Advertisement -Home Add

ಸಾರ್ವಜನಿಕರಲ್ಲಿ ಡಾ.ಪ್ರಭಾಕರ ಕೋರೆ ಮನವಿ

ಕೊರೋನಾ ಎಲ್ಲಿಂದ, ಹೇಗೆ ಬರುತ್ತೆ ಗೊತ್ತಾಗಲ್ಲ, ಹುಷಾರಾಗಿರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೊರೋನಾ ಎಲ್ಲಿಂದ, ಯಾರಿಂದ, ಹೇಗೆ ಬರುತ್ತದೆ ಗೊತ್ತಾಗುವುದಿಲ್ಲ. ಹಾಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಕೋರಿದ್ದಾರೆ.

ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು, ವೈದ್ಯರು ಸೇರಿದಂತೆ ಯಾರನ್ನೂ ಮಹಾಮಾರಿ ಬಿಡುತ್ತಿಲ್ಲ. ಹಾಗಾಗಿ ಯಾರೂ ನಿರ್ಲಕ್ಷ್ಯ ವಹಿಸಬಾರದು. ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಮನೆಯಿಂದ ಹೊರಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕು. ಅನಿವಾರ್ಯ ಸಂದರ್ಭದಲ್ಲಿ ಹೊರಗೆ ಹೋಗಲೇ ಬೇಕಾದಲ್ಲಿ ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ವಿನಂತಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೋನಾ ನಿಯಂತ್ರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಅದು ಸಾಕಾಗುವುದಿಲ್ಲ. ಜನರು ತಾವೇ ಎಚ್ಚರಿಕೆ ವಹಿಸಬೇಕು. ಸರಕಾರದೊಂದಿಗೆ ಸಹಕರಿಸಬೇಕು. ಪ್ರತಿಯೊಬ್ಬರೂ ತಮ್ಮ ಎಚ್ಚರಿಕೆಯಮನ್ನು ತಾವೇ ತೆಗೆದುಕೊಂಡರೆ ವೈರಸ್ ಹರಡುವುದನ್ನು ನಿಯಂತ್ರಿಸಬಹುದು ಎಂದು ಅವರು ಹೇಳಿದ್ದಾರೆ.

ಕೆಎಲ್ಇ ಸಂಸ್ಥೆ ಬೆಳಗಾವಿಯಲ್ಲಿ ಬೃಹತ್ ಆಸ್ಪತ್ರೆ ನಡೆಸುತ್ತಿದೆ. ಕೊರೋನಾ ಮಹಾಮಾರಿ ಶುರುವಾಗುತ್ತಿದ್ದಂತೆ ಕೆಎಲ್ಇ ಸಂಸ್ಥೆ ತನ್ನ ಆಸ್ಪತ್ರೆಯಲ್ಲಿ ವಿಶೇಷ ಬೆಡ್ ಗಳನ್ನು ಸಿದ್ಧಪಡಿಸಿಟ್ಟುಕೊಂಡಿತ್ತು. ಆದರೆ ಸರಕಾರ ಮೊದಲು ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳಲು ಅನುಮತಿಯನ್ನೇ ನೀಡಿರಲಿಲ್ಲ. ಇದೀಗ ಸರಕಾರ ಅನುಮತಿ ನೀಡಿದೆ. ಹಾಗಾಗಿ ಕೆಎಲ್ ಇ ಆಸ್ಪತ್ರೆಯಲ್ಲಿ ಈಗಾಗಲೆ ಕೆಲವು ರೋಗಿಗಳಿಗೆ ಚಿಕಿತ್ಸೆ ನೀಡಿ, ಗುಣಪಡಿಸಿ ಮನೆಗೆ ಕಳುಹಿಸಲಾಗಿದೆ.

ಆಸ್ಪತ್ರೆಯ ಹಲವಾರು ವೈದ್ಯಕೀಯ ಸಿಬ್ಬಂದಿ ಕೂಡ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಕೊರೋನಾ ರೋಗಿಗಳ ಸಂಪರ್ಕಕ್ಕೆ ಬಂದಿರುವ ಕೆಲವರಿಗೆ ಸೋಂಕು ತಗುಲಿರುವ ಸಂಶಯವೂ ಇದೆ.

ಕೆಎಲ್ಇ ಆಸ್ಪತ್ರೆಯಲ್ಲಿ ಸುಮಾರು 150 ಬೆಡ್ ಗಳನ್ನು ಕೊರೋನಾ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಕೊರೋನಾ ವಿಶೇಷ ವಾರ್ಡ್ ಗಳನ್ನು ಪ್ರಭಾಕರ ಕೋರೆ 2-3 ದಿನದ ಹಿಂದೆ ಉದ್ಘಾಟಿಸಿದ್ದಾರೆ. ಕೊರೋನಾ ವಾರ್ಡ್ ಸೇರಿದಂತೆ ಆಸ್ಪತ್ರೆಯನ್ನೆಲ್ಲ ಸುತ್ತಾಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ತಾವೂ ಆದಷ್ಟು ಸಾರ್ವಜನಿಕರ ಸಂಪರ್ಕದಿಂದ ದೂರವುಳಿಯಲು ಪ್ರಯತ್ನಿಸುತ್ತಿದ್ದಾರೆ.

 

ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆ ಸೇವೆಗೆ ಸದಾ ಮುಂದೆ ನಿಲ್ಲುತ್ತದೆ. ಅದೇ ರೀತಿ ಈಗಲೂ ಕೊರೋನಾ ರೋಗಿಗಳಿಗಾಗಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನರೂ ಕೊರೋನಾ ಕುರಿತು ಎಚ್ಚರಿಕೆ ವಹಿಸಬೇಕು. ಆದಷ್ಟು ಮುಖತಃ ಭೇಟಿಯಾಗುವುದನ್ನು ಬಿಟ್ಟು ದೂರವಾಣಿಯಲ್ಲೇ ಮಾತನಾಡುವುದು ಒಳ್ಳೆಯದು

-ಡಾ.ಪ್ರಭಾಕರ ಕೋರೆ