ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ಡಿ.8ರಂದು ವಿಚಾರಣೆಗೆ ಬರಲಿದೆ.
2004ರಲ್ಲಿ ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವೋ, ಅಲ್ಲವೋ? ಇದು ಸುಪ್ರಿಂ ಕೋರ್ಟ್ ವ್ಯಾಪ್ತಿಗೆ ಬರುತ್ತದೆಯೋ, ಇಲ್ಲವೋ? ಎನ್ನುವ ಕುರಿತು ವಿಚಾರಣೆ ಅಂದು ಆರಂಭವಾಗಲಿದೆ.
ಕರ್ನಾಟಕದ 814 ಪ್ರದೇಶಗಳನ್ನು ಮಹಾರಾಷ್ಟ್ರದೊಳಗೆ ವಿಲೀನಗೊಳಿಸಬೇಕೆಂದು ಕೋರಿ ಮಹಾರಾಷ್ಟ್ರ ಅರ್ಜಿ ಸಲ್ಲಿಸಿ ಈಗಾಗಲೆ 18 ವರ್ಷಗಳಾದವು. ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ, ಇದು ಸುಪ್ರಿಂ ಕೋರ್ಟ್ ವ್ಯಾಪ್ತಿಯೂ ಬರುವುದಿಲ್ಲ. ರಾಜ್ಯಗಳ ನಡುವಿನ ಗಡಿ ವಿವಾದ ಏನಿದ್ದರೂ ಲೋಕಸಭೆ ನಿರ್ಧರಿಸುವಂತದ್ದು. ಹಾಗಾಗಿ ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕರ್ನಾಟಕ ಈಗಾಗಲೆ ಸುಪ್ರಿಂ ಕೋರ್ಟ್ ಗೆ ತನ್ನ ಅರ್ಜಿಯನ್ನು ಸಲ್ಲಿಸಿದೆ.
ಹಾಗಾಗಿ ಇದೀಗ ಮಹಾರಾಷ್ಟ್ರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಬೇಕೋ ಬೇಡವೋ ಎನ್ನುವ ಕುರಿತು ವಿಚಾರಣೆ ಆರಂಭವಾಗಲಿದೆ. ಕರ್ನಾಟಕದ ನ್ಯಾಯವಾದಿಗಳ ಪ್ರವಾಕ ಮೊದಲ ದಿನವೇ ಸುಪ್ರಿಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದರೂ ಆಶ್ಚರ್ಯವಿಲ್ಲ. ಅಥವಾ ಈ ಕುರಿತು ವಾದ- ಪ್ರತಿವಾದಕ್ಕೆ ಅವಕಾಶ ನೀಡಲೂ ಬಹುದು. ಹಾಗೊಮ್ಮೆ ವಾದ- ಪ್ರತಿವಾದ ನಡೆದರೆ ಮತ್ತೆ ಕೆಲವು ವರ್ಷ ಅರ್ಜಿಯ ಸಿಂದುತ್ವದ ಕುರಿತ ವಿಚಾರಣೆಯೇ ಮುಂದುವರಿಯುತ್ತದೆ.
ಆಗಲೂ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ಸುಪ್ರಿಂ ನಿರ್ಧರಿಸಿ, ಕೈಗೆತ್ತಿಕೊಂಡರೆ ಅದರ ವಾದ ವಿವಾದ ಮತ್ತೆ ಹತ್ತಾರು ವರ್ಷ ಮುಂದುವರಿಯಬಹುದು. ಹಾಗಾಗಿ ಕರ್ನಾಟಕದ 814 ಪ್ರದೇಶಗಳನ್ನು ಪಡೆಯುವ ಮಹಾರಾಷ್ಟ್ರದ ಕನಸು ಎಂದಿಗೂ ಈಡೇರುವ ಸಾಧ್ಯತೆ ಇಲ್ಲ.
ಮಹಾರಾಷ್ಟ್ರ ಏಕಾಕರಣ ಸಮಿತಿ ಕೇವಲ ರಾಜಕೀಯಕ್ಕಾಗಿ ತನ್ನ ಪುಂಡಾಟಿಕೆಯನ್ನು ಇನ್ನಷ್ಟು ವರ್ಷಗಳ ಕಾಲ ಮುಂದುವರಿಸಬಹುದು. ಈಗಾಗಲೆ ಸಮಿತಿಯಲ್ಲಿ ಬೆರಳೆಣಿಕೆಯ ನಾಯಕರಿದ್ದಾರೆ. ಮುಂದಿನ ದಿನಗಳಲ್ಲಿ ಅವರೂ ರಾಜಕೀಯ ಪಕ್ಷಗಳನ್ನು ಸೇರುವ ಮೂಲಕ ಎಂಇಎಸ್ ಗೆ ಕೊನೆಯ ಮೊಳೆಗಳನ್ನು ಹೊಡೆಯಲಿದ್ದಾರೆ.
ಸರ್, ಜಡ್ಜಮೆಂಟ್ ಎಷ್ಟು ಗಂಟೆಗೆ ಬರುತ್ತದೆ? ಉತ್ತರಿಸಿ ಸುಸ್ತಾದ ವಕೀಲರು!!
https://pragati.taskdun.com/sir-what-time-will-the-judgment-come-lawyers-tired/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