ಇಡೀ ಬೆಂಗಳೂರಿನಲ್ಲಿ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