Kannada NewsKarnataka NewsLatest

*ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಅವಕಾಶ*: *5,431 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಉದ್ಯೋಗ ಪಡೆಯುವ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಒದಗಿಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA) ಸೇರಿದಂತೆ ವಿವಿಧ ಗ್ರೂಪ್‌-C ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ ಒಟ್ಟು 5,431 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಕ್ಟೋಬರ್ 30ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಪಿಯುಸಿ ಮತ್ತು ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ?
ಆಡಳಿತಾತ್ಮಕ, ಲೆಕ್ಕಪತ್ರ ಮತ್ತು ಇತರ ವಿಭಾಗಗಳ ಹುದ್ದೆಗಳನ್ನು ಭರ್ತಿ ಮಾಡಲಿದೆ. ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA), ಅಕೌಂಟ್ಸ್ ಅಸಿಸ್ಟೆಂಟ್, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಸಹಾಯಕರು, ವಾರ್ಡನ್, ಹಾಸ್ಟೆಲ್ ಸೂಪರಿಂಟೆಂಡೆಂಟ್, ಜೂನಿಯರ್ ಅಸಿಸ್ಟೆಂಟ್, ವಾಣಿಜ್ಯ ತೆರಿಗೆ ನಿರೀಕ್ಷಕರು, ಸಬ್ ರಿಜಿಸ್ಟ್ರಾರ್ ಹಾಗೂ ಸಹಕಾರ ಸಂಘಗಳ ಲೆಕ್ಕ ಪರಿಶೋಧಕರಂತಹ ಹುದ್ದೆಗಳು ನೇಮಕಾತಿಯಲ್ಲಿ ಸೇರಿವೆ.

ಈ ಹುದ್ದೆಗಳನ್ನು ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK) ವೃಂದಗಳ ಅಡಿಯಲ್ಲಿ ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ಹುದ್ದೆ ಮತ್ತು ವೃಂದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು.

KEA ಒಟ್ಟು ನಾಲ್ಕು ಪ್ರತ್ಯೇಕ ಅಧಿಸೂಚನೆಗಳ ಮೂಲಕ 5,431 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. RPC ವೃಂದದ ಪದವಿ ಮಟ್ಟದ ಹುದ್ದೆಗಳಿಗೆ 2,163 ಮತ್ತು ಪಿಯುಸಿ ಮಟ್ಟದ ಹುದ್ದೆಗಳಿಗೆ 2,070 ಸ್ಥಾನಗಳನ್ನು ಮೀಸಲಿಡಲಾಗಿದೆ. ಇನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ 563 FDA ಹುದ್ದೆಗಳು ಮತ್ತು 635 SDA ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹೀಗೆ ನಾಲ್ಕು ವಿಭಾಗಗಳನ್ನು ಸೇರಿಸಿದರೆ ಒಟ್ಟು 5,431 ಹುದ್ದೆಗಳಾಗುತ್ತವೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ದ್ವಿತೀಯ ದರ್ಜೆ ಸಹಾಯಕ (SDA) ಮತ್ತು ಇತರ ಪಿಯುಸಿ ಮಟ್ಟದ ಹುದ್ದೆಗಳಿಗೆ ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಇನ್ನು ಪ್ರಥಮ ದರ್ಜೆ ಸಹಾಯಕ (FDA) ಮತ್ತು ಪದವಿ ಮಟ್ಟದ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಕೆಲವು ತಾಂತ್ರಿಕ ಮತ್ತು ವಿಶೇಷ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೊಮಾ ಅಥವಾ ಇತರ ನಿರ್ದಿಷ್ಟ ವಿದ್ಯಾರ್ಹತೆ ಅಗತ್ಯವಿರುತ್ತದೆ. ಹೀಗಾಗಿ ಅರ್ಜಿ ಸಲ್ಲಿಸುವ ಮೊದಲು ಹುದ್ದೆವಾರು ಅರ್ಹತೆಯನ್ನು ಪರಿಶೀಲಿಸುವುದು ಮುಖ್ಯ.

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ, 2A, 2B, 3A ಮತ್ತು 3B ವರ್ಗದ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಇತರ ವಿಶೇಷ ವರ್ಗಗಳಿಗೆ ಅನ್ವಯಿಸುವ ವಯೋಮಿತಿ ಸಡಿಲಿಕೆಗಳ ಕುರಿತು ಅಧಿಕೃತ ಅಧಿಸೂಚನೆಯಲ್ಲಿ ಮಾಹಿತಿ ಪಡೆಯಬಹುದು.

ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗ ಹಾಗೂ 2A, 2B, 3A ಮತ್ತು 3B ಅಭ್ಯರ್ಥಿಗಳು ಒಟ್ಟು 750 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕರು ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು 500 ರೂ. ಪಾವತಿಸಬೇಕಾಗುತ್ತದೆ. ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇದ್ದು, 250 ರೂ. ಪ್ರಕ್ರಿಯೆ ಶುಲ್ಕ ಪಾವತಿಸಬೇಕಾಗುತ್ತದೆ.

ಈ ನೇಮಕಾತಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ಅನ್ವಯಿಸುವವರಿಗೆ ಕನ್ನಡ ಭಾಷಾ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿದ್ದು, ಮೊದಲ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇರಲಿವೆ. ಎರಡನೇ ಪತ್ರಿಕೆಯಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಪ್ರತಿ ಪತ್ರಿಕೆಗೆ 100 ಅಂಕಗಳಿದ್ದು, ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪ್ರತಿ ಪತ್ರಿಕೆಗೆ ಎರಡು ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ತಪ್ಪು ಉತ್ತರಗಳಿಗೆ 0.25 ಅಂಕಗಳ ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಕನ್ನಡ ಭಾಷಾ ಪರೀಕ್ಷೆಯು 150 ಅಂಕಗಳಿಗೆ ನಡೆಯಲಿದ್ದು, ಇದು ಅರ್ಹತಾ ಪರೀಕ್ಷೆಯಾಗಿದೆ. ಅನ್ವಯಿಸುವ ವಿನಾಯಿತಿ ನಿಯಮಗಳನ್ನು ಅಭ್ಯರ್ಥಿಗಳು ಗಮನಿಸಬೇಕು.

KEA ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಕನ್ನಡ ಭಾಷಾ ಪರೀಕ್ಷೆ 2027ರ ಜನವರಿ 8ರಂದು ನಡೆಯಲಿದೆ. ಪದವಿ ಮಟ್ಟದ ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆ ಜನವರಿ 9ರಂದು ಮತ್ತು RPC ವೃಂದದ ಪರೀಕ್ಷೆ ಜನವರಿ 10ರಂದು ನಡೆಯಲಿದೆ. ಇನ್ನು ಪಿಯುಸಿ ಮಟ್ಟದ ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆ ಜನವರಿ 16ರಂದು ಹಾಗೂ RPC ವೃಂದದ ಪರೀಕ್ಷೆ ಜನವರಿ 17ರಂದು ನಡೆಯಲಿದೆ.

ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ನೇಮಕಾತಿ ವಿಭಾಗದಲ್ಲಿ KEA FDA, SDA Recruitment 2026 ಅಧಿಸೂಚನೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಅರ್ಜಿ ಸಲ್ಲಿಕೆ, ಅಧಿಸೂಚನೆ ಮತ್ತು ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/ ಗೆ ಭೇಟಿ ನೀಡಬಹುದು.

Related Articles

Back to top button