P.V.Hegde Add

ಸುರೇಶ ಅಂಗಡಿ ಕುರಿತು ಡಾ.ಪ್ರಭಾಕರ ಕೋರೆ ವಿಶೇಷ ಲೇಖನ

ಸಜ್ಜನ ರಾಜಕಾರಣಿ ಸುರೇಶ ಅಂಗಡಿ

ಸಜ್ಜನ ರಾಜಕಾರಣಿ ಸುರೇಶ ಅಂಗಡಿ

ಡಾ.ಪ್ರಭಾಕರ ಕೋರೆ 

ನಾಡಿನ ಹೆಮ್ಮೆಯ ಸುಪುತ್ರರರು, ಸಜ್ಜನ ಹಾಗೂ ನಿಷ್ಠವಂತ ರಾಜಕಾರಣಿ, ರೈತಬಂಧು  ಸುರೇಶ ಅಂಗಡಿ ಅವರು ನಿಧನರಾಗಿ ನಾಲ್ಕೈದು ದಿನಗಳಾದವು. ಅವರ ಅಗಲಿಕೆ ಸಮಸ್ತ ನಾಡಿಗೆ ಮಾತ್ರವಲ್ಲ ದೇಶಕ್ಕೆ ತುಂಬಲಾರದ ದುಃಖವನ್ನು ತಂದಿತು.

ಶರಣರ ವಾಣಿಯಂತೆ ಲೇಸೆನಿಸಿಕೊಂಡು ಬದುಕಿದ  ಸುರೇಶ ಅಂಗಡಿಯವರು ಶರಣರ ಕಾಯಕ-ದಾಸೋಹ ತತ್ವ ಪ್ರತಿಪಾದಕರಾಗಿ, ಸರಳಜೀವಿಯಾಗಿ, ಆದರ್ಶ ಬದುಕನ್ನು ನಡೆಸಿದವರು. ಪುಟ್ಟ ಗ್ರಾಮದಿಂದ ಬಂದ ಅಂಗಡಿಯವರು ನಾಡು ದೇಶ ಹೆಮ್ಮೆ ಪಡುವಂತೆ ಕಾರ್ಯಮಾಡಿದರು. ಶರಣರನು ಮರಣದಲಿ ನೋಡಾ ಎಂಬ ನುಡಿ ಅಕ್ಷರಶಃ ಸತ್ಯ.

ಕೆಎಲ್‌ಇ ಸಂಸ್ಥೆಯ ಚೊಚ್ಚಲು ಅಂಗಸಂಸ್ಥೆ ಜಿ.ಎ.ಹೈಸ್ಕೂಲಿನ ವಿದ್ಯಾರ್ಥಿಯಾಗಿ, ಮುಂದೆ ಎಸ್‌ಎಸ್ ಸಮಿತಿ ಕಾಮರ್ಸ್ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಮುಂದೆ ರಾಜಾಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿಯನ್ನು ಪಡೆದರು. ಮುಂದೆ ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಪೂಜ್ಯ ಶಿವಬಸವ ಮಹಾಸ್ವಾಮೀಜಿಯವರ ಕೃಪಾಶೀರ್ವಾದದಿಂದ ಉದ್ಯಮವನ್ನು ಪ್ರಾರಂಭಿಸಿದ ಅವರು ಜಿಲ್ಲೆಯ ಒಬ್ಬ ಶ್ರೇಷ್ಠ ವಾಣಿಜ್ಯೋದ್ಯಮಿ ಎನಿಸಿಕೊಂಡರು.

