Advertisement -Home Add

ಪ್ರಧಾನಿ ಮೋದಿ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ

ಕಡಾಡಿ ಸೇರಿದಂತೆ ಅರ್ಧಕ್ಕಿಂತ ಹೆಚ್ಚು ಜನರು ಮಾಸ್ಕ್ ಧರಿಸಿಲ್ಲ. ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ಸೂಚನೆ ಜನಸಾಮಾನ್ಯರಿಗೆ ಮಾತ್ರ ಅನ್ವಯವೇ? ಜನಪ್ರತಿನಿಧಿಗಳಿಗೆ ಅದು ಸಂಬಂಧವಿಲ್ಲವೆ?
 ಇಲ್ಲಿರುವ ಫೋಟೋ ನೋಡಿದರೆ ಮೋದಿ ಸೂಚನೆಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಲಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೆ ವಿನಂತಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದೂ ಹೇಳಿದ್ದಾರೆ. ಆದರೆ ಸ್ವತಃ ರಾಜ್ಯಸಭಾ ಸದಸ್ಯರೇ ಇಲ್ಲಿ ಮಾಸ್ಕ್ ನ್ನೂ ಧರಿಸಿಲ್ಲ, ಸಾಮಾಜಿಕ ಅಂತರವನ್ನೂ ಕಾಪಾಡಿಲ್ಲ. ಬಹುಶಃ ಮೋದಿ ಕೈ ಮುಗಿದರೆ ಸಾಕಾಗಲಿಕ್ಕಿಲ್ಲ, ಇವರ ಕಾಲಿಗೆ ಬಿದ್ದು ಕೇಳಿಕೊಳ್ಳಬೇಕೆನೋ…
ಹೊಸದಾಗಿ ರಾಜ್ಯಸಭಾ ಸದಸ್ಯರಾಗಿರುವ, ಅಷ್ಟೇ ಅಲ್ಲ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರೂ ಆಗಿರುವ ಈರಣ್ಣ ಕಡಾಡಿ ಅವರ ಈ ಕಾರ್ಯಕ್ರಮದಲ್ಲಿ ಮೋದಿಯವರ ಸೂಚನೆಗೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡಲಾಗಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜನಸಾಮಾನ್ಯರು ಮೋದಿ ಸೂಚನೆ ಉಲ್ಲಂಘನೆ ಮಾಡಿದ್ದರೆ ಕ್ಷಮಿಸಬಹುದಿತ್ತು. ಆದರೆ ರಾಜ್ಯಸಭಾ ಸದಸ್ಯ ಕಡಾಡಿಯವರೇ ಮಾಸ್ಕನ್ನು ಕೂಡ ಧರಿಸಿಲ್ಲ.
ಬಹುಶಃ ಅಧಿಕಾರ ಬಂದ ನಂತರ ತಮಗೆ ಈ ಸೂಚನೆಗಳೆಲ್ಲ ಅನ್ವಯಿಸುವುದಿಲ್ಲ, ಅದೇನಿದ್ದರೂ ಜನಸಾಮಾನ್ಯರಿಗೆ, ಸಾಮಾನ್ಯ ಕಾರ್ಯಕರ್ತರಿಗೆ ಎಂದು ಭಾವಿಸಿದ್ದಾರೋ ಗೊತ್ತಿಲ್ಲ.
ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಯುಕ್ತ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಜಾಗೃತ ಹನುಮಂತ ದೇವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ದರ್ಶನಾರ್ಶೀವಾದ ಪಡೆದ ಬಳಿಕ ಸ್ಥಳೀಯ ರೈತರಿಂದ ಕಡಾಡಿ ಸನ್ಮಾನ ಸ್ವೀಕರಿಸಿದ ಸಂದರ್ಭದ ಫೋಟೋ ಇದು.
ಇದರಲ್ಲಿ ಕಡಾಡಿ ಸೇರಿದಂತೆ ಅರ್ಧಕ್ಕಿಂತ ಹೆಚ್ಚು ಜನರು ಮಾಸ್ಕ್ ಧರಿಸಿಲ್ಲ. ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ.
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಂತರ ಕಡಾಡಿ ಒಂದಾದ ಮೇಲೊಂದರಂತೆ ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಒಂದು ಸರಕಾರವನ್ನು ಉರುಳಿಸಿ ಮತ್ತೊಂದು ಸರಕಾರವನ್ನು ಅಸ್ಥಿತ್ವಕ್ಕೆ ತರುವ ಶಕ್ತಿ ನಮ್ಮ ಜಿಲ್ಲೆಗಿದೆ ಎಂದು ಯಡಿಯೂರಪ್ಪ ಸರಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದ ಕಡಾಡಿ, ಬಾಲಚಂದ್ರ ಜಾರಕಿಹೊಳಿ ಜನಸಾಮಾನ್ಯರ ಮಧ್ಯೆ ಇರುವ ಏಕೈಕ ಶಾಸಕ ಎನ್ನುವ ಮೂಲಕ ಇತರ ಬಿಜೆಪಿ ಶಾಸಕರಿಗೆ ಮುಜುಗರವನ್ನುಂಟುಮಾಡುವಂತೆ ಮಾತನಾಡಿದ್ದರು.

