Advertisement -Home Add

ಅಥಣಿ ಪಟ್ಟಣದಲ್ಲಿ ನೂತನ ಆರ್ಟಿಒ ಕಚೇರಿ ಉದ್ಘಾಟನೆ ನೆರವೇರಿಸಿದ ಸಾರಿಗೆ ಸಚಿವ

ಅಥಣಿ ಆರ್.ಟಿ.ಓ ಕಚೇರಿಯಲ್ಲಿ ನೂತನವಾಗಿ ವಾಹನ ನೋಂದಣಿ ಹಾಗೂ ಚಾಲನೆ ಪರವಾನಿಗೆ ಪತ್ರಗಳನ್ನು (ಸ್ಮಾರ್ಟ್ ಕಾರ್ಡ್) ವಾಹನ ಮಾಲೀಕರಿಗೆ ವಿತರಿಸಿದರು.

ಪ್ರಗತಿವಾಹಿನಿ ಸುದ್ದಿ, ಅಥಣಿ: ಅಥಣಿ, ಕಾಗವಾಡ, ಕುಡಚಿ ಮೂರು ತಾಲೂಕುಗಳಿಗೆ ಸೇರಿ ಅಥಣಿ ಪಟ್ಟಣದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ಉದ್ಘಾಟನೆ ನೆರವೇರಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಇದೆ ಸಂದರ್ಭದಲ್ಲಿ ಅಥಣಿ ಆರ್.ಟಿ.ಓ ಕಚೇರಿಯಲ್ಲಿ ನೂತನವಾಗಿ ವಾಹನ ನೋಂದಣಿ ಹಾಗೂ ಚಾಲನೆ ಪರವಾನಿಗೆ ಪತ್ರಗಳನ್ನು (ಸ್ಮಾರ್ಟ್ ಕಾರ್ಡ್) ವಾಹನ ಮಾಲೀಕರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಅಥಣಿ ಜನತೆ ಬಹುದಿನಗಳ ಬೇಡಿಕೆಯಾದ ಆರ್ ಟಿ ಓ ಕಚೇರಿ ಸ್ಥಾಪನೆಯಾಗಿದೆ. ಇದರಿಂದ ಅಥಣಿ, ಕಾಗವಾಡ, ಕುಡಚಿ ತಾಲೂಕಿನ ಜನರು ದೂರದ ಚಿಕ್ಕೋಡಿಗೆ ಹೋಗುವುದು ತಪ್ಪಿದಂತಾಗಿದೆ. ಇನ್ನು ಮುಂದೆ ವಾಹನ ಚಾಲನೆ ಪರವಾನಿಗೆ ಪತ್ರಗಳನ್ನು ಹಾಗೂ ಸಾರಿಗೆ ಇಲಾಖೆಯ ಸಂಭಂದಿಸಿದ ಎಲ್ಲ ದಾಖಲೆಗಳನ್ನು ಅಥಣಿ ಕಚೇರಿಯಲ್ಲಿ ನೀಡಲಾಗುತ್ತದೆ, ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಮನವಿ ಮಾಡಿಕೊಂಡರು. ಕರ್ನಾಟಕ ರಾಜ್ಯದಲ್ಲಿ ರಾಜಸ್ವ ಸಂಗ್ರಹಣೆ ಇಲಾಖೆಗಳಲ್ಲಿ ಸಾರಿಗೆ ಇಲಾಖೆಯು ಕೂಡ ಅತ್ಯಂತ ಪ್ರಮುಖವಾಗಿದೆ. ೨೦೨೦-೨೧ನೇ ಸಾಲಿಗಾಗಿ ಸಾರಿಗೆ ಇಲಾಖೆಗೆ ರೂಪಾಯಿ ೭೧೧೫ ಕೋಟಿ ರಾಜಸ್ವ ಗುರಿ ನಿಗದಿಪಡಿಸಲಾಗಿದೆ.
ರಾಜ್ಯದಲ್ಲಿ ಇದುವರೆಗೆ ೨ ಕೋಟಿ ೩೬ ಲಕ್ಷ ವಾಹನಗಳು ನೋಂದಣಿಯಾಗಿವೆ. ರಾಜ್ಯದಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ೬೬ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳು ಆಧುನಿಕ ತಂತ್ರಜ್ಞಾನಗಳಾದ ವಾಹನ-೪ ಹಾಗೂ ಸಾರಥಿ-೪ ಗಳನ್ನು ಹೊಂದಿದ್ದು ಇವುಗಳ ಸಹಾಯದಿಂದ ಕರ್ನಾಟಕ ಸಕಾಲ ಕಾಯ್ದೆಯಡಿಯಲ್ಲಿ ಇಪ್ಪತ್ನಾಲ್ಕು ಸೇವೆಗಳನ್ನು