ಪಕ್ಷ ಸಂಘಟನೆ: ಅವರು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕವಲ್ಲ, ವಿದ್ಯಾರ್ಥಿ ದೆಸೆಯಲ್ಲಿ ಸಂಘಟನಾ ಚತುರರಾಗಿದ್ದ ಅವರು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದರು. ಬೆಳಗಾವಿಯ ಜನಸಾಮಾನ್ಯರ ದನಿಯಾಗಿ ದೇಶ – ರಾಜ್ಯದ ಹಿರಿಯ ನಾಯಕರ ವಿಶ್ವಾಸ ಗಳಿಸಿದರು. ತಮ್ಮ ಜನಪರ ಸೇವೆಗಳಿಂದ ಪೂಜ್ಯ ನಾಗನೂರು ಡಾ.ಶಿವಬಸವ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ಜನಪ್ರೀತಿಯಿಂದ ಪಕ್ಷವನ್ನು ಸಂಘಟಿಸಿದರು. ಬೆಳಗಾವಿಯಲ್ಲಿ ಕಾಂಗ್ರೇಸನ ಪ್ರಾಬಲ್ಯ ಇರುವ ಸಂದರ್ಭದಲ್ಲಿಯೇ ಗಂಡುಮೆಟ್ಟಿದ ನೆಲೆ ಬೆಳಗಾವಿಯಲ್ಲಿ ಬಿಜೆಪಿಗೆ ಭದ್ರನೆಲೆಗಟ್ಟನ್ನು ರೂಪಿಸಿದರು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಅಹರ್ನಿಶಿ ಶ್ರಮಿಸಿದರು. ಅದರ ಫಲವೆಂಬಂತೆ ಅಂದು ನೆಟ್ಟ ಬೀಜ ಇಂದು ಹೆಮ್ಮರವಾಗಿ ತನ್ನ ರೆಂಬೆಕೊಂಬೆಗಳನ್ನು ಚಾಚಿ ಬೃಹದಾಕಾರವಾಗಿ ಬೆಳೆದುನಿಂತಿದೆ. ಇಡೀ ರಾಜ್ಯಕ್ಕೆ ಬಿಜೆಪಿ ಬಹುಮುಖ್ಯ ಪಾತ್ರವನ್ನು ನೀಡುವಂತೆ ಮಾಡಿದವರು ಸುರೇಶ ಅಂಗಡಿಯವರು. ಇಂದು ಬೆಳಗಾವಿ ಜಿಲ್ಲೆಯಲ್ಲಿ ೧೩ ಶಾಸಕರನ್ನು, ೨ ಲೋಕಸಭಾ ಸದಸ್ಯರನ್ನು, ಎಲ್ಲ ಸ್ಥಳೀಯ ಸದಸ್ಯರನ್ನು ಬಿಜೆಪಿ ಪಕ್ಷ ನಾಡಿಗೆ ರಾಷ್ಟ್ರಕ್ಕೆ ನೀಡಿದೆ. ಇದಕ್ಕೆ ಮೂಲ ಕಾರಣ ಸುರೇಶ ಅಂಗಡಿಯವರು ಎಂದರೆ ಅತೀಶಯೋಕ್ತಿಯಲ್ಲ. ೨೦೧೯ರಲ್ಲಿ ೪ನೇ ಬಾರಿಗೆ ಸಂಸತ್ ಪ್ರವೇಶಿಸಿ ಮೇ ೨೦೧೯ರಲ್ಲಿ ಅಂಗಡಿಯವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಸಚಿವರಾಗಿ ಸೇವೆ: ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಜನರ ಬಹುದಿನಗಳ ಕನಸನ್ನು ನನಸಾಗಿಸಿದ್ದರು. ರೈಲ್ವೆ ಸಚಿವರಾಗಿ ಅತ್ಯಂತ ಕ್ರಿಯಾಶೀಲರಾಗಿ ಕಾರ್ಯಮಾಡುತ್ತಿದ್ದರು. ರಾಜ್ಯ ಹಲವಾರು ಜನರು ರೈಲ್ವೆ ಸಚಿವರಾಗಿ ಹೋಗಿದ್ದಾರೆ ಅವರೆಲ್ಲರನ್ನು ಮೀರಿಸಿ ಅಲ್ಪಾವಧಿಯಲ್ಲಿ ಸೇವೆ ಸಲ್ಲಿಸಿದರು. ರೈಲ್ವೆ ಇಲಾಖೆಯ ಪ್ರತಿಯೊಂದು ಕಾಮಗಾರಿಯನ್ನು ಪರಿಶೀಲಿಸಿ ಕರ್ನಾಟಕಕ್ಕೆ ಒಲಿದು ಬರುವ ಎಲ್ಲ ಯೋಜನೆಗಳನ್ನು ತಂದಿದ್ದರು.

ಸುರೇಶ ಅಂಗಡಿಯವರು ಅನ್ಯಾಯದ ವಿರುದ್ಧ ಹೋರಾಡಿದ ನಾಯಕರು. ಅಷ್ಟೇ ಕಟ್ಟಾ ಹಿಂದೂಧರ್ಮದ ಪ್ರತಿಪಾದಕರಾಗಿದ್ದರು. ಹಿಂದೂಧರ್ಮವನ್ನು ಎತ್ತಿಹಿಡಿದರು. ವೀರಶೈವ ಲಿಂಗಾಯತ ಧರ್ಮಕ್ಕೂ ಅವರು ನೀಡಿದ ಕೊಡುಗೆ ಅಪಾರ ಹಾಗೂ ಅನುಪಮ ಎಂಬುದನ್ನು ಮರೆಯುವಂತಿಲ್ಲ.

