
ಪ್ರಗತಿವಾಹಿನಿ ಸುದ್ದಿ: ಎಂಇಎಸ್, ಶಿವಸೇನೆ ನಿಷೇಧಕ್ಕೆ ಆಗ್ರಹಿಸಿ, ಎಂಇಎಸ್ ಪುಂಡರಿಂದ ಕನ್ನಡಿಗರ ಮೇಲಿನ ಹಲ್ಲೆ ಖಂಡಿಸಿ ಕನ್ನಡ ನಾಡುನುಡಿಗಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಆರಂಭವಾಗಿದೆ. ಬೆಳಿಗ್ಗೆ 6 ಗಂಟೆಯಿಂದಲೇ ವಿವಿಧ ಜಿಲ್ಲೆಗಳಲ್ಲಿ ಕನ್ನಡ ಪರ ಹೋರಾತಗಾರರು ಪ್ರತಿಭಟನೆ ಆರಂಭಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧೆಡೆ ಪ್ರತಿಭಟನೆ ಆರಂಭವಾಗಿದೆ. ಆದರೆ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಇದೆ. ಆಟೋ ಸಂಚಾರ ಸ್ಥಗಿತಗೊಂಡಿದೆ. ವೀಕೆಂಡ್ ಆದರೂ ಜನರ ಓಡಾಟ ವಿರಳವಾಗಿದೆ. ಹಲವೆಡೆ ಅಂಗಡಿ ಮುಂಗಟ್ಟು, ಮಾಲ್ ಗಳು ಬಂದ್ ಆಗಿವೆ. ಥಿಯೇಟರ್ ಗಳು ಬಂದ್ ಆಗಿವೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಮುತ್ತಿಗೆ ಹಾಕಿವುದುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು ಜಮಾವಣೆಗೊಂಡು ಪ್ರತಿಭಟನೆ ಆರಂಭಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಲ್ಳುವ ಸಾದ್ಯತೆ ಇದೆ.
ಆನೇಕಲ್ ನಲ್ಲಿ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಅಂಗಡಿ, ಮುಂಗಟ್ಟು, ಹೋಟೆಲ್ ಗಳು ಬಂದ್ ಆಗಿವೆ. ಪ್ರತಿಭಟನಾಕಾರರು ವಾಹನಗಳನ್ನು ತಡೆದು ರಸ್ತೆ ತಡೆ ನಡೆಸಿದ್ದಾರೆ.
ಮಂಡ್ಯದಲ್ಲಿ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ವಿವಿಧ ಸಂಗಘಟನೆಗಳು ಸಂಜಯ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ರೈರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಮೈಸೂರು, ಚಿಕ್ಕಮಗಳೂರು, ಕಾರವಾರ, ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ, ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ.