
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದ್ದು, ದಿಢೀರ್ ಸುರಿದ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ.
ಇಂದು ಬೆಳಿಗ್ಗೆಯಿಂದ ಕೊಂಚ ಮೊಡ ಕವಿದ ವಾತಾವರಣ ಬಳಿಕ ಬಿಸಿಲಿನ ವಾತಾವರಣವಿತ್ತು. ರಾತ್ರಿಯಾಗುತ್ತಿದಂತೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಕಚೇರಿಗಳಿಂದ ಮನೆಗೆ ತೆರಳುವ ಸಂದರ್ಭದಲ್ಲೇ ಮಳೆ ಅಬ್ಬರಿಸಿದ್ದು, ಗುಂಡಿ ಬಿದ್ದ ರಸ್ತೆಗಳಲ್ಲಿ ನೀರು ತುಂಬಿ ಅವಾಂತರ ಸೃಷ್ಟಿಯಾಗಿವೆ.
ಬೆಂಗಳೂರಿನ ಮೆಜೆಸ್ಟಿಕ್, ವಿಧಾನಸೌಧ, ಕೆ.ಆರ್.ಮಾರುಕಟ್ಟೆ, ಆರ್.ಆರ್. ನಗರ, ಗಿರಿನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಹೊಸಕೆರೆ ಹಳ್ಳಿ, ಉತ್ತರಳ್ಳಿ, ಜಯನಗರ, ಬನಶಂಕರಿ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೆಂಗೇರಿ, ವಿಜಯನಗರ, ರಾಜಾನಿನಗರ, ಪದ್ಮನಾಭನಗರ ಸೇರಿದಂತೆ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ರಸ್ತೆಗಳು ನದಿಯಂತಾಗಿದ್ದು, ಸಂಚಾರದಟ್ಟಣೆಯುಂಟಾಗಿದೆ.