ಸಂಕಷ್ಟಗಳನ್ನು ಅರಿತಿದ್ದೇನೆ

 ರೈತರ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಕಿಸಾನ ಸಮ್ಮಾನ್ ಯೋಜನೆ ಸೇರಿದಂತೆ ಹಲವಾರು ಸಹಾಯ, ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದೆ. ಸಾಮಾನ್ಯ ರೈತ ಕುಟುಂಬದಲ್ಲಿ ಜನಸಿದ ನಾನು ರೈತರ ಸಂಕಷ್ಟಗಳನ್ನು ಅರಿತಿದ್ದೇನೆ. ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಈರಣ್ಣ ಕಡಾಡಿ ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
    ಪರಪ್ಪ ಕಡಾಡಿ, ಶ್ರೀಶೈಲ ತುಪ್ಪದ, ಪ್ರಭು ಕಡಾಡಿ, ಕೃಷ್ಣಪ್ಪ ಮುಂಡಗಿನಾಳ, ಕಾಡೇಶ ಗೊರೋಶಿ, ಮಹಾದೇವ ಮದಬಾವಿ, ರಾಮಲಿಂಗ ಬಿ.ಪಾಟೀಲ, ಅಡಿವೆಪ್ಪ ಕುರಬೇಟ, ಪರಶುರಾಮ ಮಕ್ಕಳಗೇರಿ, ಪರಪ್ಪ ಮಳವಾಡ, ರಾಜಪ್ಪ ಗೋಸಬಾಳ, ಅರ್ಜುನ ಚಿಕ್ಕೋಡಿ, ಶಂಕರ ಕಡಾಡಿ, ಸಹದೇವ ಹೆಬ್ಬಾಳ, ಸ್ಥಳೀಯ ರೈತರು, ಹಿರಿಯ ನಾಗರಿಕರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.
ಸಂಬಂಧಿಸಿದ ಸುದ್ದಿಗಳು –

ರಾಜ್ಯಸಭಾ ಸದಸ್ಯರಾಗಿ ಪ್ರಮಾಣಪತ್ರ ಸ್ವೀಕರಿಸಿದ ನಂತರ ಪ್ರಗತಿವಾಹಿನಿಗೆ ಕಡಾಡಿ ಸಂದರ್ಶನ

ಬಾಲಚಂದ್ರ ಜಾರಕಿಹೊಳಿ ಜನರ ಮಧ್ಯೆ ಇರುವ ಏಕೈಕ ಶಾಸಕ – ಈರಪ್ಪ ಕಡಾಡಿ

ಆಯ್ಕೆಗೆ 12 ಗಂಟೆ ಮೊದಲು ಕಡಾಡಿ ಪ್ರಗತಿವಾಹಿನಿ ಜೊತೆ ಮಾತನಾಡಿದ್ದೇನು?