ಆನ್-ಲೈನ್ ಮೂಲಕ ಸಾರ್ವಜನಿಕರಿಗೆ ಹಾಗೂ ಪಾರದರ್ಶಕವಾಗಿ ಹಾಗೂ ತ್ವರಿತವಾಗಿ ನೀಡಲಾಗುತ್ತಿದೆ. ಸದರಿ ರಾಜಸ್ವ ಸಂಗ್ರಹಣೆಯನ್ನು ಆನ್-ಲೈನ್ ಮೂಲಕ ಖಜಾನೆ-೨ ತಂತ್ರಾಂಶದೊಂದಿಗೆ ಸಂಯೋಜಿಸಿ ರಾಜ್ಯದ ಬೊಕ್ಕಸಕ್ಕೆ ಹಣ ಸಂದಾಯವಾಗುವ ವಿನೂತನ ವ್ಯವಸ್ಥೆ ಕಲ್ಪಿಸಲಾಗಿದೆ. ಮೋಟಾರು ವಾಹನ ಕಾಯ್ದೆ ಹಾಗೂ ಅದರಡಿ ರಚಿತವಾದ ನಿಯಮಾವಳಿಗಳ ಉಲ್ಲಂಘನೆಗಾಗಿ ೨೦೧೯-೨೦ನೇ ಸಾಲಿನಲ್ಲಿ ೨೨,೮೬,೮೫೦ ವಾಹನಗಳನ್ನು ತಪಾಸಿಸಿ ತಪ್ಪಿತಸ್ಥ ವಾಹನಗಳ ಸಂಖ್ಯೆ : ೨,೬೩,೩೪೪ ರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ೧೦,೦೮೩ ವಾಹನಗಳನ್ನು ವಶಪಡಿಸಿಕೊಂಡು ತೆರಿಗೆ ಬಾಕಿ ವಸೂಲಾತಿ ಮಾಡಲಾಗಿದೆ.
ಸದರಿ ಪ್ರವರ್ತನ ಚಟುವಟಿಕೆಗಳಿಂದ ಒಟ್ಟು ತೆರಿಗೆ ರೂ  ೧೩೦ ಕೋಟಿಗಳಷ್ಟು ಹಾಗೂ ದಂಡದ ರೂಪದಲ್ಲಿ ರೂ  ೭೬.೦೯ ಕೋಟಿಗಳಷ್ಟು ಸಂಗ್ರಹಿಸಲಾಗಿದ್ದು, ಈ ಪ್ರವರ್ತನ ಚಟುವಟಿಕೆಗಳಿಂದ ಸಾರಿಗೆ ಇಲಾಖೆಗೆ ಒಟ್ಟು ೨೦೬.೦೯ ಕೋಟಿಗಳಷ್ಟು ರಾಜಸ್ವ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಅಥಣಿ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿ ೬೭ನೇ ದಾಗಿ ಪ್ರಾರಂಭವಾಗುತ್ತಿದ್ದು, ಇದು ಕೂಡ ಎಲ್ಲ ಕಛೇರಿಗಳಂತೆ ಆಧುನಿಕ ತಂತ್ರಜ್ಞಾನ ಹೊಂದಿದೆ. ಸದರಿ ಕಛೇರಿಗೆ ೨,೭೫,೦೦೦ ವಾಹನಗಳನ್ನು ಒಳಗೊಂಡಿದ್ದು ಸುಮಾರು ೨೫-೩೦ ಕೋಟಿಗಳಷ್ಟು ರಾಜಸ್ವ ಸಂಗ್ರಹಣೆ ಗುರಿ ಹೊಂದಿದೆ. ಈ ಕಛೇರಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಮೋಟಾರು ವಾಹನ ನಿರೀಕ್ಷಕರು, ಕಛೇರಿ ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿ ಸೇರಿ ಒಟ್ಟು ಹದಿನೈದು ಜನ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಸಚಿವ ಶ್ರೀಮಂತ ಪಾಟೀಲ, ಅಥಣಿ ಶಾಸಕ ಮಹೇಶ ಕುಮಠಳ್ಳಿ, ಕುಡಚಿ ಶಾಸಕ ಪಿ ರಾಜೀವ ಮಾತನಾಡಿದರು. ಈ ವೇಳೆ ಅಮರ ಪಾರ್ಥನಳ್ಳಿ, ಪುರುಶೋತ್ತಮ ಜೆ, ಮಾರುತಿ ಸಾಂಬ್ರಾಣಿ, ಎಸ್ ಜಿ ಜೋಶಿ ಸೇರಿದಂತೆ ಇತರರು ಹಾಜರಿದ್ದರು.

ಅಥಣಿಯಲ್ಲಿ ಎಆರ್ ಟಿಒ ಕಚೇರಿ ಉದ್ಘಾಟಿಸಿದ ಸವದಿ