ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೊನಾ ರೂಪಾಂತರಿಯ ಭೀತಿ ಎದುರಾಗಿದೆ. ಕ್ರಿಸ್ ಮಸ್, ಹೊಸವರ್ಷದ ಸಂಭ್ರಮಕ್ಕೆ ಮತ್ತೆ ತಣ್ಣೀರೆರಚುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾಸ್ಕ್ ಧರಿಸುವಂತೆ ಬಿಬಿಎಂಪಿ ಮಾರ್ಷಲ್ ಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ನಡುವೆ ಆರೋಗ್ಯ ಸಚಿವ ಸುಧಾಕರ್ ಮಾಸ್ಕ್ ಕಡ್ಡಾಯಗೊಳಿಸುವ ಸುಳಿವು ನೀಡಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ ಮಾಡುವುದು ಬಹುತೇಕ ಖಚಿತವಾಗಿದೆ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿದ್ದು, ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ನೀಡಿದೆ. 3ನೇ ಡೋಸ್ ಪಡೆದುಕೊಳ್ಳುವಂತೆ ಸೂಚಿಸಿದೆ.
ಈ ಬೆಳವಣಿಗೆ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮಾರ್ಕೆಟ್ ಗಳಲ್ಲಿ ಜನ ಜಾಗೃತಿ ಮೂಡಿಸಲಾಗುತ್ತಿದೆ. ಕೆ.ಆರ್.ಮಾರ್ಕೆಟ್ ನಲ್ಲಿ ಬಿಬಿಎಂಪಿ ಮಾರ್ಷಲ್ ಗಳು ಮೈಕ್ ಹಿಡಿದು, ಸಾರ್ವಜನಿಕರು ಹಾಗೂ ವ್ಯಾಪಾರಿಗಳಲ್ಲಿ ಮಾಸ್ಕ್ ಧರಿಸುವಂತೆ ಅನೌನ್ಸ್ ಮಾಡುತ್ತಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ವಿಚಾರವಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಬೆಳಗಾವಿಯಲ್ಲಿ ಮಾತನಾಡಿದ್ದು, ಸಲಹೆ ಪಾಲಿಸದಿದ್ದರೆ ಕಡ್ಡಾಯ ಮಾಡಲಾಗುವುದು ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಧ್ಯಕ್ಕೆ ಮಾಸ್ಕ್ ಕಡ್ಡಾಯ ಮಾಡಲಾಗಿಲ್ಲ. ಮಾಸ್ಕ್ ಧರಿಸಿ ಎಂದು ಸಲಹೆ ನೀಡಲಾಗಿದೆ. ನಿನ್ನೆ ನಡೆದ ಸಭೆಯಲ್ಲಿಯೂ ಮಾಸ್ಕ್ ಧರಿಸುವ ಬಗ್ಗೆ ಸಲಹೆ ನೀಡಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯದ ಬಗ್ಗೆ ನಿರ್ಧಾರ ಕೈಗೊಳ್ಳುಲಾಗುವುದು. ನಿನ್ನೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಮಾಸ್ಕ್ ಧರಿಸಿದ್ದರು. ಜನರು ಜಾಗೃತರಾಗಬೇಕು ಎಂದರು.
ಮುಂಜಾಗೃತಾ ಕ್ರಮವಾಗಿ ಎಲ್ಲರೂ ಮಾಸ್ಕ್ ಧಿರಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಸಲಹೆ ಕೊಡಲಾಗಿದೆ. ಸಲಹೆ ಪಾಲಿಸದಿದ್ದರೆ ಮಾಸ್ಕ್ ಕಡ್ಡಾಯ ಮಾಡಲಾಗುವುದು ಎಂದು ಹೇಳಿದರು.
*ಭೀಕರ ಅಪಘಾತ; ಇಬ್ಬರು ಖೋ ಖೋ ಕ್ರೀಡಾಪಟುಗಳು ದುರ್ಮರಣ*
https://pragati.taskdun.com/yadagiritamtam-vehicletractoraccidenttwo-death/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