ಕೆಎಲ್‌ಇ ಸಂಸ್ಥೆ: ಅಂತೆಯೇ ಅವರದು ಕೆಎಲ್‌ಇ ಸಂಸ್ಥೆಯೊಂದಿಗೂ ನಿಕಟ ಸಂಪರ್ಕ. ಕೆಎಲ್‌ಇ ಸಂಸ್ಥೆಯ ಜಿ.ಎ.ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯಾಗಿದ್ದ ಅವರು ಎಸ್.ಡಿ.ಇಂಚಲ, ಡಿ.ಎಸ್.ಕರ್ಕಿ ಮೊದಲಾದ ಗುರುಗಳನ್ನು ಮನಸಾರೆ ಸ್ಮರಿಸುತ್ತಿದ್ದರು. ಇತ್ತೀಚಿಗೆ ಅದೇ ಶಾಲೆಗೆ ಭೇಟಿ ನೀಡಿ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದರು. ಮಾತ್ರವಲ್ಲದೇ ಸಂಸ್ಥೆಯೊಂದಿಗೆ ನಿಕಟ ಸಂಪರ್ಕಹೊಂದಿದ್ದ ಅವರು ಕೆಎಲ್‌ಇ ಸಂಸ್ಥೆಯ ಅಸಂಖ್ಯ ಸಭೆ ಸಮಾರಂಭಗಳಿಗೆ ಸಾಕ್ಷಿಯಾಗಿದ್ದರು. ಸಂಸ್ಥೆಯ ಪ್ರಗತಿಯನ್ನು ಕಂಡು ಡಾ.ಪ್ರಭಾಕರ ಕೋರೆ ಹಾಗೂ ತಂಡವನ್ನು ಮತ್ತೆ ಮತ್ತೆ ಪ್ರಶಂಸಿಸುತ್ತಿದ್ದರು. ಕೋವಿಡ್ ಸಂದರ್ಭದಲ್ಲಿಯೇ ಕೆಎಲ್‌ಇ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿದ್ದ ಕೋವಿಡ್ ಸೆಂಟರ್‌ನ್ನು ಉದ್ಘಾಟಿಸಿದ್ದರು. ಕೆಎಲ್‌ಇ ಸಂಸ್ಥೆಯ ಹೋಟೆಲ್ ಮ್ಯಾನೇಜಮೆಂಟ್ ಕೋರ್ಸ್‌ನ್ನು ಪ್ರಾರಂಭಿಸಿದಾಗ ಅದನ್ನು ಉದ್ಘಾಟಿಸುತ್ತ ಸಂಸ್ಥೆಯ ನೂತನ ಪರಿಕಲ್ಪನೆಗಳನ್ನು ಅಭಿನಂದಿಸಿದ್ದರು. ಮಾನ್ಯ ನರೇಂದ್ರ ಮೋದಿಜಿಯವರು ಎರಡು ಸಲ ಸಂಸ್ಥೆಗೆ ಆಗಮಿಸಿದ್ದಾಗ ಅಂಗಡಿಯವರು ಅಷ್ಟೇ ವಿನಯದಿಂದ ನನ್ನ ಜೊತೆಯಾಗಿ ಸಂಸ್ಥೆಯ ಸದಸ್ಯನಂತೆ ಕಾರ್ಯನಿರ್ವಹಿಸಿದ್ದರು. ಅವರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಸಂಸ್ಥೆಯ ಮೇಲಿನ ಪ್ರೀತಿ, ನನ್ನೊಂದಿಗೆ ಅದೇ ಒಡನಾಟವನ್ನು ಮತ್ತಷ್ಟು ಗಟ್ಟಿಗೊಳಿಸಿದರು.

ನನ್ನ ಸಹೋದರ ಸಮಾನವಾಗಿದ್ದ ಸುರೇಶ ಅಂಗಡಿಯವರು ನಮ್ಮ ಮಧ್ಯೆ ಇಲ್ಲ. ಅವರು ಪಕ್ಷಕ್ಕಾಗಿ ಹಾಗೂ ಜನರಿಗಾಗಿ ಮಾಡಿರುವ ಸೇವೆಗಳು ನಿತ್ಯ ನೂತನವಾಗಿ, ಎಲ್ಲರ ಹೃದಯದಲ್ಲಿ ಹಸಿರಾಗಿವೆ. ಒಬ್ಬ ನಾಯಕ ತನ್ನ ಉತ್ತಮ ಹಾಗೂ ಆದರ್ಶ ಸೇವೆಗಳಿಂದ ಎಲ್ಲ ಕಾಲಕ್ಕೂ ಅಮರನಾಗಿರುತ್ತಾನೆ ಎಂಬ ನುಡಿಗೆ ಸುರೇಶ ಅಂಗಡಿಯವರು ಸಾಕ್ಷಿಯಾಗಿದ್ದಾರೆ. ಇಂತಹ ಸೋದರ ಸ್ನೇಹಿತನನ್ನು ಕಳೆದುಕೊಂಡು ಬಡವಾಗಿದ್ದೇವೆ. ಮಾನ್ಯ ಸುರೇಶ ಅಂಗಡಿಯವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

(ಲೇಖಕರು -ಕಾರ್ಯಾಧ್ಯಕ್ಷರು, ಕೆಎಲ್‌ಇ ಸಂಸ್ಥೆ, ಬೆಳಗಾವಿ)