ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈತ ವಿರೋಧಿ ಕೃಷಿ ಮಸೂದೆಗಳನ್ನು ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ರಾಜ್ಯಾದ್ಯಂತ ಭುಗಿಲೆದ್ದಿದೆ. ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಟೌನ್ ಹಾಲ್, ಮೆಜೆಸ್ಟಿಕ್, ಫ್ರೀಡಂ ಪಾರ್ಕ್, ಸುಮನಹಳ್ಳಿ, ಐಜೂರು ಪಾರ್ಕ್ ಬಳಿ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಹಲವೆಡೆ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು, ರಸ್ತೆಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಅತ್ತಿಬೆಲೆಯಲ್ಲಿ ಜಯಕರ್ನಾಟಕ ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡೆಸಿದರೆ ಇನ್ನೊಂದೆಡೆ ಟೌನ್ ಹಾಲ್ ಬಳಿ ರೈತರು ತಮ್ಮಟೆ ಬಾರಿಸಿ, ನೆಗಿಲು ಹೊತ್ತು ಅರೆಬೆತ್ತಲೆ ಮೆರವಣಿಗೆ ನಡೆಸಿದ್ದಾರೆ.
ಕೆ ಆರ್ ಪುರಂ ನಲ್ಲಿ ಕರ್ನಾಟಕ ರೈತ ಸಂಘ ಹಾಗೂ ವ್ಯಾಪಾರಿ ಒಕ್ಕೂಟಗಳು ರಸ್ತೆ ಮಧ್ಯೆಯೇ ಕುಳಿತು ಧರಣಿ ನಡೆಸಿದ್ದಾರೆ. ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಲು ಮುಂದಾದಾಗ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಹಲವೆಡೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಮೈಸೂರು ಬ್ಯಾಂಕ್ ವೃತ್ತ ಹಾಗೂ ಟೌನ್ ಹಾಲ್ ನತ್ತ ಸಾಗಿದ್ದಾರೆ. ಟೌನ್ ಹಾಲ್ ಮುಂಭಾಗ ಈಗಾಗಲೇ ನಡೆಯುತ್ತಿರುವ ಪ್ರತಿಭಟನೆ ಇನ್ನಷ್ಟು ಹೆಚ್ಚಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