Advertisement -Home Add
Crease wise New Design
Jarkiholi Parents Add

ಹೀರೋ ಆಗ್ತಾರಾ, ಜೀರೋ ಆಗ್ತಾರಾ ಲಕ್ಷ್ಮಣ ಸವದಿ?

ಅಭಿಮಾನಿಗಳ ಪೋಸ್ಟರ್ ಗೆ ಸ್ಪಷ್ಟನೆ, ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದ ಉಪಮುಖ್ಯಮಂತ್ರಿ

ಸಚಿವಸಂಪುಟದಿಂದಲೇ ಕೈ ಬಿಡ್ತಾರಾ ಯಡಿಯೂರಪ್ಪ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:  ರಾಜ್ಯದ ಮುಂದಿನ ಸಿಎಂ ಲಕ್ಷ್ಮಣ ಸವದಿ ಎಂದು ಸವದಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದು, ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಅವರು ಗೈರಾಗಿ ದೆಹಲಿಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಕರ್ನಾಟಕದ ಮುಂದಿನ ಸಿಎಂ ಸವದಿ ಎಂಬ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಅಭಿಮಾನಿಗಳು ಭಾರೀ ಚರ್ಚೆಗೆ ಕಾರಣರಾಗಿದ್ದರು. ಸದ್ಯ ಈ ಕುರಿತಂತೆ ಲಕ್ಷ್ಮಣ ಸವದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

‘ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯವಾದ ಪ್ರಚಾರ ಬೇಡ. ದೆಹಲಿಯಲ್ಲಿ ವರಿಷ್ಠರೊಂದಿಗಿನ ಭೇಟಿ ಪೂರ್ವ ನಿರ್ಧಾರಿತವಾಗಿದ್ದ ಕಾರ್ಯಕ್ರಮ ಅದರ ಬಗ್ಗೆ ಕಲ್ಪಿತ ವರದಿ ದಯವಿಟ್ಟು ಬೇಡ. ನನ್ನ ಕ್ಷೇತ್ರದ ಹಿತೈಷಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ದಯವಿಟ್ಟು ಆಧಾರ ರಹಿತ ಪೋಸ್ಟ್ ಗಳನ್ನು ಮಾಡದಿರಿ’ ಎಂದು ಮನವಿ ಮಾಡಿದ್ದಾರೆ.

‘ಕ್ಷೇತ್ರದ ಜನತೆ ಪೋಸ್ಟ್ ಗಳನ್ನು ಹಾಕಿದ್ದಾರೆ ಎನ್ನುತ್ತಾ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡದಿರುವಂತೆ ಮನವಿ ಮಾಡುತ್ತಿದ್ದೇನೆ. ಕೋವಿಡ್ ಸಮಸ್ಯೆಯನ್ನು ಎದುರಿಸಿ ಒಂದು ವರ್ಷ ಉತ್ತಮ ಆಡಳಿತ ನೀಡಿರುವ ನಾವೆಲ್ಲರೂ ಪಕ್ಷಕ್ಕೆ ನಿಷ್ಠರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರು’ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಬಿಸಿ ಬಿಸಿ ಚರ್ಚೆ

ರಾಜ್ಯ ರಾಜಕೀಯದಲ್ಲಿ ಏನೋ ನಡೆಯುತ್ತಿದೆ ಎನ್ನುವುದಕ್ಕೆ ಪುಷ್ಠಿ ನೀಡುವಂತಹ ಹಲವು ವಿದ್ಯಮಾನಗಳು ಕಳೆದ 3-4 ದಿನದಿಂದ ನಡೆಯುತ್ತಿದೆ. ಶಾಸಕರಲ್ಲದವರನ್ನು ಮಂತ್ರಿ ಮಾಡಿದ, ನಂತರ ಉಪಮುಖ್ಯಮಂತ್ರಿ ಮಾಡಿದ ಹೈ ಕಮಾಂಡ್ ಸವದಿ ಮೇಲೆ ವಿಶ್ವಾಸವಿಟ್ಟಿದ್ದಾರೆ ಎನ್ನುವುದಂತೂ ಸ್ಪಷ್ಟ.

ಹಾಗಾಗಿಯೇ ಈಗ ಅವರನ್ನು ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕರನ್ನಾಗಿ ಬೆಳೆಸಲು ಹೈಕಮಾಂಡ್ ಮುಂದಾಗಿದೆ ಎನ್ನುವ ಸುದ್ದಿಯನ್ನು ಪಕ್ಷದೊಳಗೆ ಯಾರೂ ಅಲ್ಲಗಳೆಯುವ ಧೈರ್ಯ ಮಾಡುತ್ತಿಲ್ಲ.  ಇದಕ್ಕೆ ಪುಷ್ಠಿ ನೀಡಿದ್ದು ಕರ್ನಾಟಕದಲ್ಲಿ ಬಿಜೆಪಿ ಸರಕಾರ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೇ ಸವದಿಯವರ ದೆಹಲಿ ಭೇಟಿ.

ಸವದಿ ಮೇಲೆ ಹೈಕಮಾಂಡ್ ಹೇಗೆ ಅಷ್ಟು ಪ್ರೀತಿ ತೋರಿಸುತ್ತಿದೆ ಎನ್ನುವ ಪ್ರಶ್ನೆ ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಮಟ್ಟದಲ್ಲಿ ಯಾರು ಒಪ್ಪಲಿ, ಬಿಡಲಿ, ಬಿಜೆಪಿಯಲ್ಲಿ ಹೈಕಮಾಂಡ್ ಹೇಳಿದ್ದನ್ನು ಒಪ್ಪಲೇ ಬೇಕು.

ಈಗ ಹೈಕಮಾಂಡ್ ಸವದಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ತಂದು ಕೂಡ್ರಿಸುವ  ಯೋಚನೆಯಲ್ಲಿದ್ದರೆ ರಾಜ್ಯ ರಾಜಕಾರಣದ ದಿಕ್ಕು ಒಂದಿಷ್ಟು ಬದಲಾವಣೆಯಾಗುವುದಂತೂ ನಿಶ್ಚಿತ. ಯಡಿಯೂರಪ್ಪ ಬೆಂಬಲಿತ ಶಾಸಕರು ಒಂದಿಷ್ಟು ಅಸಮಾಧಾನಗೊಳ್ಳಬಹುದು.

ಯಡಿಯೂರಪ್ಪ ಅವರನ್ನು ಒಪ್ಪದ ಎಲ್ಲ ಶಾಸಕರೂ ಲಕ್ಷ್ಮಣ ಸವದಿಯನ್ನು ಒಪ್ಪುತ್ತಾರೆ ಎನ್ನುವುದೂ ಕಷ್ಟ. ಲಕ್ಷ್ಮಣ ಸವದಿ ಮೂಲತಃ ಬಿಜೆಪಿಯವರಲ್ಲ. ಅವರು ಜನತಾಪರಿವಾರದಿಂದ ಬಂದವರು.  ಹಾಗಾಗಿ ಮೂಲ ಬಿಜೆಪಿಯವರಿಗೆ ಅವರ ಬಗೆಗೆ ಒಂದಿಷ್ಟು ಅಸಮಾಧಾನವಿದೆ. ಆದಾಗ್ಯೂ ಹೈಕಮಾಂಡ್ ವಿಶ್ವಾಸ ಗಳಿಸಿಕೊಂಡಿದ್ದಾರೆ ಎನ್ನುವುದು ಸ್ಫಷ್ಟ.

ಈ ಮಧ್ಯೆ, ಲಕ್ಷ್ಮಣ ಸವದಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಓಡಾಡುತ್ತಿರುವುದರಿಂದ ಅವರನ್ನು ಸಚಿವ ಸಂಪುಟದಿಂದಲೇ ಕೈ ಬಿಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನುವ ವದಂತಿಯೂ ಹರಡಿದೆ. ಹೈಕಮಾಂಡ್ ಒಂದೊಮ್ಮೆ ಸವದಿ ಪರವಾಗಿದ್ದರೆ ಯಡಿಯೂರಪ್ಪ ಸವದಿ ಅವರನ್ನು ಕೈ ಬಿಡುವಂತಹ ಧೈರ್ಯ ತೋರಿಸುತ್ತಾರೆಯೇ ಎನ್ನುವುದೂ ಪ್ರಶ್ನೆ.

ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ಸವದಿ ಗುಂಪಿಗೂ ಜಾರಕಿಹೊಳಿ ಮತ್ತು ಉಮೇಶ ಕತ್ತಿ ಗುಂಪಿಗೂ ಆಗುವುದಿಲ್ಲ. ರಮೇಶ ಜಾರಕಿಹೊಳಿಗಂತೂ ಸವದಿ ಕಂಡರೆ ಆಗುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರಕ್ಕಿಂತ ಹೆಚ್ಚು ಪ್ರಚಾರವನ್ನು ರಮೇಶ ಜಾರಕಿಹೊಳಿ ಸವದಿ ವಿರುದ್ಧ ಮಾಡಿದ್ದರು. ಅವರನ್ನು ಸೋಲಿಸಿ ಮಹೇಶ ಕುಮಟಳ್ಳಿ ಅವರನ್ನು ಗೆಲ್ಲಿಸುವುದರಲ್ಲಿ ಯಶಸ್ವಿಯೂ ಆಗಿದ್ದರು.

ಆದರೆ ನಂತರದ ಬೆಳವಣಿಗೆಯಲ್ಲಿ ಹೈಕಮಾಂಡ್ ಲಕ್ಷ್ಮಣ ಸವದಿಗೇ ಮಣೆ ಹಾಕಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. ಸೋತ ಸವದಿಯನ್ನು ಮಂತ್ರಿ ಮಾಡಿದಾಗಲೇ ಹುಬ್ಬೇರಿಸಿದವರು, ಉಪಮುಖ್ಯಮಂತ್ರಿ ಮಾಡಿದಾಗಲಂತೂ ಅಕ್ಷರಶಃ ಕುಸಿದೇ ಹೋದರು. ಇದೀಗ ಅವರನ್ನು ಸಿಎಂ ಮಾಡಲು ಹೈಕಮಾಂಡ್ ಹೊರಟಿದೆ ಎನ್ನುವ ಸುದ್ದಿಯಂತೂ ಹಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಏನಿದ್ದರೂ ಇಂದು ದೆಹಲಿಯಿಂದ ಆಗಮಿಸುತ್ತಿರುವ ಲಕ್ಷ್ಮಣ ಸವದಿ ಎಂತಹ ಸುದ್ದಿ ತರಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಲಕ್ಷ್ಮಣ ಸವದಿ ದೆಹಲಿ ಭೇಟಿ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ?

ದೆಹಲಿಗೆ ತೆರಳಿದ ಸಚಿವೆ ಶಶಿಕಲಾ ಜೊಲ್ಲೆ